ಸಾರಾಂಶ
ಬಸವರಾಜ ಹಿರೇಮಠ
ಧಾರವಾಡ: ಸಾಮಾನ್ಯವಾಗಿ ಸ್ಥಳೀಯ ಸಂಸ್ಥೆಗಳಿಗೆ ಕೇಂದ್ರ, ರಾಜ್ಯ ಸರ್ಕಾರಗಳಿಂದ ಅನುದಾನ ಬರುವುದು ಅಷ್ಟಕ್ಕಷ್ಟೇ. ಈ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳಿಗೆ ತೆರಿಗೆ ಆದಾಯವೇ ಮುಖ್ಯ. ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಶೇ. 100ರಷ್ಟು ತೆರಿಗೆ ಕಟ್ಟುವುದು ಸುಲಭದ ಮಾತಲ್ಲ. ಇಂತಹ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ತೆರಿಗೆ ಸಂಗ್ರಹದಲ್ಲಿ ದಾಖಲೆ ನಿರ್ಮಿಸುವತ್ತ ಹೆಜ್ಜೆ ಹಾಕುತ್ತಿದೆ.
ಗ್ರಾಪಂ, ಪಟ್ಟಣ ಪಂಚಾಯಿತಿ, ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಯಂ ಪ್ರೇರಣೆಯಿಂದ ಆಸ್ತಿ ತೆರಿಗೆ ಕಟ್ಟುವುದು ಅಪರೂಪ. ಮನೆ ನಿರ್ಮಾಣದ ಪರವಾನಗಿ ಸೇರಿದಂತೆ ಸರ್ಕಾರದ ಸೌಲಭ್ಯಗಳಿಗೆ ತೆರಿಗೆ ಕಡ್ಡಾಯ ಎಂದ ಸಂದರ್ಭದಲ್ಲಿ ಮಾತ್ರ ತೆರಿಗೆ ತುಂಬುವುದು ನಮ್ಮ ಜನರಿಗೂ ರೂಢಿಯಾಗಿ ಬಿಟ್ಟಿತ್ತು. ಜತೆಗೆ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಮನೆ ಮನೆಗೆ ಹೋಗಿ ದುಂಬಾಲು ಬಿದ್ದು ಸಾರ್ವಜನಿಕರಿಂದ ತೆರಿಗೆ ತುಂಬಿಸಿಕೊಂಡಿರುವ ಘಟನೆಗಳು ನಡೆದಿವೆ. ಇಂತಹ ಸಂದರ್ಭದಲ್ಲಿ ಮಹಾನಗರ ಪಾಲಿಕೆ 2024-25ನೇ ಸಾಲಿನಲ್ಲಿ ಸಂಗ್ರಹವಾಗಿರುವ ತೆರಿಗೆ ಹಣ ಇದುವರೆಗಿನ ಅತ್ಯಧಿಕ ಆಸ್ತಿ ತೆರಿಗೆ ಸಂಗ್ರಹ ಎಂದರೆ ಮೆಚ್ಚಲೇಬೇಕಾದ ಸಂಗತಿ.
₹ 64 ಕೋಟಿ ಸಂಗ್ರಹ:
ಕಳೆದ ಕೆಲ ವರ್ಷಗಳಿಂದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಏಪ್ರಿಲ್ ತಿಂಗಳೊಳಗೆ ತೆರಿಗೆ ಕಟ್ಟಿದರೆ ಶೇ. 5ರಷ್ಟು ವಿನಾಯತಿ ನೀಡಲಾಗುತ್ತಿದೆ. ಇದರ ಪ್ರಯೋಜನ ಪಡೆಯುತ್ತಿರುವ ಸಾರ್ವಜನಿಕರು ಕಳೆದ 2024ರ ಏಪ್ರಿಲ್ ತಿಂಗಳಲ್ಲಿಯೇ ₹ 43 ಕೋಟಿ ತೆರಿಗೆ ಕಟ್ಟಿದ್ದಾರೆ. ಇದಾದ ಬಳಿಕವೂ ತೆರಿಗೆ ಸಂಗ್ರಹ ನಿರಂತರವಾಗಿ ಮುಂದುವರಿದಿದೆ. ಮೇ ತಿಂಗಳು ಪೂರ್ತಿ ಹಾಗೂ ಜೂನ್ ತಿಂಗಳ ಮೊದಲ ವಾರದವರೆಗೆ ಒಟ್ಟು ₹ 64 ಕೋಟಿ ತೆರಿಗೆ ಪಾವತಿಯಾಗಿದೆ. ಇದು ಇದುವರೆಗಿನ ಅತ್ಯಧಿಕ ಆಸ್ತಿ ತೆರಿಗೆ ಪಾವತಿಯಾಗಿದೆ. ಏಪ್ರಿಲ್ ತಿಂಗಳಿನಲ್ಲಿ ಒಟ್ಟು 1,10,135 ಜನರು ತಮ್ಮ ಆಸ್ತಿ ತೆರಿಗೆ ಪಾವತಿಸಿದ್ದರು. ಅದೀಗ ಮತ್ತೆ ಮುಂದುವರಿದಿದ್ದು, ಇದುವರೆಗೂ ಒಟ್ಟು ₹ 64 ಕೋಟಿ ತೆರಿಗೆ ಸಂಗ್ರಹವಾಗಿದೆ ಎಂದು ಮಹಾನಗರ ಪಾಲಿಕೆ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
₹3.39 ಲಕ್ಷ ಆಸ್ತಿಗಳು:
ಅವಳಿ ನಗರದಲ್ಲಿ ವಸತಿ, ವಾಣಿಜ್ಯ ಮತ್ತು ಖಾಲಿ ಜಾಗ ಸೇರಿ ಇದುವರೆಗೂ ₹2.85 ಲಕ್ಷ ಆಸ್ತಿ ಇತ್ತು. ಆದರೆ ಅನೇಕ ಕಡೆಗಳಲ್ಲಿ ಆಸ್ತಿಗಳು ಈ ಲೆಕ್ಕದ ವ್ಯಾಪ್ತಿಯಲ್ಲಿ ಸೇರ್ಪಡೆಯಾಗಿರಲಿಲ್ಲ. ಎಲ್ಲ ಆಸ್ತಿಗಳನ್ನು ಇ-ಆಸ್ತಿ ಯೋಜನೆಗೆ ಒಳಪಡಿಸಿ ಪಾಲಿಕೆ ಸಿಬ್ಬಂದಿ ಸಮೀಕ್ಷೆ ಮಾಡಿದಾಗ ಕೈ ಬಿಟ್ಟು ಹೋದ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಸೇರ್ಪಡೆಯಾಗಿವೆ. ಪಾಲಿಕೆ ವ್ಯಾಪ್ತಿಯಲ್ಲಿ ಇದೀಗ ಒಟ್ಟು ₹3.39 ಲಕ್ಷ ಆಸ್ತಿಗಳಿವೆ. ಕಳೆದ ವರ್ಷ ಒಟ್ಟು ₹ 130 ಕೋಟಿ ತೆರಿಗೆ ಸಂಗ್ರಹಿಸಬೇಕಿತ್ತು. ಈ ಪೈಕಿ ₹ 118 ಕೋಟಿ ಸಂಗ್ರಹಿಸುವಲ್ಲಿ ಪಾಲಿಕೆ ಸಿಬ್ಬಂದಿ ಯಶಸ್ವಿಯಾಗಿದ್ದರು. ಆದರೆ, ಈ ಬಾರಿ ಆ ಗುರಿಯನ್ನು ₹ 250 ಕೋಟಿಗೆ ಹೆಚ್ಚಿಸಲಾಗಿದೆ. ಈಗಾಗಲೇ ಇದರಲ್ಲಿ ಸುಮಾರು ₹ 64 ಕೋಟಿ ಸಂಗ್ರಹವಾಗಿದ್ದು, ಮುಂದಿನ ವರ್ಷದ ಮಾರ್ಚ್ ಅಂತ್ಯಕ್ಕೆ ಈ ಗುರಿಯನ್ನು, ಅಂದರೆ ಉಳಿದ ₹ 187 ಕೋಟಿ ಸಂಗ್ರಹಿಸುವ ಗುರಿಯನ್ನು ಪಾಲಿಕೆ ಸಿಬ್ಬಂದಿ ಹೊಂದಿದ್ದಾರೆ.
ಹು-ಧಾ ಅವಳಿ ನಗರದ ಅಭಿವೃದ್ಧಿ, ಸ್ವಚ್ಛತೆ ಹಾಗೂ ನೌಕರರ ಸಂಬಳಕ್ಕಾಗಿ ಸಾರ್ವಜನಿಕರು ಸರಿಯಾಗಿ ತೆರಿಗೆ ಕಟ್ಟಲೇಬೇಕು. ಪಾಲಿಕೆ ಸಿಬ್ಬಂದಿಗೆ ಸರಿಯಾದ ವೇಳೆಗೆ ಸಂಬಳವಾದರೆ ಅವರು ಸರಿಯಾಗಿ ಕಾರ್ಯನಿರ್ವಹಿಸುತ್ತಾರೆ. ಇಲ್ಲವಾದಲ್ಲಿ ಅದು ಭ್ರಷ್ಟಾಚಾರ ಹೆಚ್ಚಳಕ್ಕೆ ಕಾರಣವಾಗುತ್ತದೆ. ಈ ಎಲ್ಲ ವಿಚಾರಗಳು ಚೈನ್ ಲಿಂಕ್ ರೀತಿಯಲ್ಲಿ ಕೆಲಸ ಮಾಡುತ್ತದೆ. ಇದೇ ಕಾರಣಕ್ಕೆ ಸಾರ್ವಜನಿಕರು ತಮ್ಮ ಆಸ್ತಿಗಳಿಗೆ ಸಕಾಲಕ್ಕೆ ತೆರಿಗೆ ಕಟ್ಟಿದರೆ ಮಾತ್ರ ಎಲ್ಲವೂ ಸರಳ ಸುಲಭ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ.ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯ ಆಸ್ತಿ ಕರದಾತರು ಸುಲಭ ಹಾಗೂ ಸರಳವಾಗಿ ತೆರಿಗೆ ತುಂಬುವ ಸೌಲಭ್ಯ ಹಾಗೂ ಏಪ್ರಿಲ್ ತಿಂಗಳಲ್ಲಿಯೇ ತೆರಿಗೆ ತುಂಬಿದರೆ ಶೇ. 5ರಷ್ಟು ರಿಯಾಯ್ತಿ ಘೋಷಣೆಯ ಫಲವಾಗಿ ಈ ವರ್ಷ ಅತ್ಯಧಿಕ ತೆರಿಗೆ ಸಂಗ್ರಹವಾಗಿದೆ. ತೆರಿಗೆಯ ಹಣದಿಂದಲೇ ಅವಳಿ ನಗರದ ಅಭಿವೃದ್ಧಿಯಾಗಲಿದ್ದು ಉಳಿದ ತೆರಿಗೆದಾತರರು ಶೀಘ್ರ ತೆರಿಗೆ ತುಂಬುವ ಮೂಲಕ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಹೇಳಿದರು.