ಸಾರಾಂಶ
ಕರಾವಳಿಯ ಜನಜೀವನ ಅಧ್ವಾನವಾಗುವುದಕ್ಕೆ ದ್ವೇಷ ಭಾಷಣಗಳೇ ಕಾರಣ, ಆದ್ದರಿಂದ ಈ ದ್ವೇಷ ಭಾಷಣ ಮಾಡುವವರು ಯಾವ ಧರ್ಮದವರೇ ಆಗಿರಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಕ್ಕೆ ಸಂಬಂಧಪಟ್ಟ ಕಾಯ್ದೆಯ ತಿದ್ದುಪಡಿಗೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುತ್ತದೆ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ವಿ. ಆರ್. ಸುದರ್ಶನ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿಕರಾವಳಿಯ ಜನಜೀವನ ಅಧ್ವಾನವಾಗುವುದಕ್ಕೆ ದ್ವೇಷ ಭಾಷಣಗಳೇ ಕಾರಣ, ಆದ್ದರಿಂದ ಈ ದ್ವೇಷ ಭಾಷಣ ಮಾಡುವವರು ಯಾವ ಧರ್ಮದವರೇ ಆಗಿರಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಕ್ಕೆ ಸಂಬಂಧಪಟ್ಟ ಕಾಯ್ದೆಯ ತಿದ್ದುಪಡಿಗೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುತ್ತದೆ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ವಿ. ಆರ್. ಸುದರ್ಶನ್ ಹೇಳಿದ್ದಾರೆ.
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ಸಾಮಾಜಿಕ ಸೌಹಾರ್ದತೆಯ ಸತ್ಯಶೋಧನೆಗೆ ಕೆಪಿಸಿಸಿಯಿಂದ ನಿಯೋಜನಗೊಂಡಿರುವ ತಂಡದಿಂದ ಉಡುಪಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಕರಾವಳಿಯಲ್ಲಿ ಉತ್ತಮ ಶಿಕ್ಷಣ, ಆರ್ಥಿಕ ಪರಿಸ್ಥಿತಿ ಚೆನ್ನಾಗಿದ್ದರೂ, ಸರ್ಕಾರ ನೀಡಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡಿದ್ದರೂ, ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿಗಳಾಗುತ್ತಿಲ್ಲ. ಇದಕ್ಕೆ ಕಾರಣ ಇಲ್ಲಿ ಕೆಟ್ಟಿರುವ ಕೋಮು ಸೌಹಾರ್ಧ ವಾತಾವರಣ, ಇದರಿಂದ ಇಲ್ಲಿ ಹೂಡಿಕೆದಾರರು ಬರುತ್ತಿಲ್ಲ, ಆದ್ದರಿಂದ ಆಪೇಕ್ಷಿತ ಅಭಿವೃದ್ಧಿಯಾಗಿಲ್ಲ ಎಂದು ತಮ್ಮ ತಂಡದ ಅಧ್ಯಯನದ ವಿವರ ನೀಡಿದರು.ಅಲ್ಲದೆ, ಒಂದು ಜಿಲ್ಲೆಯಲ್ಲಿ ಎಲ್ಲಾ ಶಾಸಕರು ಒಂದೇ ಪಕ್ಷದವರಾಗಿದ್ದರೇ ಅಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತವೆ. ಇತರ ಪಕ್ಷಗಳ ಶಾಸಕರೂ ಇದ್ದರೆ ಅಭಿವೃದ್ಧಿಯಲ್ಲಿ ಸಮತೋಲನ ಇರುತ್ತದೆ, ಆದ್ದರಿಂದ ಶಾಸಕರನ್ನು ಆರಿಸುವಲ್ಲಿ ಜನತೆ ಪರಿವರ್ತನೆ ಮಾಡಬೇಕು ಎಂದರು.ಈಗಾಗಲೇ ನಿಯೋಗವು ದ.ಕ. ಜಿಲ್ಲೆಯ ಅಧ್ಯಯನದ ನಂತರ ಮುಖ್ಯಮಂತ್ರಿ ಅವರಿಗೆ ಮಧ್ಯಂತರ ವರದಿ ನೀಡಲಾಗಿದೆ. ಅದರಂತೆ ಮುಖ್ಯಮಂತ್ರಿ ಸೂಚನೆಯಂತೆ ಗೃಹಸಚಿವರು ಕರಾವಳಿಗೆ ಕೋಮವಾದ ನಿಯಂತ್ರಣ ಕಾರ್ಯಪಡೆಯನ್ನು ರಚಿಸಿದ್ದಾರೆ. ಮುಂದೆ ಇನ್ನೂ ಕೆಲವು ಶಿಫಾರಸುಗಳನ್ನೊಳಗೊಂಡ ಪೂರ್ಣ ಪ್ರಮಾಣದ ವರದಿ ನೀಡಲಿದ್ದೇವೆ ಎಂದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ನಾಸೀರ್ ಹುಸೇನ್ ಮಾತನಾಡಿ, ಕರಾವಳಿಯನ್ನು ಯಾವುದೇ ಧರ್ಮ ಕೋಮವಾದದ ಪ್ರಯೋಗಾಲಯ ಆಗಬಾರದು. ಇಲ್ಲಿ ಅತೀಯಾಗಿರುವ ಮಾದಕ ದ್ರವ್ಯ ಮಾಫಿಯ, ಮರಳು ಮಾಫಿಯಾ , ಗಣಿ ಮಾಫಿಯಾ, ಜೂಜು ದಂಧೆಗಳನ್ನು ಸಂಪೂರ್ಣ ನಿಯಂತ್ರಿಸಬೇಕು, 20 - 30 ವರ್ಷಗಳ ಹಿಂದೆ ಇಲ್ಲಿದ್ದ ಸೌಹಾರ್ದಯುತ ವಾತಾವರಣವನ್ನು ಪುನಃ ಸ್ಥಾಪಿಸಲು ಅಗತ್ಯ ಕ್ರಮಕ್ಕೆ ಸರ್ಕಾರಕ್ಕೆ ತಕ್ಷಣದ ಮತ್ತು ದೀರ್ಘಕಾಲೀನ ಕ್ರಮಗಳ ಬಗ್ಗೆ ಶಿಫಾರಸು ಮಾಡಲಾಗುತ್ತದೆ ಎಂದರು.ಮಾಜಿ ಸಂಸದ ಕೆ. ಜಯಪ್ರಕಾಶ ಹೆಗ್ಡೆ ಮಾತನಾಡಿ, ಸರ್ಕಾರ ಸ್ಥಾಪಿಸಿರುವ ಕೋಮುವಾದ ನಿಯಂತ್ರಣ ಕಾರ್ಯಪಡೆ ಒಂದು ಧರ್ಮದ ವಿರುದ್ಧ ಅಲ್ಲ, ಅದು ಕೋಮು ಸೌಹಾರ್ದ ಕೆಡಿಸುವವರು ಯಾವ ಧರ್ಮದವರೇ ಆಗಲಿ ಎಲ್ಲರ ಮೇಲೂ ಶಿಕ್ಷೆಯಾಗುತ್ತದೆ, ಈ ಬಗ್ಗೆ ತಪ್ಪು ಗ್ರಹಿಕೆ ಬೇಡ ಎಂದರು.
ನಿಯೋಗದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ ಮತ್ತು ಸ್ಥಳೀಯ ಕಾಂಗ್ರೆಸ್ ನಾಯಕರಾದ ಅಶೋಕ್ ಕೊಡವೂರು, ಎಂ.ಎ.ಗಪೂರ್, ಕಿಶನ್ ಹೆಗ್ಡೆ ಕೊಳ್ಕೆಬೈಲು, ಉದಯಕುಮಾರ್ ಶೆಟ್ಟಿ ಮುನಿಯಾಲು ಇದ್ದರು.