ಆಶಾ ಕಾರ್ಯಕರ್ತರನ್ನು ನೇಮಕ ಮಾಡಿ ಜನರ ಆರೋಗ್ಯದ ಕಾಳಜಿ ವಹಿಸಿ

| Published : Nov 26 2024, 12:50 AM IST

ಆಶಾ ಕಾರ್ಯಕರ್ತರನ್ನು ನೇಮಕ ಮಾಡಿ ಜನರ ಆರೋಗ್ಯದ ಕಾಳಜಿ ವಹಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಆಲೂರು ಪಟ್ಟಣದ ಪಂಚಾಯಿತಿ ವ್ಯಾಪ್ತಿಯಲ್ಲಿ ೭೦೦೦ ಜನಸಂಖ್ಯೆ ಇದೆ. ಕೇವಲ ಒಬ್ಬರು ಆಶಾ ಕಾರ್ಯಕರ್ತರಿದ್ದಾರೆ. ೧೦೦೦ ಜನಕ್ಕೊಬ್ಬರು ಆಶಾ ಕಾರ್ಯಕರ್ತರನ್ನು ನೇಮಕ ಮಾಡಿಕೊಂಡು ಜನಸಾಮಾನ್ಯರ ಆರೋಗ್ಯ ಬಗ್ಗೆ ಕಾಳಜಿ ವಹಿಸಬೇಕು ಎಂದು ನಾಮ ನಿರ್ದೇಶಿತ ಸದಸ್ಯ ಶಿವಣ್ಣ ಒತ್ತಾಯಿಸಿದರು. ಸರ್ಕಾರದೊಡನೆ ಚರ್ಚಿಸಿ ಅನುಮತಿ ಕೊಡುವಂತೆ ಪ್ರಯತ್ನ ಮಾಡುತ್ತೇನೆ. ಆಸ್ಪತ್ರೆಗಳಲ್ಲಿ ಸಮಸ್ಯೆ ಇದ್ದರೆ ತನ್ನ ಗಮನಕ್ಕೆ ತರಬೇಕು ಎಂದು ಶಾಸಕ ಸಿಮೆಂಟ್‌ ಮಂಜು ಸೂಚಿಸಿದರು.

ಕನ್ನಡಪ್ರಭ ವಾರ್ತೆ ಆಲೂರು

ಆರೋಗ್ಯ ಇಲಾಖೆಯಲ್ಲಿ ಕೆಟ್ಟು ನಿಂತಿರುವ ಆ್ಯಂಬುಲೆನ್ಸ್‌ನ್ನು ಕೂಡಲೇ ರಿಪೇರಿ ಮಾಡಿಸಿ ಉಪಯೋಗಕ್ಕೆ ಬಳಸಬೇಕು ಎಂದು ಶಾಸಕ ಸಿಮೆಂಟ್ ಮಂಜು ಸೂಚಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಸ್ಪತ್ರೆಯಲ್ಲಿರುವ ಎರಡು ಆ್ಯಂಬುಲೆನ್ಸ್‌ಗಳ ಪೈಕಿ ಒಂದು ರಿಪೇರಿಯಲ್ಲಿದೆ ಎಂದು ಆಡಳಿತ ವೈದ್ಯಾಧಿಕಾರಿ ಡಾ. ಜಯಪ್ರಕಾಶ್ ತಿಳಿಸಿದಾಗ, ಕೂಡಲೇ ರಿಪೇರಿ ಮಾಡಿಸಲು ಆದೇಶಿಸಿದರು.ಪಟ್ಟಣದ ಪಂಚಾಯಿತಿ ವ್ಯಾಪ್ತಿಯಲ್ಲಿ ೭೦೦೦ ಜನಸಂಖ್ಯೆ ಇದೆ. ಕೇವಲ ಒಬ್ಬರು ಆಶಾ ಕಾರ್ಯಕರ್ತರಿದ್ದಾರೆ. ೧೦೦೦ ಜನಕ್ಕೊಬ್ಬರು ಆಶಾ ಕಾರ್ಯಕರ್ತರನ್ನು ನೇಮಕ ಮಾಡಿಕೊಂಡು ಜನಸಾಮಾನ್ಯರ ಆರೋಗ್ಯ ಬಗ್ಗೆ ಕಾಳಜಿ ವಹಿಸಬೇಕು ಎಂದು ನಾಮ ನಿರ್ದೇಶಿತ ಸದಸ್ಯ ಶಿವಣ್ಣ ಒತ್ತಾಯಿಸಿದರು.ಹೊಸ ಕಾರ್ಯಕರ್ತರನ್ನು ನೇಮಕ ಮಾಡಿಕೊಳ್ಳಲು ಸರ್ಕಾರದಿಂದ ಅನುಮತಿಬೇಕು ಎಂದು ಡಾ. ಜಯಪ್ರಕಾಶ್ ತಿಳಿಸಿದಾಗ, ಸರ್ಕಾರದೊಡನೆ ಚರ್ಚಿಸಿ ಅನುಮತಿ ಕೊಡುವಂತೆ ಪ್ರಯತ್ನ ಮಾಡುತ್ತೇನೆ. ಆಸ್ಪತ್ರೆಗಳಲ್ಲಿ ಸಮಸ್ಯೆ ಇದ್ದರೆ ತನ್ನ ಗಮನಕ್ಕೆ ತರಬೇಕು ಎಂದು ಶಾಸಕರು ಸೂಚಿಸಿದರು. ತಾಲೂಕಿನಲ್ಲಿ ಸದ್ಯ ಡೆಂಘೀ ಪ್ರಕರಣ ವರದಿಯಾಗಿಲ್ಲ. ಆಸ್ಪತ್ರೆಯಲ್ಲಿ ನಾಯಿ, ಹಾವು ಕಡಿತಕ್ಕೆ ಚುಚ್ಚುಮದ್ದು ದಾಸ್ತಾನಿದೆ. ಪಾಳ್ಯ, ರಾಯರಕೊಪ್ಪಲು ಮತ್ತು ಕೆ. ಹೊಸಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಫಾತಿಮಾ ಬೇಗಂ ಸಭೆ ಗಮನಕ್ಕೆ ತಂದರು.ಪಶುವೈದ್ಯ ಇಲಾಖೆಯಲ್ಲಿ ೫೨ ಸಿಬ್ಬಂದಿಯ ಪೈಕಿ ಕೇವಲ ೧೩ ಜನ ಇದ್ದಾರೆ. ೧೨ ಆಸ್ಪತ್ರೆಯಲ್ಲಿ ೫ ಜನ ಇನ್ಸ್‌ಪೆಕ್ಟರ್‌ಗಳು ಇಲ್ಲವೆಂದು ಪಶು ವೈದ್ಯಾಧಿಕಾರಿ ತಿಳಿಸಿದರು. ಶಾಲೆಗಳಲ್ಲಿ ಶೌಚಾಲಯ ಶುಚಿಗೊಳಿಸಲು ಗ್ರೂಪ್ ಡಿ ಸಿಬ್ಬಂದಿಯ ಅವಶ್ಯಕತೆ ಇದೆ. ಅಕ್ಷರ ದಾಸೋಹ ಸಿಬ್ಬಂದಿ ಗೌರವಧನ ಕಡಿಮೆ ಎಂದು ಕೆಲಸ ಮಾಡಲು ಅಸಮಾಧಾನ ವ್ಯಕ್ತಪಡಿಸುತ್ತಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ. ಜೆ. ಕೃಷ್ಣೇಗೌಡ ಸಭೆ ಗಮನಕ್ಕೆ ತಂದರು.

ಕಾಂಪೌಂಡ್‌ ಇಲ್ಲದ ಶಾಲೆಗೆ ಎನ್.ಆರ್‌.ಇ.ಜಿ. ಯಲ್ಲಿ ಕಾಂಪೌಂಡ್‌ ನಿರ್ಮಾಣ ಮಾಡುವಂತೆ ಶಾಸಕರು ಸೂಚಿಸಿದರು. ಕೃಷಿ ಮತ್ತು ತೋಟಗಾರಿಕೆ ಇಲಾಖೆಯಲ್ಲಿ ರೈತರಿಗೆ ದೊರಕುವ ಸೌಲಭ್ಯಗಳ ಬಗ್ಗೆ ಪ್ರತಿ ಗ್ರಾಮಗಳಲ್ಲಿ ರೈತರಿಗೆ ಪ್ರಚಾರ ಮಾಡುವ ಮೂಲಕ ತಿಳಿಸಬೇಕು. ಅರ್ಹ ರೈತರನ್ನು ಗುರುತಿಸಿ ಸೌಲಭ್ಯ ಒದಗಿಸಬೇಕು. ಅನೇಕ ರೈತರಿಗೆ ಮಾಹಿತಿ ತಿಳಿಯದೆ ವಂಚಿತರಾಗುತ್ತಿದ್ದಾರೆ ಎಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನಲ್ಲಿ ೧೪೩೭ ಮಿ.ಮೀ. ಮಳೆಯಾಗಿದ್ದು ಶೇ. ೪೪. ಮುಸುಕಿನ ಜೋಳ ನಷ್ಟವಾಗಿದೆ. ಪ್ರತಿ ಎಕರೆಗೆ ೩೪೦೦ ರು. ಪರಿಹಾರ ಬರುತ್ತದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ಮಾಹಿತಿ ನೀಡಿದರು. ತಾಲೂಕಿನಲ್ಲಿ ೧೭೯ ಅಂಗನವಾಡಿ ಕೇಂದ್ರಗಳಲ್ಲಿ ೧೩೬ಕ್ಕೆ ಸ್ವಂತ ಕಟ್ಟಡವಿದೆ. ೧೮ ಅಂಗನವಾಡಿಗಳು ಶಾಲೆಗಳಲ್ಲಿ, ೧೩ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಹೊಲ್ಲಹಳ್ಳಿ ಅಂಗನವಾಡಿ ಕಟ್ಟಡ ಐದು ವರ್ಷಗಳಿಂದ ಪೂರ್ಣಗೊಂಡಿಲ್ಲ ಎಂದು ಸಿಡಿಪಿಒ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು.

ಆಶಾ ಬಡಾವಣೆಯಲ್ಲಿರುವ ಅಂಗನವಾಡಿ ಕಟ್ಟಡಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂದು ಸದಸ್ಯ ಶಿವಣ್ಣ ಆಗ್ರಹಿಸಿದರು. ಸಭೆಯಲ್ಲಿ ಎಲ್ಲ ಇಲಾಖೆಗಳ ಮಾಹಿತಿ ಪಡೆಯಲಾಯಿತು.

ಸಭೆಯಲ್ಲಿ ತಹಸೀಲ್ದಾರ್‌ ನಂದಕುಮಾರ್‌, ತಾಲೂಕು ಪಂಚಾಯತ್‌ ಕಾರ್ಯ ನಿರ್ವಹಣಾಧಿಕಾರಿ ಡಾ. ಶ್ರೀನಿವಾಸ್ ಉಪಸ್ಥಿತರಿದ್ದರು.