ಕರಾವಳಿಯಲ್ಲಿ ಇಂದು, ನಾಳೆ ರೆಡ್‌ ಅಲರ್ಟ್‌

| Published : Jul 06 2024, 12:49 AM IST

ಸಾರಾಂಶ

ದ.ಕ.ಜಿಲ್ಲೆಯಲ್ಲಿ ಶುಕ್ರವಾರ ದಿನಪೂರ್ತಿ ಆಗಾಗ ಮಳೆಯಾಗಿದೆ. ಮೋಡ ಕವಿದ ವಾತಾವರಣ ನಡುವೆ ಮಳೆ ಸುರಿಯತೊಡಗಿದೆ. ಮಳೆಯ ವಾತಾವರಣ ರಾತ್ರಿಯೂ ಮುಂದುವರಿದಿದೆ. ಗ್ರಾಮೀಣ ಭಾಗಗಳಲ್ಲೂ ದಿನವಿಡೀ ಸಾಧಾರಣ ಮಳೆಯಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಕರಾವಳಿಯಲ್ಲಿ ಮಳೆ ಮತ್ತೆ ವೇಗ ಪಡೆದುಕೊಂಡಿದೆ. ಇದೇ ವೇಳೆ ಭಾರತೀಯ ಹವಾಮಾನ ಇಲಾಖೆ ಜು.6 ಮತ್ತು 7ರಂದು ಕರಾವಳಿಯಲ್ಲಿ ರೆಡ್‌ ಅಲರ್ಟ್‌ ಘೋಷಿಸಿದ್ದು, ಭಾರಿ ಮಳೆಯ ಮುನ್ಸೂಚನೆ ನೀಡಿದೆ.

ದ.ಕ.ಜಿಲ್ಲೆಯಲ್ಲಿ ಶುಕ್ರವಾರ ದಿನಪೂರ್ತಿ ಆಗಾಗ ಮಳೆಯಾಗಿದೆ. ಮೋಡ ಕವಿದ ವಾತಾವರಣ ನಡುವೆ ಮಳೆ ಸುರಿಯತೊಡಗಿದೆ. ಮಳೆಯ ವಾತಾವರಣ ರಾತ್ರಿಯೂ ಮುಂದುವರಿದಿದೆ. ಗ್ರಾಮೀಣ ಭಾಗಗಳಲ್ಲೂ ದಿನವಿಡೀ ಸಾಧಾರಣ ಮಳೆಯಾಗಿದೆ. ಮೂಡುಬಿದಿರೆ ಗರಿಷ್ಠ ಮಳೆ: ಶುಕ್ರವಾರ ಬೆಳಗ್ಗಿನ ವರೆಗೆ ದ.ಕ.ಜಿಲ್ಲೆಯ ಮೂಡುಬಿದಿರೆಯಲ್ಲಿ ಗರಿಷ್ಠ 22.9 ಮಿಲಿ ಮೀಟರ್‌ ಮಳೆ ದಾಖಲಾಗಿದೆ. ಜಿಲ್ಲೆಯ ದಿನದ ಸರಾಸರಿ ಮಳೆ 12.7 ಮಿ.ಮೀ. ಆಗಿದೆ.

ಬೆಳ್ತಂಗಡಿ 14.5 ಮಿ.ಮೀ, ಬಂಟ್ವಾಳ 15.3 ಮಿ.ಮೀ, ಮಂಗಳೂರು 17.3, ಪುತ್ತೂರು 8.1 ಮಿ.ಮೀ, ಸುಳ್ಯ 6.7 ಮಿ.ಮೀ, ಕಡಬ 9.1 ಮಿ.ಮೀ, ಮೂಲ್ಕಿ 15.1 ಮಿ.ಮೀ, ಉಳ್ಳಾಲ 16.6 ಮಿ.ಮೀ. ಮಳೆ ದಾಖಲಾಗಿದೆ.

ದೂರವಾಗದ ಕುಸಿತ ಭೀತಿ: ದ.ಕ. ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆ ಕಡಿಮೆಯಾದರೂ ಗುಡ್ಡ ಕುಸಿತ, ತಡೆಗೋಡೆ ಕುಸಿತದ ಭೀತಿ ಇನ್ನೂ ದೂರವಾಗಿಲ್ಲ. ಈಗ ಮತ್ತ ಮಳೆ ಬಿರುಸು ಪಡೆಯುತ್ತಿದೆ.

ಮಂಗಳೂರು-ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಅಪಾಯ ಉಂಟಾಗಿದೆ. ಮಂಗಳೂರಿನ ವಾಮಂಜೂರು ಕೆತ್ತಿಕಲ್ ಬಳಿ ಭೂ ಕುಸಿತದ ಭೀತಿ ಎದುರಾಗಿದೆ. ಇಲ್ಲಿನ ಗುಡ್ಡದಿಂದ ಧುಮ್ಮಿಕ್ಕುವ ಕೃತಕ ಜಲಪಾತದಿಂದ ಕುಸಿತದ ಭೀತಿ ಉಂಟಾಗಿದೆ.ಚತುಷ್ಪಥ‌ ಹೆದ್ದಾರಿ ಕಾಮಗಾರಿಗಾಗಿ ಗುಡ್ಡ ಕೊರೆದ ಪರಿಣಾಮ ಕುಸಿತ ಹೇಳಲಾಗಿದೆ. ಸುಮಾರು 50-60 ಅಡಿಗಳಷ್ಟು ಎತ್ತರದಲ್ಲಿ ಗುಡ್ಡ ಅಪಾಯದಲ್ಲಿದೆ. ಹೆದ್ದಾರಿಗೆ ತಾಗಿಕೊಂಡೇ ಇರುವ ಗುಡ್ಡದಲ್ಲಿ ಆಗಾಗ್ಗೆ ಮಣ್ಣು ಕುಸಿತ ಉಂಟಾಗುತ್ತಿದೆ. ಸುಮಾರು 50-60 ಅಡಿಗಳಷ್ಟು ಎತ್ತರದಲ್ಲಿ ಗುಡ್ಡ ಅಪಾಯದಲ್ಲಿದೆ. ಹೆದ್ದಾರಿಗೆ ತಾಗಿಕೊಂಡೇ ಇರುವ ಗುಡ್ಡದಲ್ಲಿ ಆಗಾಗ ಮಣ್ಣು ಕುಸಿತ ಸಂಭವಿಸುತ್ತಿದೆ. ಗುಡ್ಡದ ತುದಿ ಭಾಗದಲ್ಲಿ ಭಾರೀ ಗಾತ್ರದ ಬಂಡೆಗಳು ಉರುಳಿ ಬೀಳುವ ಆತಂಕ ಎದುರಾಗಿದೆ. ಭಾರಿ ಮಳೆಯಾದರೆ ಮಣ್ಣು ಸಡಿಲಗೊಂಡು ಗುಡ್ಡ ಕುಸಿದರೆ ಅಪಾಯ ತಳ್ಳಿಹಾಕುವಂತಿಲ್ಲ ಎನ್ನುತ್ತಾರೆ ಸ್ಥಳೀಯರು. ಗುಡ್ಡದ ಕೆಳಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಸಾವಿರಾರು ವಾಹನಗಳ ಸಂಚರಿಸುವುದರಿಂದ ಕೋಟಿಗಟ್ಟಲೆ ಮೊತ್ತ ವ್ಯಯಿಸಿ ನಿರ್ಮಿಸಿದ ತಡೆಗೋಡೆಯೂ ವ್ಯರ್ಥವಾಗಲಿದೆ.

ಸಮುದ್ರ ಪ್ರಕ್ಷುಬ್ದ: ಹೊಸಬೆಟ್ಟು, ಸುರತ್ಕಲ್, ಪಣಂಬೂರು ಭಾಗದಲ್ಲಿ ಸಮುದ್ರ ಪ್ರಕ್ಷುಬ್ದಗೊಂಡಿದೆ. ಸಮುದ್ರ ಅಲೆಗಳ ಅಬ್ಬರಕ್ಕೆ ಈಗಾಗಲೇ ಕುಳಾಯಿಯಲ್ಲಿ ನಿರ್ಮಾಣ ಹಂತದ ಮೀನುಗಾರಿಕಾ ಬಂದರಿನ ಕಲ್ಲುಗಳು ಕೊಚ್ಚಿಹೋಗಿವೆ.

ಭಾರೀ ಅಲೆಗಳ ಅಬ್ಬರಕ್ಕೆ ಬ್ರೇಕ್ ವಾಟರ್ ಕಾಮಗಾರಿ ಸಮುದ್ರ ಪಾಲಾಗಿದೆ. ಸುಮಾರು 196 ಕೋಟಿ ರು. ವೆಚ್ಚದಲ್ಲಿ ಹೊಸ ಮೀನುಗಾರಿಕಾ ಬಂದರು ನಿರ್ಮಾಣವಾಗುತ್ತಿದ್ದು, ನಿರ್ಮಾಣ ಕಾಮಗಾರಿಯ ಭಾಗವಾಗಿ ಸಮುದ್ರದಲ್ಲಿ ಬ್ರೇಕ್ ವಾಟರ್ ಕಾಮಗಾರಿ ನಡೆಸಲಾಗಿತ್ತು. ಸಮುದ್ರದ ಮೇಲ್ಮೈಗೆ ಭಾರೀ ಗಾತ್ರದ ಕಲ್ಲುಗಳನ್ನು ಹಾಕಲಾಗಿತ್ತು. ಆದರೆ ಜಟ್ಟಿಯ ಬ್ರೇಕ್‌ ವಾಟರ್‌ನ ಒಂದು ಭಾಗ ಸಮುದ್ರದ ಅಬ್ಬರಕ್ಕೆ ಕೊಚ್ಚಿಹೋಗಿದೆ.