ಒಳ ಮೀಸಲು ತಿದ್ದುಪಡಿಗೆ ಕೇಂದ್ರಕ್ಕೆ ಶಿಫಾರಸ್ಸು: ಬಂಜಾರ ಸಂಘ ಖಂಡನೆ

| Published : Feb 01 2024, 02:00 AM IST

ಒಳ ಮೀಸಲು ತಿದ್ದುಪಡಿಗೆ ಕೇಂದ್ರಕ್ಕೆ ಶಿಫಾರಸ್ಸು: ಬಂಜಾರ ಸಂಘ ಖಂಡನೆ
Share this Article
  • FB
  • TW
  • Linkdin
  • Email

ಸಾರಾಂಶ

ಹೊನ್ನಾಳಿ ಪಟ್ಟಣದಲ್ಲಿ ಒಳಮೀಸಲಾತಿ ಅನುಚ್ಛೇದ 341ರ ತಿದ್ದುಪಡಿ ಶಿಫಾರಸ್ಸು ಕೂಡಲೇ ರಾಜ್ಯ ಸರ್ಕಾರರ ಹಿಂಪಡೆಯಬೇಕೆಂದು ಆಗ್ರಹಿಸಿ ತಾಲೂಕು ಬಂಜಾರ ಸಂಘದ ವತಿಯಿಂದ ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿ, ಎ.ಸಿ.,ಹುಲ್ಲುಮನಿ ತಿಮ್ಮಣ್ಣ ಅವರಿಗೆ ಮನವಿ ಸಲ್ಲಿಸಿದರು.

ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಬಂಜಾರ ಸಂಘದ ವತಿಯಿಂದ ಪ್ರತಿಭಟನೆ । ಸಂವಿಧಾನದ 341 ಅನುಚ್ಛೇದ

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪರಿಶಿಷ್ಟ ಜಾತಿಗಳ ವರ್ಗೀಕರಣ (ಒಳ ಮೀಸಲಾತಿ) ಕುರಿತು ಭಾರತ ಸಂವಿಧಾನದ ಅನುಚ್ಛೇದ 341ಕ್ಕೆ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ತಾಲೂಕು ಬಂಜಾರ ಸಂಘದ ವತಿಯಿಂದ ಬುಧವಾರ ಪಟ್ಣದ ಟಿ.ಬಿ.ವೃತ್ತದಿಂದ ಪ್ರತಿಭಟನೆ ಮೆರವಣಿಗೆ ನಡೆಸಿ ನಂತರ ತಾಲೂಕು ಕಚೇರಿಗೆ ಆಗಮಿಸಿ ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಲ್ಲ ಅವರ ಮೂಲಕ ಸರ್ಕಾಕ್ಕೆ ಮನವಿ ಪತ್ರ ಸಲ್ಲಿಸಿದರು.ಬಂಜಾರ ಸಮುದಾಯದ ಮುಖಂಡ ಮಾರುತಿ ನಾಯ್ಕ ಮಾತನಾಡಿ, ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳ ವರ್ಗೀಕರಣ (ಒಳ ಮೀಸಲಾತಿ) ಕುರಿತು ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದು, ಇದರಿಂದ ಬಂಜಾರ, ಭೋವಿ, ಕೊರಚ ಮತ್ತು ಕೊರಮ ಸಮುದಾಯಗಳಿಗೆ ತೀವ್ರ ಅನ್ಯಾಯವಾಗಲಿದೆ ಎಂದು ಹೇಳಿದರು. ಒಂದು ಕಡೆ ಎಸ್ಸಿ, ಎಸ್ಟಿ ಜನ ಸಮುದಾಯದ ಹಿತ ಕಾಪಾಡುತ್ತೇವೆ ಎಂದು ಹೇಳುವ ರಾಜ್ಯ ಸರ್ಕಾರದ ಈ ನಡವಳಿ ಇಡೀ ಬಂಜಾರ ಸಮುದಾಯ ಹಿತದ ವಿರುದ್ಧವಾಗಿದ್ದು, ನಮ್ಮ ಬಂಜಾರ ಸಂಘವು ಇದನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು. ಅನುಚ್ಛೇದ 341ಕ್ಕೆ ತಿದ್ದುಪಡಿ ತರುವುದರಿಂದ ಶತಮಾನಗಳಿಂದ ಸೌಲಭ್ಯಗಳಿಂದ ವಂಚಿತರಾಗಿರುವ ಬಂಜಾರ, ಭೋವಿ, ಕೊರಚ, ಕೊರಮ ಜನಾಂಗಕ್ಕೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ಕ್ಷೇತ್ರಗಳಲ್ಲಿ ತುಂಬಾ ಅನ್ಯಾಯವಾಗುತ್ತದೆ. ಅನುಚ್ಚೇದ 341ಕ್ಕೆ ತಿದ್ದುಪಡಿಗಾಗಿ ಮಾಡಿರುವ ಶಿಫಾರಸ್ಸು ಯಾವುದೇ ಸದ್ದುದ್ದೇಶದಿಂದ ಕೂಡಿಲ್ಲ, ಅದ್ದರಿಂದ 341ಕ್ಕೆ ತಿದ್ದುಪಡಿ ಮಾಡಲು ಭಾರತ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವ ನಡಾವಳಿಯನ್ನು ರಾಜ್ಯ ಸರ್ಕಾರ ಕೂಡಲೇ ಹಿಂಪಡೆಯಬೇಕು ಎಂದು ಬಂಜಾರ ಸಮುದಾಯ ಒತ್ತಾಯಿಸುತ್ತದೆ ಹಾಗೂ ಈ ಕುರಿತು ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು.ಈ ವೇಳೆ ತಾಲೂಕು ಬಂಜಾರ ಸಂಘದ ಅಧ್ಯಕ್ಷ ಅಂಜುನಾಯ್ಕ, ಡಿ. ಮಂಜುನಾಯ್ಕ, ಕುಬೇರ ನಾಯ್ಕ, ಸುರೇಂದ್ರ ನಾಯ್ಕ ಅವರು ಮಾತನಾಡಿದರು. ಅನೇಕ ಮುಖಂಡರುಗಳು ಇದ್ದರು.31ಎಚ್.ಎಲ್.ಐ4: ಪಟ್ಟಣದಲ್ಲಿ ಒಳಮೀಸಲಾತಿ ಅನುಚ್ಛೇದ 341ರ ತಿದ್ದುಪಡಿ ಶಿಫಾರಸ್ಸು ಕೂಡಲೇ ರಾಜ್ಯ ಸರ್ಕಾರರ ಹಿಂಪಡೆಯಬೇಕೆಂದು ಆಗ್ರಹಿಸಿ ತಾಲೂಕು ಬಂಜಾರ ಸಂಘದ ವತಿಯಿಂದ ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿ, ಎ.ಸಿ.,ಹುಲ್ಲುಮನಿ ತಿಮ್ಮಣ್ಣ ಅವರಿಗೆ ಮನವಿ ಸಲ್ಲಿಸಿದರು.