ಇಂದಿನಿಂದ ಕರಾವಳಿಯಲ್ಲಿ ರೆಡ್ ಅಲರ್ಟ್‌, ಭಾರಿ ಮಳೆ ನಿರೀಕ್ಷೆ

| Published : Jun 09 2024, 01:37 AM IST

ಇಂದಿನಿಂದ ಕರಾವಳಿಯಲ್ಲಿ ರೆಡ್ ಅಲರ್ಟ್‌, ಭಾರಿ ಮಳೆ ನಿರೀಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

ದ.ಕ.ಜಿಲ್ಲೆಯಲ್ಲಿ ಮುಂಗಾರು ಮಳೆ ಕಾಣಿಸಿದ ಬೆನ್ನಿಗೆ ಮಂಗಳೂರಿನ ಸಮುದ್ರ ತೀರ ಪ್ರಕ್ಷುಬ್ದಗೊಳ್ಳುವ ಸೂಚನೆ ಕಾಣಿಸಿದೆ.

ಕನ್ನಡಪ್ರಭ ವಾರ್ತೆ ಮಂಗಳೂರುನೈಋತ್ಯ ಮುಂಗಾರು ನಿಧಾನವಾಗಿ ಕರಾವಳಿಯಲ್ಲಿ ವೇಗ ಪಡೆಯುತ್ತಿದೆ. ಶನಿವಾರ ಇಡೀ ದಿನ ಆಗಾಗ ಮಳೆ ಹಾಗೂ ಮೋಡ ಕವಿದ ವಾತಾವರಣ ಕಂಡುಬಂದಿದೆ. ಭಾರತೀಯ ಹವಾಮಾನ ಇಲಾಖೆ ಜೂ.9ರಿಂದ 11ರ ವರೆಗೆ ಮೂರು ದಿನಗಳ ಕಾಲ ಕರಾವಳಿಯಲ್ಲಿ ರೆಡ್‌ ಅಲರ್ಟ್‌ ಘೋಷಿಸಿದ್ದು, ಭಾರಿ ಮಳೆಯ ಮುನ್ಸೂಚನೆ ನೀಡಿದೆ.

ದ.ಕ.ಜಿಲ್ಲೆಯಲ್ಲಿ ಶನಿವಾರ ಸುರಿದ ಧಾರಾಕಾರ ಮಳೆಗೆ ಮಂಗಳೂರು ಮತ್ತು ಕಲ್ಲಡ್ಕದಲ್ಲಿ ರಸ್ತೆಯಲ್ಲಿ ಕೃತಕ ನೆರೆ ಏರ್ಪಟ್ಟಿದೆ. ಬೆಳಗ್ಗೆ ಹಗುರ ಮಳೆಯಾದರೂ ಮಂಗಳೂರಿನ ಕೊಟ್ಟಾರ ಪ್ರದೇಶದಲ್ಲಿ ರಸ್ತೆ ಮೇಲೆ ನೀರು ಹರಿದು ವಾಹನ ಹಾಗೂ ಪಾದಚಾರಿ ಸಂಚಾರಕ್ಕೆ ತೊಂದರೆಯಾಗಿದೆ. ಕಲ್ಲಡ್ಕದಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು, ಹೆದ್ದಾರಿ ಸಂಚಾರಕ್ಕೆ ಬದಲು ರಸ್ತೆ ನಿರ್ಮಿಸಲಾಗಿದೆ. ಇಲ್ಲಿ ಕೂಡ ಮಳೆಗೆ ನೀರು ಹರಿದು ರಸ್ತೆ ಕೆಸರಿನ ರಾಡಿಯಂತಾಗಿದೆ. ಇಡೀ ದಿನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ಉಳ್ಳಾಲದಲ್ಲಿ ಅಲೆಗಳ ಅಬ್ಬರ: ದ.ಕ.ಜಿಲ್ಲೆಯಲ್ಲಿ ಮುಂಗಾರು ಮಳೆ ಕಾಣಿಸಿದ ಬೆನ್ನಿಗೆ ಮಂಗಳೂರಿನ ಸಮುದ್ರ ತೀರ ಪ್ರಕ್ಷುಬ್ದಗೊಳ್ಳುವ ಸೂಚನೆ ಕಾಣಿಸಿದೆ. ಉಳ್ಳಾಲ, ಸೋಮೇಶ್ವರ, ಉಚ್ಚಿಲ ಕಡಲ ತೀರದಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಸದ್ಯ ಕಲ್ಲುಗಳನ್ನು ಹಾಕಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಭಾರಿ ಗಾಳಿಯ ವೇಗಕ್ಕೆ ಅಲೆಗಳು ಅಬ್ಬರಿಸುತ್ತಿದ್ದು, ತೀರದ ನಿವಾಸಿಗಳು ಕಡಲ್ಕೊರೆತ ಭೀತಿಯಲ್ಲಿದ್ದಾರೆ. ಭಾರಿ ಮಳೆಯ ಸಾಧ್ಯತೆ ಹಿನ್ನೆಲೆಯಲ್ಲಿ ಮೀನುಗಾರರಿಗೆ ಜಿಲ್ಲಾಡಳಿತ ಎಚ್ಚರಿಕೆ ಸಂದೇಶ ಕಳುಹಿಸಿದ್ದು, ಅಲ್ಲದೆ ಸಮುದ್ರ ಹಾಗೂ ನದಿ ತೀರದ ಜನತೆಗೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ.

ಬಂಟ್ವಾಳದಲ್ಲಿ ಗರಿಷ್ಠ ಮಳೆ:

ದ.ಕ.ಜಿಲ್ಲೆಯಲ್ಲಿ ಶನಿವಾರ ದಿನದ ಸರಾಸರಿ ಮಳೆ 26.2 ಮಿಲಿ ಮೀಟರ್‌ ದಾಖಲಾಗಿದೆ. ಜಿಲ್ಲೆಯ ಬಂಟ್ವಾಳದಲ್ಲಿ ಗರಿಷ್ಠ 34.5 ಮಿ.ಮೀ. ಮಳೆ ದಾಖಲಾಗಿದೆ. ಬೆಳ್ತಂಗಡಿ 29.9 ಮಿ.ಮೀ, ಮಂಗಳೂರು 28.1 ಮಿ.ಮೀ, ಪುತ್ತೂರು 30 ಮಿ.ಮೀ, ಸುಳ್ಯ 17.3 ಮಿ.ಮೀ, ಮೂಡುಬಿದಿರೆ 30.3 ಮಿ.ಮೀ, ಕಡಬ 21.8 ಮಿ.ಮೀ, ಮೂಲ್ಕಿ 28.1 ಮಿ.ಮೀ, ಉಳ್ಳಾಲ 30.6 ಮಿ.ಮೀ. ಮಳೆ ದಾಖಲಾಗಿದೆ.