ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಕೋಲಾರ ಸುತ್ತಮುತ್ತ ಹಲವಾರು ಹೊರ ರಾಜ್ಯದವರು ನಮ್ಮಲ್ಲಿ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡು ಕೈಗಾರಿಕೆಗಳನ್ನು ಸ್ಥಾಪಿಸಿದ್ದಾರೆ, ಆದರೆ ಸ್ಥಳೀಯರಿಗೆ ಶೇ.೨೦ರಷ್ಟು ಕೆಲಸಕ್ಕೆ ಗುತ್ತಿಗೆ ಆಧಾರದ ಮೇಲೆ ಡಿ ದರ್ಜೆಯ ಕೆಲಸ ನೀಡಿ ಉಳಿದ ಶೇ.೮೦ರಷ್ಟು ಹೊರ ರಾಜ್ಯದವರನ್ನು ನೇಮಿಸಿ ಕೊಂಡಿದ್ದಾರೆ. ಉದ್ಯೋಗದಲ್ಲಿ ಕನ್ನಡಿಗರಿಗೆ ಅದ್ಯತೆ ನೀಡಲು ಸರೋಜಿನಿ ಮರ್ಯಿನಿ ವರದಿಗೆ ಆದ್ಯತೆ ನೀಡದೆ ನಿರ್ಲಕ್ಷಿಸಿರುವುದು ಯಾವ ನ್ಯಾಯ ಸ್ವಾಮಿ ಎಂದು ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಉಪ ನಿರ್ದೇಶಕರನ್ನು ಪ್ರಶ್ನಿಸಿ ತರಾಟೆಗೆ ತೆಗೆದು ಕೊಂಡರು. ನಗರದ ಜಿಪಂ ದಿಶಾ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಮಳೆಗಳಿಲ್ಲ, ಬೆಳೆಗಳಿಲ್ಲದೆ ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ತಾಂಡವಾಡುತ್ತಿದೆ. ಕೃಷಿ ತೊರೆದು ನಿರುದ್ಯೋಗಿ ಯುವ ವಿದ್ಯಾವಂತರು ಕೆಲಸಗಳನ್ನು ಹುಡುಕಿ ಕೊಂಡು ಶಿಫಾರಸಿಗಾಗಿ ಪ್ರತಿದಿನ ಜನಪ್ರತಿನಿಧಿಗಳ ಬಾಗಿಲಿಗೆ ಬರುತ್ತಾರೆ. ಆದರೆ ಕೈಗಾರಿಕೆಯ ಆಡಳಿತ ಮಂಡಳಿಯವರು ನಾವು ನೀಡುವಂತ ಶಿಫಾರಸು ಪತ್ರವನ್ನು ಗಾಳಿಗೆ ತೂರಿ ಬರಿಗೈಯಲ್ಲಿ ವಾಪಸ್ ಕಳುಹಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಗುತ್ತಿಗೆ ಆಧಾರದಲ್ಲಿ ಕೆಲಸ
ಉದ್ಯೋಗ ನೀಡಿದರೂಗುತ್ತಿಗೆ ಆಧಾರದ ಮೇಲೆ ೨ ವರ್ಷಕ್ಕೆ ಸೀಮಿತವಾಗಿರುತ್ತದೆ. ಅರ್ಹರಾದ ಯುವಕರು ಇದ್ದರೂ ಅವರಿಗೆ ಸೂಕ್ತವಾದ ಉದ್ಯೋಗವನ್ನು ನೀಡದೆ ತಾರತಮ್ಯವನ್ನು ಮಾಡುತ್ತಿದ್ದಾರೆ. ಈ ಕುರಿತಂತೆ ಕಾರ್ಮಿಕ ಇಲಾಖೆಯು ಯಾವೂದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಸಂಸದ ಮಲ್ಲೇಶ್ ಬಾಬು ಮಧ್ಯ ಪ್ರವೇಶಿಸಿ ಸಿ.ಎಸ್.ಆರ್. ಫಂಡ್ ಬಳಕೆ ಕುರಿತಂತೆ ಹಾಗೂ ಕಾರ್ಮಿಕರ ನೇಮಕಾತಿಗೆ ಸಂಬಂಧಿಸಿದಂತೆ ಕೇಂದ್ರಕ್ಕೆ ನೀಡಿರುವ ವರದಿಯಲ್ಲಿ ಶೇ.೮೦ರಷ್ಟು ಸ್ಥಳೀಯರಿಗೆ ಉಳಿದ ಶೇ.೨೦ರಷ್ಟು ಹೊರಗಿನ ರಾಜ್ಯದವರಿಗೆ ಎಂದು ತಿಳಿಸಿರುವ ಹಿನ್ನಲೆಯಲ್ಲಿ ನಾನು ಈಗಾಗಲೇ ಹಲವಾರು ಬಾರಿ ಸಂಬಂಧ ಪಟ್ಟ ಇಲಾಖೆಯ ಕೈಗಾರಿಕೆ ಅಧಿಕಾರಿಗಳ ಸಭೆಯನ್ನು ಕರೆಯಲು ಡಿ.ಐ.ಸಿ. ಅಧಿಕಾರಿಗಳಿಗೆ ತಿಳಿಸಿದ್ದರೂ ಈವರೆಗೆ ಏಕೆ ಕರೆದಿಲ್ಲ ಎಂದು ಪ್ರಶ್ನಿಸಿದರು.ಅಧಿಕಾರಿಗಳ ಬಳಿ ಮಾಹಿತಿ ಇಲ್ಲಅಧಿಕಾರಿಗಳು ಸಿ.ಎಸ್.ಆರ್. ಫಂಡ್‌ಗೆ ಸಂಬಂಧಿಸಿದಂತೆ ಹಾಗೂ ಕಾರ್ಮಿಕರ ನೇಮಕಾತಿಗೆ ಸಂಬಂಧಿಸಿದಂತೆ ವಿವರಗಳ ಸಮಗ್ರ ಮಾಹಿತಿಯೊಂದಿಗೆ ಸಭೆಗೆ ಆಗಮಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಬೇಕು. ಸಿ.ಎಸ್.ಆರ್. ಫಂಡ್ ಸಮಿತಿಗೆ ಜಿಲ್ಲಾಧಿಕಾರಿಗಳೇ ಅಧ್ಯಕ್ಷರಾಗಿರುತ್ತಾರೆ. ಹಾಗಾಗಿ ಜಿಲ್ಲಾಧಿಕಾರಿಗಳೇ ಸಭೆಯನ್ನು ಕರೆಯಬೇಕು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನೂತನ ಜಿಲ್ಲಾಧಿಕಾರಿ ಡಾ.ರವಿ ಅವರು ಶೀಘ್ರದಲ್ಲೆ ಸಭೆಯ ದಿನಾಂಕವನ್ನು ನಿಗದಿಪಡಿಸುವುದಾಗಿ ಶಾಸಕರಿಗೆ ಹಾಗೂ ಸಂಸದರಿಗೆ ತಿಳಿಸಿದರು.