ಮಾವು ಮೇಳದಲ್ಲಿ ರೈತರಿಂದ ದಾಖಲೆ ಮಾರಾಟ

| Published : May 24 2024, 12:46 AM IST

ಸಾರಾಂಶ

ನಗರದ ತೋಟಗಾರಿಕೆ ಉಪನಿರ್ದೇಶಕರ ಕಚೇರಿ ಆವರಣದಲ್ಲಿ 11 ದಿನಗಳ ಕಾಲ ಆಯೋಜಿಸಲಾಗಿದ್ದ ಮಾವು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಗುರುವಾರ ತೆರೆ ಬಿದ್ದಿದ್ದು, ಪ್ರಸಕ್ತ ವರ್ಷ ದಾಖಲೆ ಮಾವು ಮಾರಾಟವಾಗಿದೆ.

-2024ರ ಮಾವು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ತೆರೆ

- 235 ಟನ್ ಮಾವು ಮಾರಾಟ

- ಸರಿಸುಮಾರು 2 ಕೋಟಿ ರುಪಾಯಿಗೂ ಅಧಿಕ ವಹಿವಾಟು ಕನ್ನಡಪ್ರಭ ವಾರ್ತೆ ಕೊಪ್ಪಳ

ನಗರದ ತೋಟಗಾರಿಕೆ ಉಪನಿರ್ದೇಶಕರ ಕಚೇರಿ ಆವರಣದಲ್ಲಿ 11 ದಿನಗಳ ಕಾಲ ಆಯೋಜಿಸಲಾಗಿದ್ದ ಮಾವು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಗುರುವಾರ ತೆರೆ ಬಿದ್ದಿದ್ದು, ಪ್ರಸಕ್ತ ವರ್ಷ ದಾಖಲೆ ಮಾವು ಮಾರಾಟವಾಗಿದೆ.

2024ರ ಮಾವು ಮೇಳವು ಹಿಂದೆಂದಿಗಿಂತಲೂ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಿ 230 ಟನ್‌ಗೂ ಹೆಚ್ಚಿನ ವಿವಿಧ ತಳಿಯ ಮಾವುಗಳನ್ನು ರೈತರು ಮಾರಾಟ ಮಾಡಿ ₹2 ಕೋಟಿಗೂ ಹೆಚ್ಚಿನ ವಹಿವಾಟು ಈ ಮೇಳದಲ್ಲಿ ದಾಖಲಾಗಿದೆ. ಗ್ರಾಹಕರು ಅತ್ಯಂತ ಖುಷಿಯಿಂದ ಮೇಳದಲ್ಲಿ ಎಲ್ಲ ತಳಿಯ ಮಾವುಗಳನ್ನು ಖರೀದಿಸಿ, ರುಚಿ ಸವಿದು ಇಂತಹ ಮೇಳಗಳು ಪ್ರತಿ ವರ್ಷವೂ ಹೀಗೆ ಮುಂದುವರೆಯಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ.

60ಕ್ಕೂ ಹೆಚ್ಚಿನ ರೈತರು ತಮ್ಮ ಹೆಸರನ್ನು ನೋಂದಾಯಿಸಿ ಮೇಳದಲ್ಲಿ ಭಾಗವಹಿಸಿದ್ದರು. ಮೇಳದಲ್ಲಿ ಮಾವು ಮಾರಾಟ ಮಾಡಲು ರೈತರು ಹಾಗೂ ರೈತ ಉತ್ಪಾದಕ ಸಂಘಗಳು, ಹಾಪ್‌ಕಾಮ್ಸ್, ಇಲಾಖಾ ತೋಟಗಾರಿಕೆ ಕ್ಷೇತ್ರಗಳಿಗೆ ತಮ್ಮ ಉತ್ಪನವನ್ನು ಮಾರಾಟ ಮಾಡಲು 22 ಮಾರಾಟ ಮಳಿಗೆಗಳನ್ನು ಉಚಿತವಾಗಿ ತೆರೆಯಲಾಗಿತ್ತು. ಮಾವು ಮೇಳದಲ್ಲಿ ಜಿಲ್ಲೆಯ ಏಳು ತಾಲೂಕುಗಳ ಮಾವು ಬೆಳೆಗಾರರು ಭಾಗವಹಿಸಿದ್ದರು. ರೈತರು ನೈಸರ್ಗಿಕವಾಗಿ ಮತ್ತು ವೈಜ್ಞಾನಿಕವಾಗಿ ಮಾಗಿಸಿದ 15ಕ್ಕೂ ಹೆಚ್ಚಿನ ವಿವಿಧ ಮಾವಿನ ತಳಿಯ ಹಣ್ಣುಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಿದ್ದಾರೆ.

ಮಾವಿನ ಹಣ್ಣುಗಳನ್ನು ನೈಸರ್ಗಿಕವಾಗಿ ಮತ್ತು ವೈಜ್ಞಾನಿಕವಾಗಿ ಮಾಗಿಸಿ ಗ್ರಾಹಕರಿಗೆ ಕೈಗೆಟುವ ದರದಲ್ಲಿ ರೈತರು ನೇರವಾಗಿ ಮಾರಾಟ ಮಾಡಿದ್ದಾರೆ. ಇದರಿಂದಾಗಿ ಗ್ರಾಹಕರಿಗೂ ಯೋಗ್ಯ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಹಣ್ಣುಗಳು ಲಭಿಸಿದ್ದು ಅವರೂ ಕೂಡಾ ಈ ಮೇಳದಲ್ಲಿ ಸಕ್ರಿಯವಾಗಿ ಭಾಗವಹಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಿಯಾಜಾಕಿ ಮಾವಿನ ಹಣ್ಣಿನ ಹವಾ:ಮಾವು ಮೇಳ 2024ರ ಪ್ರದರ್ಶನದಲ್ಲಿ 100ಕ್ಕೂ ಹೆಚ್ಚಿನ ವಿವಿಧ ದೇಶಿ ಮತ್ತು ವಿದೇಶಿ ತಳಿ ಹಣ್ಣುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಅವುಗಳಲ್ಲಿ ಜಗತ್ತಿನ ದುಬಾರಿ ಮಾವು ಮಿಯಾಜಾಕಿ ಎಂಬ ಜಪಾನಿನ ಮಾವಿನ ತಳಿಯ ಹಣ್ಣನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಈ ಮಿಯಾಜಾಕಿ ಮಾವು ಜಿಲ್ಲೆ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಲ್ಲಿ ಸುದ್ದಿ ಮಾಧ್ಯಮಗಳ ಮುಖಾಂತರ ಸಾಕಷ್ಟು ಪ್ರಚಾರ ಪಡೆದು ಪ್ರತಿಯೊಬ್ಬರ ಬಾಯಲ್ಲಿ ಮಿಯಾಜಾಕಿ ಮಾವಿನ ತಳಿಯ ಬಗ್ಗೆ ಮಾತನಾಡುವಂತಾಗಿತ್ತು ಹಾಗೂ ಈ ಮಾವನ್ನು ನೋಡಲು ಸಾರ್ವಜನಿಕರು ಹಾಗೂ ರೈತರು ಹಾಗೂ ಹೊರ ಜಿಲ್ಲೆಗಳಿಂದ ಸಾಕಷ್ಟು ಜನರು ತಂಡೋಪತಂಡವಾಗಿ ಬಂದು ಕುತೂಹಲದಿಂದ ವೀಕ್ಷಿಸಿದರು.

ಮಧ್ಯವರ್ತಿಗಳಿಲ್ಲದೇ ಮೇಳದಲ್ಲಿ ನೇರವಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸಿದ ಕಾರಣ ಹೆಚ್ಚಿನ ಆದಾಯ ಸಿಕ್ಕಿದೆ ಎಂದು ಮಾವು ಬೆಳೆಗಾರರಾದ ಆನಂದ ರೆಡ್ಡಿ, ಪಂಪಣ್ಣ ಇಂದರಗಿ, ಷಣ್ಮುಖಪ್ಪ ಘಂಟಿ, ಶಿವಣ್ಣ ಹೊಸಮನಿ, ನಾಗಪ್ಪ, ವೀರಭದ್ರಸ್ವಾಮಿ ಬಸವರಾಜ, ಫಕೀರಪ್ಪ ಸ್ವಾಮಿ, ಬಸವರಾಜ ಸ್ವಾಮಿ, ಅರಳಿಮರದ ಫಾರಂ, ವಾಮದೇವ ಎಚ್., ಮಾರುತಿ, ಶ್ರೀಪಾದ ಮುರಡಿ, ಸಹಜ ಸಾವಯವ ಸಮೃದ್ಧಿ ಸಂಸ್ಥೆಯ ರೈತರು ತಿಳಿಸಿದ್ದಾರೆ.

ಅಲ್ಲದೆ ಬಳ್ಳಾರಿ, ಗದಗ, ಧಾರವಾಡ, ಬಾಗಲಕೋಟೆ, ವಿಜಯಪುರ ಮತ್ತು ವಿಜಯನಗರ ಹಾಗೂ ವಿವಿಧ ಹೊರ ಜಿಲ್ಲೆಯ ಮಾವು ಬೆಳೆಯುವ ರೈತರು ಸಹ ಈ ಮೇಳದಲ್ಲಿ ಭಾಗವಹಿಸಿ ಹಣ್ಣು ಮಾರಾಟದ ಬಗ್ಗೆ ತಿಳಿದುಕೊಂಡರು.

ಪ್ರಮಾಣ ಪತ್ರ ವಿತರಣೆ:ಮಾವು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಭಾಗವಹಿಸಿದ್ದ ರೈತರು ಹಾಗೂ ಮಾರಾಟಗಾರರಿಗೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ್ ಪ್ರಮಾಣ ಪತ್ರ ವಿತರಣೆ ಮಾಡಿದರು.