ಸಾರಾಂಶ
- ಭಾನುವಳ್ಳಿಯಲ್ಲಿ ಉದ್ಯೋಗ ಮೇಳ ಆಯೋಜನೆ ಶ್ಲಾಘನೀಯ: ಡಾ.ಸಿದ್ದೇಶ್ವರ - - - ಕನ್ನಡಪ್ರಭ ವಾರ್ತೆ ಹರಿಹರ
ಭಾನುವಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಉದ್ಯೋಗ ಮೇಳ ಯಶಸ್ವಿಯಾಗಿದೆ ಎಂದು ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕ ಟಿ.ಆರ್. ತೇಜಸ್ವಿ ಕಟ್ಟಿಮನಿ ಹೇಳಿದರು.ಹರಿಹರ ತಾಲೂಕಿನ ಭಾನುವಳ್ಳಿಯಲ್ಲಿ ಸ್ನೇಹ ಸಂಭ್ರಮ ಗೆಳೆಯರ ಬಳಗ ಮತ್ತು ಶ್ರೀ ಜಿ ಮಲ್ಲಿಕಾರ್ಜುನಪ್ಪ ಮತ್ತು ಶ್ರೀಮತಿ ಹಾಲಮ್ಮ ಚಾರಿಟಿ ಫೌಂಡೇಶನ್ ಭೀಮಸಮುದ್ರ ಸಹಯೋಗದಲ್ಲಿ ಭಾನುವಾರ ನಡೆದ ಬೃಹತ್ ಉದ್ಯೋಗ ಮೇಳದಲ್ಲಿ ಅವರು ಮಾತನಾಡಿದರು. ಒಟ್ಟು 856 ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡು, ಅಂತಿಮವಾಗಿ ಸಂದರ್ಶನ ಪ್ರಕ್ರಿಯೆಯಲ್ಲಿ ಆಯ್ಕೆಯಾದ 511 ವಿದ್ಯಾರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಲಾಯಿತು ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾಜಿ ಸಂಸದ ಡಾ. ಜಿ.ಎ. ಸಿದ್ದೇಶ್ವರ ಮಾತನಾಡಿ, ಜಿಲ್ಲಾ ಕೇಂದ್ರ ಹಾಗೂ ನಗರ ಪ್ರದೇಶಗಳಲ್ಲಿ ಉದ್ಯೋಗ ಮೇಳ ಮಾಡುವುದು ಸಾಮಾನ್ಯ. ಆದರೆ, ಗ್ರಾಮಾಂತರ ಪ್ರದೇಶಗಳಲ್ಲಿ ಮಾಡುವುದು ಅತಿ ವಿರಳ. ಉದ್ಯೋಗಾಕ್ಷಿಗಳ ಮನೆ ಬಾಗಿಲಿಗೆ ತೆರಳಿ ಉದ್ಯೋಗ ನೀಡುವ ಕಾರ್ಯ ಯಶಸ್ವಿಯಾಗಿದೆ ಎಂದರು.ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಈ ಹಿಂದೆ ಉದ್ಯೋಗ ಹುಡುಕಿಕೊಂಡು ಬೆಂಗಳೂರು ಮುಂತಾದ ಕಡೆ ತೆರಳಬೇಕಿತ್ತು. ಅದಕ್ಕಾಗಿ ಸಾಕಷ್ಟು ಹಣ ಖರ್ಚಾಗುತಿತ್ತು. ಇದರಿಂದ ಗ್ರಾಮಾಂತರ ಪ್ರದೇಶಗಳ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿತ್ತು. ಆದರೆ, ಇಂದು ಕಂಪನಿಗಳೇ ಕೆಲಸಗಾರರನ್ನು ಹುಡುಕಿಕೊಂಡು ಬರುವಂಥ ವ್ಯವಸ್ಥೆ ಆಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಮಾಜಿ ಶಾಸಕ ಎಚ್.ಎಸ್ ಶಿವಶಂಕರ್ ಮಾತನಾಡಿದರು. ಭಾನುವಳ್ಳಿಯ ಸುತ್ತಮುತ್ತಲಿನ 25ಕ್ಕೂ ಹೆಚ್ಚಿನ ಗ್ರಾಮಗಳ ಉದ್ಯೋಗ ಆಕಾಂಕ್ಷಿಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಬೆಳಗ್ಗೆ 10 ಗಂಟೆಗೆ ಪ್ರಾರಂಭವಾದ ಸಂದರ್ಶನ ಪ್ರಕ್ರಿಯೆ ಸಂಜೆ 4ರವರೆಗೆ ನಡೆಯಿತು.ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರಾಯಚೂರಿನ ಮಾಜಿ ಸಂಸದ ಬಿ.ವಿ. ನಾಯಕ್, ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ಭಾನುವಳ್ಳಿ ಗ್ರಾಮದ ಶಂಕರ ಗೌಡ್ರು, ಸ್ನೇಹ ಸಂಭ್ರಮ ಗೆಳೆಯರ ಬಳಗದ ಪದಾಧಿಕಾರಿಗಳು ಸುತ್ತ ಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು. - - - -11 ಎಚ್‍ಆರ್‍ಆರ್ 02 -2ಎ:
ಬೃಹತ್ ಉದ್ಯೋಗ ಮೇಳದಲ್ಲಿ ಮಾಜಿ ಸಂಸದ ಜಿ.ಎಮ್. ಸಿದ್ದೇಶ್ವರ ಮಾತನಾಡಿದರು.