ಕನ್ನಡಪ್ರಭ ವಾರ್ತೆ ಮಂಡ್ಯ
ತಮಿಳುನಾಡಿಗೆ ನಿತ್ಯ ೧೨ ಸಾವಿರ ಕ್ಯುಸೆಕ್‌ನಂತೆ ೧೫ ದಿನಗಳವರೆಗೆ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಮತ್ತೆ ಶಿಫಾರಸು ಮಾಡಿರುವುದು ರಾಜ್ಯದ ಕಾವೇರಿ ಕಣಿವೆ ರೈತರನ್ನು ತೀವ್ರ ಆತಂಕಕ್ಕೆ ದೂಡುವಂತೆ ಮಾಡಿದೆ.ಸಮಿತಿಯ ಶಿಫಾರಸಿನಂತೆ ತಮಿಳುನಾಡಿಗೆ ನೀರು ಹರಿಸಿದರೆ ೧೫ ದಿನದಲ್ಲಿ 16 ಟಿಎಂಸಿ ನೀರು ಖಾಲಿಯಾಗಲಿದೆ. ಇದರಿಂದ ಒಂದು ಬೆಳೆ ಬೆಳೆಯುವುದಕ್ಕೂ ನೀರು ಸಿಗದೇ ಹೋಗಬಹುದೆಂಬ ಭೀತಿ ರೈತ ಸಮುದಾಯವನ್ನು ಆವರಿಸಿದೆ.
ಕಳೆದ ಜು.೨೮ರಂದು ಕಾವೇರಿ ನೀರು ನಿಯಂತ್ರಣ ಸಮಿತಿ ತಮಿಳುನಾಡಿಗೆ ನಿತ್ಯ ೩,೫೦೦ ಕ್ಯುಸೆಕ್‌ನಂತೆ ೧೫ದಿನ ನೀರು ಹರಿಸುವಂತೆ ಶಿಫಾರಸು ಮಾಡಿತ್ತು. ಆ ಸಮಯದಲ್ಲಿ ಇನ್ನೂ ಮಳೆಯಾಗಿರಲಿಲ್ಲ. ಸಮಿತಿ ಶಿಫಾರಸು ಮಾಡಿದ ನಂತರದ ದಿನಗಳಲ್ಲಿ ಕಾವೇರಿ ಕಣಿವೆ ವ್ಯಾಪ್ತಿಯಲ್ಲಿ ಬಿದ್ದ ಮಳೆಯ ಪರಿಣಾಮ ಒಂದಷ್ಟು ನೀರು ಅಣೆಕಟ್ಟೆಯನ್ನು ಸೇರಿಕೊಂಡಿತು. ಆದರೆ, ಈಗ ಆ ನೀರನ್ನೂ ಕಸಿದುಕೊಳ್ಳುವಂತಹ ಶಿಫಾರಸನ್ನು ನೀರಾವರಿ ಸಲಹಾ ಸಮಿತಿ ಮಾಡಿರುವುದು ಈ ಭಾಗದ ರೈತರ ದುರದೃಷ್ಟವೆನಿಸಿದೆ.ತಮಿಳುನಾಡಿಗೆ ಈವರೆಗೆ ಕಬಿನಿ ಮತ್ತು ಕೆಆರ್‌ಎಸ್‌ನಿಂದ ೧೦ ಟಿಎಂಸಿಯಷ್ಟು ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ. ಇಷ್ಟಕ್ಕೂ ತೃಪ್ತಿಯಾಗದ ತಮಿಳುನಾಡು ಮಳೆ ಕೊರತೆಯ ನಡುವೆಯೂ ನೀರು ಬಿಡುಗಡೆಗೆ ಆಗ್ರಹಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಗುರುವಾರ ಅರ್ಜಿಯು ವಿಚಾರಣೆಗೆ ಬರಲಿದೆ. ನೀರು ನಿಯಂತ್ರಣ ಸಮಿತಿ ಹಾಗೂ ನೀರು ನಿರ್ವಹಣಾ ಪ್ರಾಧಿಕಾರ ನೀಡಿದ ಆದೇಶಗಳನ್ನೇ ಸುಪ್ರೀಂಕೋರ್ಟ್ ಎತ್ತಿ ಹಿಡಿಯುವುದರಿಂದ ನ್ಯಾಯಾಲಯ ನಮಗೆ ನ್ಯಾಯ ನೀಡುತ್ತದೆಂಬ ನಿರೀಕ್ಷೆಯನ್ನು ಇಟ್ಟುಕೊಳ್ಳುವಂತಿಲ್ಲ. ಹಾಗಾಗಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡಿ, ಇಲ್ಲಿನ ರೈತರ ಬೆಳೆಗಳಿಗೂ ನೀರು ನೀಡುವ ಸವಾಲು ರಾಜ್ಯಸರ್ಕಾರದ ಮುಂದಿದೆ.
ಕೆಆರ್‌ಎಸ್ ಜಲಾಶಯದ ಗರಿಷ್ಠ ಮಟ್ಟ ೧೨೪.೮೦ ಅಡಿ ಇದ್ದು, ಪ್ರಸ್ತುತ ೧೦೯.೧೮ ಅಡಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ ೮೩೫೭ ಕ್ಯುಸೆಕ್ ನೀರು ಹರಿದುಬರುತ್ತಿದ್ದು, ೨೩೨೫ ಕ್ಯುಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ. ಅಣೆಕಟ್ಟೆಯಲ್ಲಿ ೩೦.೯೦೫ ಟಿಎಂಸಿ ಅಡಿ ನೀರಿದ್ದರೂ ಅದರಲ್ಲಿ ಬಳಕೆಗೆ ಸಿಗುವುದು ೨೨.೫೨೬ ಟಿಎಂಸಿ ಅಡಿ ಮಾತ್ರವಾಗಿದೆ.
ಕಬಿನಿ ಜಲಾಶಯ ಭರ್ತಿಯ ಹಂತದಲ್ಲಿದ್ದು, ಜಲಾಶಯಕ್ಕೆ ೮ ಸಾವಿರ ಕ್ಯುಸೆಕ್‌ನಷ್ಟು ಒಳಹರಿವಿದ್ದು, ೭ ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯಲ್ಲಿ ೧೫.೭೮೫ ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಾಗಿದೆ. ಹೇಮಾವತಿ ಜಲಾಶಯ ಇನ್ನೂ ಭರ್ತಿಯಾಗಿಲ್ಲ. ಹಾರಂಗಿ ಜಲಾಶಯ ಭರ್ತಿಯಾಗಿದ್ದರೂ ೪ ಸಾವಿರ ಕ್ಯುಸೆಕ್ ನೀರು ಮಾತ್ರ ಕೆಆರ್‌ಎಸ್ ಕಡೆಗೆ ಹರಿದುಬರುತ್ತಿದೆ. ಅಣೆಕಟ್ಟೆಯಲ್ಲಿ ೭.೮೨೬ ಟಿಎಂಸಿ ಅಡಿಯಷ್ಟು ನೀರು ಮಾತ್ರ ಸಂಗ್ರಹವಾಗಿದೆ.
ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸಿಗೆ ರಾಜ್ಯಸರ್ಕಾರ ಮಣಿಯದಿದ್ದರೂ ಪ್ರಾಧಿಕಾರ ಮತ್ತು ಸುಪ್ರೀಂಕೋರ್ಟ್ ಆದೇಶಕ್ಕೆ ತಲೆಬಾಗಲೇ ಬೇಕಿದೆ. ಇದುವರೆಗೂ ನ್ಯಾಯಾಲಯದ ಆದೇಶವನ್ನು ಎಲ್ಲಾ ಸರ್ಕಾರಗಳೂ ಚಾಚೂತಪ್ಪದೆ ಪಾಲಿಸುತ್ತಲೇ ಬಂದಿವೆ. ಹೀಗಾಗಿ ಕಬಿನಿ ಮತ್ತು ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುವುದು ರಾಜ್ಯಸರ್ಕಾರಕ್ಕೆ ಅನಿವಾರ್ಯವಾಗಲಿದೆ. ಈ ಸಮಯದಲ್ಲಿ ರಾಜ್ಯ ಕಾವೇರಿ ಕಣಿವೆ ರೈತರ ಕೂಗಿಗೆ ಸರ್ಕಾರದ ಸ್ಪಂದನೆ ಸಿಗುವ ಸಾಧ್ಯತೆಗಳು ಕ್ಷೀಣಿಸಿವೆ.ಜು.೩೦ ರಿಂದ ಸುರಿದ ಮಳೆಯಿಂದ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಕಳೆದ ೧೩ ದಿನಗಳಲ್ಲಿ ೯೨.೩೭ ಅಡಿಯಿಂದ ೧೦೯.೧೮ ಅಡಿಯವರೆಗೆ ತಲುಪಿದೆ. ಸುಮಾರು ೧೭ ಅಡಿಯಷ್ಟು ಅಡಿಯಷ್ಟು ನೀರು ಭರ್ತಿಯಾಗಿ ೧೩ ಟಿಎಂಸಿಯಷ್ಟು ನೀರು ಸಂಗ್ರಹವಾಗಿತ್ತು. ಇದರಿಂದ ಅಲ್ಪಾವಧಿ ಭತ್ತದ ಬೆಳೆ ಬೆಳೆಯುವುದಕ್ಕೆ ನೀರು ಸಿಗಬಹುದೆಂಬ ಆಶಾಭಾವನೆ ರೈತರಲ್ಲಿತ್ತು. ಇದೀಗ ಕಾವೇರಿ ನೀರು ನಿಯಂತ್ರಣ ಸಮಿತಿ ಮತ್ತೆ ತಮಿಳುನಾಡಿಗೆ ನಿತ್ಯ ೧೨ ಸಾವಿರ ಕ್ಯುಸೆಕ್ ನೀರಿನಂತೆ ೧೫ ದಿನ ಹರಿಸುವಂತೆ ಆದೇಶಿಸಿರುವುದು ರೈತರ ಆಶಾಗೋಪುರವನ್ನು ಗಾಳಿಗೋಪುರವನ್ನಾಗಿಸಿದೆ.ತಮಿಳುನಾಡಿಗೆ ನೀರು ಹರಿಸದಂತೆ ನಿರ್ಧರಿಸಲಿ: ಸಚ್ಚಿದಾನಂದ
ಕನ್ನಡಪ್ರಭ ವಾರ್ತೆ, ಮಂಡ್ಯಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡಿಗೆ ಮುಂದಿನ ಹದಿನೈದು ದಿನ ಪ್ರತಿನಿತ್ಯ ೧೨ ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸು ಮಾಡಿರುವುದು ಖಂಡನೀಯ. ರಾಜ್ಯದ ರೈತರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಯಾವುದೇ ಕಾರಣಕ್ಕೂ ತ.ನಾಡಿಗೆ ನೀರು ಹರಿಸದಂತೆ ರಾಜ್ಯಸರ್ಕಾರ ನಿರ್ಧರಿಸಬೇಕು ಎಂದು ಶ್ರೀರಂಗಪಟ್ಟಣ ಕ್ಷೇತ್ರದ ಬಿಜೆಪಿ ಯುವ ನಾಯಕ ಇಂಡುವಾಳು ಸಚ್ಚಿದಾನಂದ ಆಗ್ರಹಿಸಿದ್ದಾರೆ.
ಈ ವರ್ಷ ಮುಂಗಾರು ಸಂಪೂರ್ಣ ಕೈಕೊಟ್ಟಿದೆ. ಜಿಲ್ಲೆಯಲ್ಲಿ ಬರೋಬರಿ ೧೮೯ ಕೆರೆಗಳಲ್ಲಿ ನೀರಿಲ್ಲ ಹಾಗೂ ಕೇವಲ ಶೇ.೨೦.೭ ರಷ್ಟು ಬಿತ್ತನೆ ಕಾರ್ಯವಾಗಿದೆ ಎನ್ನುವ ಮಾಹಿತಿಯನ್ನು ಜಿಲ್ಲಾಡಳಿತ ನೀಡಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಕೆಲ ದಿನ ಸಾಧಾರಣ ಮಳೆಯಾದ ಪರಿಣಾಮ ಕೆಆರ್‌ಎಸ್ ಅಣೆಕಟ್ಟೆಗೆ ಸ್ವಲ್ಪ ಪ್ರಮಾಣದಲ್ಲಿ ನೀರು ಬಂದಿದೆ. ಹೀಗಿರುವಾಗ ತ.ನಾಡಿಗೆ ನೀರು ಹರಿಸುವಂತೆ ಆದೇಶ ನೀಡಿರುವುದು ಸರಿಯಲ್ಲ. ಆದರೂ ಆದೇಶವನ್ನು ಪಾಲನೆ ಮಾಡುವುದಿಲ್ಲವೆನ್ನುವ ಘೋಷಣೆಯನ್ನು ರಾಜ್ಯಸರ್ಕಾರ ಮಾಡಬೇಕು ಎಂದಿದ್ದಾರೆ.ಡ್ಯಾಂನಲ್ಲಿ ನೀರಿನ ಸಂಗ್ರಹವಿದ್ದಾಗ ಬೆಳೆ ಉಳಿಸಿಕೊಳ್ಳಲು ನಾಲೆಗೆ ನೀರು ಹರಿಸುವಂತೆ ರೈತರು ಒತ್ತಾಯಿಸಿದರೂ ರಾಜ್ಯಸರ್ಕಾರ ಅವರ ಮನವಿಗೆ ಸ್ಪಂದಿಸಲಿಲ್ಲ. ಇದರಿಂದಾಗಿ ಕೋಟ್ಯಂತರ ರೂ ಬೆಳೆ ನಷ್ಟವಾಯಿತು. ಈಗ ಮುಂಗಾರು ಬೆಳೆಗೆ ನೀರು ಕೊಡಿ ಎಂದರೆ ಮುಂದೆ ಸಭೆ ಮಾಡಿ ಕೊಡುವುದಾಗಿ ಜಿಲ್ಲೆಯ ಸಚಿವರು ಹೇಳುತ್ತಾರೆ. ಈ ರೀತಿ ನಿರ್ಲಕ್ಷ್ಯ ಮಾಡಿದರೆ ರೈತರು ಬದುಕುವುದಾದರೂ ಹೇಗೆ?. ಆದ್ದರಿಂದ ತಮಿಳುನಾಡಿಗೆ ನೀರು ಹರಿಸಬಾರದು. ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸಿನ ವಿರುದ್ಧ ಮೇಲ್ಮನವಿ ಸಲ್ಲಿಸಿ ಸರಿಯಾದ ವಾದ ಮಂಡಿಸಿ ಇಲ್ಲಿನ ವಾಸ್ತವ ಪರಿಸ್ಥಿತಿಯನ್ನು ತಿಳಿಸಬೇಕು. ಕೂಡಲೇ ಜಿಲ್ಲೆಯ ಕೆರೆ ಕಟ್ಟೆಗಳಿಗೆ ನೀರು ತುಂಬಿಸಬೇಕು ಎಂದು ಆಗ್ರಹಿಸಿದ್ದಾರೆ.
ತಮಿಳುನಾಡಿಗೆ ದಿನಕ್ಕೆ ಒಂದು ಟಿಎಂಸಿಯಂತೆ ಹದಿನೈದು ದಿನಕ್ಕೆ ಹದಿನೈದು ಟಿಎಂಸಿ, ನೀರು ಬಿಡುವಂತೆ ನೀರು ನಿರ್ವಹಣಾ ಸಮಿತಿ ಮಾಡಿರುವ ಶಿಫಾರಸು ರಾಜ್ಯದ ಕಾವೇರಿ ಕಣಿವೆ ರೈತರಲ್ಲಿ ಆತಂಕ ಸೃಷ್ಟಿಸಿದೆ. ನಮ್ಮ ಬೆಳೆಗಳಿಗೇ ನೀರಿಲ್ಲದಿರುವಾಗ ತಮಿಳುನಾಡಿನ ರೈತರ ಕೃಷಿ ಚಟುವಟಿಕೆಗೆ ನೀರು ಹರಿಸುವಂತೆ ಶಿಫಾರಸು ಮಾಡುವುದು ಅವೈಜ್ಞಾನಿಕ. ಇಂತಹ ಶಿಫಾರಸು ಮತ್ತು ಆದೇಶಗಳು ರಾಜ್ಯದ ಕಾವೇರಿ ಕಣಿವೆ ರೈತರ ಕಣ್ಣಲ್ಲಿ ರಕ್ತ ಸುರಿಯುವಂತೆ ಮಾಡುತ್ತಿದೆ. ನೀರಿದ್ದರೂ ನಮ್ಮಿಂದ ಬೆಳೆ ಬೆಳೆಯಲಾಗುತ್ತಿಲ್ಲ. ಇಲ್ಲಿನ ರೈತರ ಬೆಳೆಗಳಿಗೆ ಸಿಗದ ನೀರು ನೆರೆ ರಾಜ್ಯದ ರೈತರ ಬೆಳೆಗಳಿಗೆ ಸಿಗುತ್ತಿರುವುದು ದುರಂತ.- ಬಿ.ಸಿದ್ದರಾಜು, ಬಿಜೆಪಿ ಮುಖಂಡ