ಸಾರಾಂಶ
- ಲೋಕ್ ಅದಾಲತ್‌ನಲ್ಲಿ ನ್ಯಾಯಾಧೀಶರು, ವಕೀಲರಿಂದ ದಂಪತಿಗಳಿಗೆ ಶುಭ ಕೋರಿ, ಬೀಳ್ಕೊಡುಗೆ
- - - ಕನ್ನಡಪ್ರಭ ವಾರ್ತೆ ದಾವಣಗೆರೆ ವಿವಾಹ ವಿಚ್ಛೇದನಕ್ಕೆ ಮುಂದಾಗಿ ಕಡೆಗೆ ತಮ್ಮೆಲ್ಲಾ ಮುನಿಸು, ಸಿಟ್ಟು, ಅಸಮಾಧಾನ ಮರೆತ 28 ಜೋಡಿಗಳು ಲೋಕ್ ಅದಾಲತ್‌ನಲ್ಲಿ ಪುನಃ ಒಂದಾಗಿ, ಜೀವನದ ಮತ್ತೊಂದು ಹೊಸ ಅಧ್ಯಾಯದತ್ತ ಜೊತೆಯಾಗಿ ಹೆಜ್ಜೆಯಿಟ್ಟರು.ನಗರದ ಕೌಟುಂಬಿಕ ನ್ಯಾಯಾಲಯದಲ್ಲಿ ಶನಿವಾರ ಲೋಕ್ ಅದಾಲತ್‌ನಲ್ಲಿ ನ್ಯಾಯಾಧೀಶರು, ವಕೀಲರ ಸಮ್ಮುಖ 28 ಜೋಡಿಗಳು ಮತ್ತೆ ದಾಂಪತ್ಯ ಮುಂದುವರಿಸಲು ಮುಕ್ತ ಮನಸಿನಿಂದ ಸಮ್ಮತಿಸಿದರು.
ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಶಿವಪ್ಪ ಸಲಗೆರೆ ಈ ಸಂದರ್ಭ ಮಾತನಾಡಿ, ಭಾರತದ ಮದುವೆ ಸಂಸ್ಕೃತಿ ಇಡೀ ಜಗತ್ತಿಗೆ ಮಾದರಿಯಾಗಿದೆ. ದಾಂಪತ್ಯ ಜೀವನವು ಬಹಳ ಮುಖ್ಯವಾದದ್ದಾಗಿದೆ. ಬೇರೆ ದೇಶಗಳಲ್ಲಿ ಮದುವೆಯೆಂಬುದು ಗುತ್ತಿಗೆಯಂತಾಗಿದೆ. ಆದರೆ, ಭಾರತದಲ್ಲಿ ಅನಾದಿಯಿಂದಲೂ ವಿವಾಹ ಸಂಬಂಧಕ್ಕೆ ಹೆಚ್ಚಿನ ಮಹತ್ವವಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲೂ ಪಾಶ್ಚಿಮಾತ್ಯ ಸಂಸ್ಕೃತಿ ಬೆಳೆಯುತ್ತಿರುವುದು ಕಳವಳಕಾರಿ ಸಂಗತಿ ಎಂದರು.ಜಿಲ್ಲಾ ನ್ಯಾಯಾಧೀಶ ಎಮ್.ಎಚ್.ಅಣ್ಣಯ್ಯನವರ ಮಾತನಾಡಿ, ದಾಂಪತ್ಯದಲ್ಲಿ ಸಣ್ಣಪುಟ್ಟ ವಿರಸ, ಜಗಳ ಸಹಜ. ಅದನ್ನೆಲ್ಲಾ ಉಂಡು ಮಲಗುವುದರೊಳಗೆ ಮರೆತು ಬಿಡಬೇಕು. ಕೈನಲ್ಲಿರುವ ಐದೂ ಬೆರಳು ಊಟ ಮಾಡುವಾಗ ಒಂದಾಗುವಂತೆ ಲೋಕ್ ಅದಾಲತ್‌ನಲ್ಲಿ ಎಲ್ಲ ಕಕ್ಷಿದಾರರು ವೈಮನಸ್ಸು ಮರೆತು ಒಂದಾಗಬೇಕು. ಕಕ್ಷಿದಾರ ಹಣತೆಯಂತೆ, ವಕೀಲರು ಎಣ್ಣೆಯಂತೆ, ಸಂಧಾನಕಾರರು ಬತ್ತಿಯಂತೆ, ದೀಪ ಹಚ್ಚುವವರು ನ್ಯಾಯಾಧೀಶರು. ಇವರೆಲ್ಲರೂ ಸೇರಿ, ಒಮ್ಮ ತದಿಂದ ನಡೆಸುವುದೇ ಲೋಕ್ ಅದಾಲತ್ ಆಗಿದೆ ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ ಮಾತನಾಡಿ, ಕುಟುಂಬದಲ್ಲಿ ಗಾಳಿ ಸುದ್ದಿಗಳಿಗೆ ಕಿವಿಗೊಟ್ಟರೆ ಸಂಸಾರವೇ ಹಾಳಾಗುತ್ತವೆ. ಲೋಕ್ ಅದಾಲತ್‌ನಲ್ಲಿ ಒಂದಾದ ಜೋಡಿಗಳು ಮತ್ತೆ ಬೇರೆ ಆಗದಂತೆ ಇತರರಿಗೂ ಮಾದರಿಯಾಗಿ ಬಾಳಬೇಕು ಎಂದರು.ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣಕುಮಾರ ಮಾತನಾಡಿ, ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಹೋದರೆ, ನಮ್ಮನ್ನು ಒಂದು ಮಾಡಿ ಕಳಿಸುತ್ತಾರೆಂಬ ಸಂದೇಶವನ್ನು ಇಂದಿನ ಲೋಕ್ ಅದಾಲತ್ ಹಾಗೂ ದಾವಣಗೆರೆ ಕೌಟುಂಬಿಕ ನ್ಯಾಯಾಲಯವು ಸಮಾಜಕ್ಕೆ ಉತ್ತಮ ಸಂದೇಶ ನೀಡಿದೆ. ಜಿಲ್ಲೆಯ ವಕೀಲರು ಇಂತಹ ಗಂಡ-ಹೆಂಡತಿ ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದ ಅದೆಷ್ಟೋ ಪ್ರಕರಣ ಇತ್ಯರ್ಥಗೊಳಿಸಿ, ಜೋಡಿಗಳನ್ನು ಮತ್ತೆ ಒಂದು ಮಾಡುವುದರಲ್ಲಿ ರಾಜ್ಯಕ್ಕೆ ಮೊದಲ ಸ್ಥಾನದಲ್ಲಿದ್ದಾರೆ ಎಂದು ಹೇಳಿದರು.
ಜಿಲ್ಲಾ ನ್ಯಾಯಾಧೀಶರಾದ ಶ್ರೀರಾಮ ನಾರಾಯಣ ಹೆಗಡೆ, ಎಸ್.ಜಿ.ಸಲಗರೆ, ವಕೀಲರಾದ ಎಚ್.ಎನ್. ರಾಜಶೇಖರಪ್ಪ, ಎ.ಸಿ. ಜಗದೀಶ್ವರ, ಮಲ್ಲಿಕಾರ್ಜುನ ಕಣವಿ ಇತರರು ಇದ್ದರು.- - -
ಬಾಕ್ಸ್ * 6492 ಪ್ರಕರಣ ರಾಜಿಯಲ್ಲಿ ಮುಕ್ತಾಯ- ₹14,66,06,186 ಪರಿಹಾರ, ವ್ಯವಹರಣೆ: ನ್ಯಾ.ಮಹಾವೀರ ಮ. ಕರೆಣ್ಣವರ ದಾವಣಗೆರೆ: ಸುಪ್ರೀಂ ಕೋರ್ಟ್, ಹೈಕೋರ್ಟ್‌ಗಳು ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಶನಿವಾರ ರಾಷ್ಟ್ರೀಯ ಲೋಕ್ ಅದಾಲತ್ ನಡೆಯಿತು.
ಜಿಲ್ಲೆಯಲ್ಲಿ ಒಟ್ಟು 6,492 ಜಾರಿಯಲ್ಲಿರುವ ಪ್ರಕರಣ ಮುಕ್ತಾಯಗೊಂಡು ₹14,66,06,186 ಹಣದ ಪರಿಹಾರ/ ವ್ಯವಹರಣೆಯಾಗಿದೆ. 2,46,435 ವ್ಯಾಜ್ಯಪೂರ್ವ ಪ್ರಕರಣ ಮುಕ್ತಾಯವಾಗಿ ₹65,71,32,727 ವ್ಯವಹರಣೆ/ ಸರ್ಕಾರಿ ವಸೂಲಾತಿ, ಪರಿಹಾರ ಇತ್ಯಾದಿಯಾಗಿ ರಾಜಿ ಮೂಲಕ ಮುಕ್ತಾಯಗೊಂಡವು. ಜಿಲ್ಲೆಯಲ್ಲಿ ಒಟ್ಟು 31 ವೈವಾಹಿಕ ಪ್ರಕರಣ ರಾಜಿ, ದಾವಣಗೆರೆ ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನ ಮತ್ತು ಜೀವನಾಂಶಕ್ಕಾಗಿ ಪ್ರಕರಣ ದಾಖಲಿಸಿದ್ದ 28 ಜೋಡಿಗಳು ಒಂದಾಗಿ ಮತ್ತೊಮ್ಮೆ ಸಹಬಾಳ್ವೆಗೆ ಮುಂದಾಗಿಸುವಲ್ಲಿ ಲೋಕ್ ಅದಾಲತ್ ಸಾಕ್ಷಿಯಾಯಿತು.ಜಗಳೂರು ನ್ಯಾಯಾಲಯದ 1 ಪ್ರಕರಣದಲ್ಲಿ ವಿವಾಹ ವಿಚ್ಛೇದನ ಮತ್ತು ಜೀವನಾಂಶಕ್ಕಾಗಿ ಪ್ರಕರಣ ದಾಖಲಿಸಿದ್ದ 31 ಜೋಡಿ ಒಂದಾಗಿ, ಮತ್ತೊಮ್ಮೆ ಸಹಬಾಳ್ವೆ ನಡೆಸಲು ತೆರಳಿದ್ದಾರೆ. ಮರು ಹೊಂದಾಣಿಕೆಯಾದ ಜೋಡಿಗಳಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ರ್ಕಾಯದರ್ಶಿಗಳು ಮತ್ತು ಇತರ ನ್ಯಾಯಾಧೀಶರು ಅಭಿನಂದಿಸಿ, ಶುಭ ಕೋರಿ ಕಳಿಸಿಕೊಟ್ಟರು.
ಹರಿಹರ ತಾಲೂಕು ನ್ಯಾಯಾಲಯಗಳಲ್ಲಿ 1, ಚನ್ನಗಿರಿ ತಾಲೂಕಿನಲ್ಲಿ 51 ಅಪರಾಧಿಕ ಪ್ರಕರಣ, 187 ಚೆಕ್ ಅಮಾನ್ಯ ಪ್ರಕರಣ, 23 ಬ್ಯಾಂಕ್ ವಸೂಲಾತಿ ಕೇಸ್, 31 ಇತರ ಹಣ ವಸೂಲಾತಿ, 64 ಅಪಘಾತ ಪರಿಹಾರ ಪ್ರಕರಣ, 101 ವಿದ್ಯುತ್ ಕಳವು ಪ್ರಕರಣ, 9 ಅಕ್ರಮ ಮರಳು ಗಣಿಗಾರಿಕೆ ಪ್ರಕರಣ, 40 ಪಾಲು ವಿಭಾಗಕ್ಕಾಗಿ ದಾಖಲಿಸಿದ ದಾವೆ, 128 ಜಾರಿ ಅರ್ಜಿಗಳು ಅಲ್ಲದೇ ಹಲವು ಕಾರಣಕ್ಕಾಗಿ ದಾಖಲಿಸಿದ 19 ದಾವೆ ಮತ್ತು ಜೀವನಾಂಶ ಕೋರಿ ದಾಖಲಿಸಿದ್ದ ದಾವೆಗಳು 33 ಪ್ರಕರಣ ರಾಜಿ ಮೂಲಕ ಇತ್ಯರ್ಥಗೊಂಡಿವೆ. ಇತರೆ ಪ್ರಕರಣಗಳು ಸೇರಿ ಒಟ್ಟು 6,492 ಜಾರಿಯಲ್ಲಿದ್ದ ಪ್ರಕರಣಗಳು ಇತ್ಯರ್ಥಗೊಂಡಿವೆ.ಜಿಲ್ಲಾದ್ಯಂತ ಸುಮಾರು 211ಕ್ಕಿಂತ ಹೆಚ್ಚು ಶಾಲಾ ವಿದ್ಯಾರ್ಥಿಗಳ ಜನನ ಪ್ರಮಾಣ ಪತ್ರಗಳ ಕುರಿತು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಮತ್ತು ಅವರಿಗೆ ಸರ್ಕಾರದಿಂದ ಬರಬಹುದಾದ ವಿದ್ಯಾರ್ಥಿ ವೇತನ ಹಾಗೂ ಇತರೆ ಅನುಕೂಲತೆಗಳಿಗೆ ಅನುವು ಮಾಡಿಕೊಟ್ಟಂತಾಯಿತು. ಇನ್ನೂ ಹಲವಾರು ಬ್ಯಾಂಕ್ ಪ್ರಕರಣಗಳು ಸೇರಿದಂತೆ ಹಲವಾರು ಪ್ರಕರಣ ಇತ್ಯರ್ಥಗೊಂಡವು.
- - - -14ಕೆಡಿವಿಜಿ5ಜೆಪಿಜಿ:ದಾವಣಗೆರೆ ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದ ಲೋಕ್ ಅದಾಲತ್‌ನಲ್ಲಿ ನ್ಯಾಯಾಧೀಶರು, ವಕೀಲರ ಸಮಕ್ಷಮ 28 ಜೋಡಿಗಳು ವೈಮನಸ್ಸು ಮರೆತು, ಪುನಃ ದಾಂಪತ್ಯಕ್ಕೆ ಸಮ್ಮತಿಸಿದರು.