ಕರಾವಳಿಯಲ್ಲಿ ಇಂದೂ ರೆಡ್‌ ಅಲರ್ಟ್‌

| Published : Jul 18 2024, 01:38 AM IST

ಸಾರಾಂಶ

ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಜೀವ ನದಿಗಳಾದ ನೇತ್ರಾವತಿ ಮತ್ತು ಕುಮಾರಧಾರ ನದಿಗಳ ನೀರಿನ ಹರಿವಿನಲ್ಲಿ ಬುಧವಾರ ಮಧ್ಯಾಹ್ನದ ಬಳಿಕ ಹೆಚ್ಚಳ ಕಂಡು ಬಂದಿದೆ.

ಕನ್ನಡಪ್ರಭ ವಾರ್ತೆ ಮಂಗಳೂರುಕರಾವಳಿಯಲ್ಲಿ ಬಿರುಸಿನ ಮಳೆ ಬುಧವಾರವೂ ಮುಂದುವರಿದಿದೆ. ಇದೇ ವೇಳೆ ಭಾರತೀಯ ಹವಾಮಾನ ಇಲಾಖೆ ಜು.18ರಂದು ಮತ್ತೆ ಕರಾವಳಿಯಲ್ಲಿ ರೆಡ್‌ ಅಲರ್ಟ್‌ ಘೋಷಿಸಿದೆ.ದ.ಕ.ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಬುಧವಾರ ಕೂಡ ಹಗುರದಿಂದ ಉತ್ತಮ ಮಳೆಯಾಗಿದೆ. ಮುಂಜಾನೆಯಿಂದಲೇ ಮಳೆ ಚುರುಕುಗೊಂಡರೂ ಮಧ್ಯಾಹ್ನ ವರೆಗೆ ಆಗಾಗ ಸುರಿಯುತ್ತಿತ್ತು. ಅಪರಾಹ್ನ ಪೂರ್ಣ ಪ್ರಮಾಣದಲ್ಲಿ ಮೋಡ ಕವಿದ ವಾತಾವರಣ ಕಂಡುಬಂದಿದ್ದು, ಜಿಲ್ಲೆಯಾದ್ಯಂತ ಮಳೆ ಬಿರುಸುಗೊಂಡಿತ್ತು.

ಮಂಗಳೂರಿನ ಉಜ್ಜೋಡಿ, ಪಂಪ್‌ವೆಲ್‌, ಪಡೀಲ್‌, ಬಜಾಲ್‌ ಸೇರಿದಂತೆ ನಾನಾ ಕಡೆಯಲ್ಲಿ ರಸ್ತೆಯಲ್ಲಿ ಮಳೆಯ ನೀರು ಹರಿದು ಸಂಚಾರಕ್ಕೆ ಸಮಸ್ಯೆ ತಂದೊಡ್ಡಿತ್ತು.

ಮಂಗಳೂರು, ಮೂಡುಬಿದಿರೆ, ಮೂಲ್ಕಿ ಹಾಗೂ ಉಳ್ಳಾಲ ತಾಲೂಕುಗಳ ಶಾಲಾ- ಕಾಲೇಜುಗಳಿಗೆ ರಜೆ ನೀಡಲಾಗಿಲ್ಲ.

ಬೆಳ್ತಂಗಡಿ ಗರಿಷ್ಠ ಮಳೆ: ದ.ಕ.ಜಿಲ್ಲೆಯಲ್ಲಿ ಬುಧವಾರ ಬೆಳಗ್ಗಿನ ವರೆಗೆ ಬೆಳ್ತಂಗಡಿಯಲ್ಲಿ ಗರಿಷ್ಠ 70.1 ಮಿಲಿ ಮೀಟರ್‌ ಮಳೆ ದಾಖಲಾಗಿದೆ. ಜಿಲ್ಲೆಯ ದಿನದ ಸರಾಸರಿ ಮಳೆ 54.4 ಮಿ.ಮೀ. ಆಗಿದೆ.

ಬಂಟ್ವಾಳ 44.2 ಮಿ.ಮೀ, ಮಂಗಳೂರು 38.1 ಮಿ.ಮೀ, ಪುತ್ತೂರು 48.3 ಮಿ.ಮೀ, ಸುಳ್ಯ 59.2 ಮಿ.ಮೀ, ಮೂಡುಬಿದಿರೆ 59.5 ಮಿ.ಮೀ, ಕಡಬ 47.4 ಮಿ.ಮೀ, ಮೂಲ್ಕಿ 25.8 ಮಿ.ಮೀ. ಉಳ್ಳಾಲ 35.6 ಮಿ.ಮೀ. ಮಳೆ ದಾಖಲಾಗಿದೆ. ಉಪ್ಪಿನಂಗಡಿಯಲ್ಲಿ ನೇತ್ರಾವತಿ ಮತ್ತು ಕುಮಾರಧಾರ ನದಿ 27.50 ಮೀಟರ್‌ ಹಾಗೂ ಬಂಟ್ವಾಳದ ತುಂಬೆಯಲ್ಲಿ ನೇತ್ರಾವತಿ ನದಿ 6.2 ಮೀಟರ್‌ನಲ್ಲಿ ಹರಿಯುತ್ತಿದೆ.

ದ.ಕ.: 5 ತಾಲೂಕುಗಳ ಶಾಲಾ, ಕಾಲೇಜುಗಳಿಗೆ ಇಂದು ರಜೆ

ಮಂಗಳೂರು: ಧಾರಾಕಾರ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಜು.18ರಂದು ಗುರುವಾರ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಹಾಗೂ ಕಡಬ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳು ಹಾಗೂ ಪದವಿ ಪೂರ್ವ ತನಕದ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

ನೇತ್ರಾವತಿ, ಕುಮಾರಧಾರ ನದಿ ಹರಿವು ಹೆಚ್ಚಳ

ಉಪ್ಪಿನಂಗಡಿ: ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಜೀವ ನದಿಗಳಾದ ನೇತ್ರಾವತಿ ಮತ್ತು ಕುಮಾರಧಾರ ನದಿಗಳ ನೀರಿನ ಹರಿವಿನಲ್ಲಿ ಬುಧವಾರ ಮಧ್ಯಾಹ್ನದ ಬಳಿಕ ಹೆಚ್ಚಳ ಕಂಡು ಬಂದಿದೆ.

ಮಂಗಳವಾರ ರಾತ್ರಿಯಿಂದ ನದಿ ನೀರ ಮಟ್ಟದಲ್ಲಿ ಇಳಿಕೆ ಕಂಡು ಬಂದಿದ್ದು, ಮಧ್ಯಾಹ್ನದ ವೇಳೆ ಉಭಯ ನದಿಗಳಲ್ಲಿ ಹೆಚ್ಚಳದ ಗತಿಯು ಕಾಣಿಸಿತ್ತು. ಬುಧವಾರ ಸಾಯಂಕಾಲದ ವೇಳೆಗೆ ನದಿಯಲ್ಲಿ ನೀರಿನ ಮಟ್ಟವು ೨೮.೫ ಮೀಟರ್ ದಾಖಲಾಗಿತ್ತು. ಕಳೆದೆರಡು ದಿನಗಳಲ್ಲಿ ಕುಮಾರಧಾರಾ ನದಿಯಲ್ಲಿ ಮಾತ್ರ ನೀರಿನ ಪ್ರಮಾಣವು ಹೆಚ್ಚಿದ್ದು, ಬುಧವಾರದಂದು ನೇತ್ರಾವತಿ ನದಿಯಲ್ಲಿ ಕೂಡಾ ಭಾರೀ ಪ್ರಮಾಣದ ಹರಿವು ಕಾಣಿಸಿದೆ. ಸಹಜವಾಗಿ ನದಿ ಪಾತ್ರದಲ್ಲಿನ ತಗ್ಗು ಪ್ರದೇಶಗಳ ಕೃಷಿ ಭೂಮಿಯು ಜಲಾವೃತಗೊಂಡಿದೆ.