ಸಾರಾಂಶ
- ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ ಜಿಲ್ಲಾ ವರದಿಗಾರರ ಕೂಟ
- 2007ರಿಂದಲೂ ಬಾಡಿಗೆ ಕಟ್ಟಡದಲ್ಲಿಯೇ ನಡೆದಿರುವ ಕಾರ್ಯನಿರ್ವಹಣೆ: ಮಲ್ಲೇಶ - - - ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆ ಜಿಲ್ಲಾ ವರದಿಗಾರರ ಕೂಟಕ್ಕೆ ಪಾಲಿಕೆ ಹಿಂಭಾಗದ ಕೆಂಪು ಕಟ್ಟಡವೆಂದೇ ಹೆಸರಾಗಿರುವ ಕಟ್ಟಡವನ್ನು ನೀಡುವಂತೆ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ, ಪಾಲಿಕೆ ಆಯುಕ್ತೆ ರೇಣುಕಾ ಅವರಿಗೆ ಕೂಟದಿಂದ ಮನವಿ ಅರ್ಪಿಸಲಾಯಿತು. ಈ ಸಂದರ್ಭ ಡಿಸಿ ಪ್ರತಿಕ್ರಿಯಿಸಿ, ಕಟ್ಟಡ ದುರಸ್ತಿಪಡಿಸಿ, ಪೇಂಟಿಂಗ್ ಬಳಿಕ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಗೌರವಾಧ್ಯಕ್ಷ ಬಿ.ಎನ್. ಮಲ್ಲೇಶ ಮಾತನಾಡಿ, ವರದಿಗಾರರ ಕೂಟವು ಜಿಲ್ಲಾ ಕೇಂದ್ರದಲ್ಲಿ ಬಹುತೇಕ ಎಲ್ಲ ರಾಜ್ಯ, ಪ್ರಾದೇಶಿಕ, ಜಿಲ್ಲಾಮಟ್ಟದ ಪತ್ರಿಕೆಗಳು, ದೃಶ್ಯ ಮಾಧ್ಯಮಗಳನ್ನು ಒಳಗೊಂಡು ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆಗೆ ವಿಶಾಲ ಕಟ್ಟಡದ ಅಗತ್ಯವಿದೆ. ದಾವಣಗೆರೆ ನೂತನ ಜಿಲ್ಲೆಯಾಗಿ ಎರಡೂವರೆ ದಶಕವೇ ಕಳೆದಿದೆ. ವರದಿಗಾರರ ಕೂಟವು 2007ರಲ್ಲಿ ಅಸ್ತಿತ್ವಕ್ಕೆ ಬಂದಿದೆ. ಕೂಟ ಸ್ಥಾಪನೆ ಆದಾಗಿನಿಂದಲೂ ಬಾಡಿಗೆ ಕಟ್ಟಡದಲ್ಲಿಯೇ ಕಾರ್ಯನಿರ್ವಹಿಸುತ್ತಿದೆ. ಪಾಲಿಕೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಶಾಲಾ-ಕಾಲೇಜು, ಸಂಘ-ಸಂಸ್ಥೆಗಳು, ಸಂಘಟನೆಗಳು, ಬಡವರು, ರೈತಾಪಿ ಜನರು ಹೀಗೆ ಎಲ್ಲರಿಗೂ ಅನುಕೂಲ ಆಗುವಂತೆ ಜಿಲ್ಲಾ ಕೇಂದ್ರದ ಮಧ್ಯ ಭಾಗದಲ್ಲಿ ಕೂಟಕ್ಕೆ ಜಾಗ ಅಥವಾ ಕಟ್ಟಡಕ್ಕಾಗಿ ನಿರಂತರ ಪ್ರಯತ್ನ ನಡೆಯುತ್ತಲೇ ಬಂದಿದ್ದೇವೆ ಎಂದರು.ಅಧ್ಯಕ್ಷ ನಾಗರಾಜ ಬಡದಾಳ ಮಾತನಾಡಿ, ವರದಿಗಾರರ ಕೂಟಕ್ಕೆ ವ್ಯವಸ್ಥಿತ ಕಟ್ಟಡ, ಜಾಗಕ್ಕೆ ಹಿಂದೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಮನವಿ ಮಾಡಲಾಗಿತ್ತು. ಈಚೆಗೆ ಪಾಲಿಕೆ ಹಿಂಭಾಗದ ಕೆಂಪು ಕಟ್ಟಡ ನೀಡುವಂತೆ ಕೂಟದಿಂದ ಪುನಃ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರಿಗೆ ಮನವಿ ಮಾಡಲಾಗಿತ್ತು. ಪಾಲಿಕೆ ಹಿಂಭಾಗದ ಕೆಂಪು ಕಟ್ಟಡಕ್ಕೆ ಸ್ವತಃ ಸಂಸದೆ ಡಾ.ಪ್ರಭಾ ಅವರು ಹಿಂದಿನ ಮೇಯರ್ ಕೆ.ಚಮನ್ ಸಾಬ್, ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರ ಸಮೇತ ಭೇಟಿ, ವರದಿಗಾರರ ಕೂಟಕ್ಕೆ ಸ್ಥಳ ಸೂಕ್ತವಾಗಿರುವ ಬಗ್ಗೆ ಸಹಮತ ವ್ಯಕ್ತಪಡಿಸಿದ್ದರು ಎಂದು ತಿಳಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಮಾತನಾಡಿ, ಜಿಲ್ಲಾ ಕೇಂದ್ರವಾಗಿ 25 ವರ್ಷ ಕಳೆದರೂ ದಾವಣಗೆರೆ ವರದಿಗಾರರ ಕೂಟ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವುದು ಬೇಸರದ ಸಂಗತಿ. ಬೇರೆ ಜಿಲ್ಲೆಗಳಲ್ಲಿ ಪ್ರೆಸ್ ಕ್ಲಬ್ ನಗರದ ಕೇಂದ್ರ ಸ್ಥಳದಲ್ಲಿದೆ. ಬೆಂಗಳೂರಿನ ಪ್ರೆಸ್ ಕ್ಲಬ್ ಸಹ ಹೈಕೋರ್ಟ್, ವಿಧಾನಸೌಧ ಹೀಗೆ ಎಲ್ಲ ಕಚೇರಿಗೂ ಸಮೀಪದಲ್ಲೇ ಇದೆ ಎಂದರು.ಅದೇ ರೀತಿ ದಾವಣಗೆರೆಯಲ್ಲೂ ಮಾದರಿ ಪ್ರೆಸ್ ಕ್ಲಬ್ ಮಾಡಬೇಕೆಂಬ ಆಲೋಚನೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಇದೆ. ಈ ವಿಚಾರ ಕೂಟದ ಹಿರಿಯ ಸದಸ್ಯರು ಸಹ ಗಮನಕ್ಕೆ ತಂದಿದ್ದಾರೆ. ಸಚಿವ ಮಲ್ಲಿಕಾರ್ಜುನ, ಶಾಸಕ ಡಾ.ಶಿವಶಂಕರಪ್ಪ, ಸಂಸದೆ ಡಾ.ಪ್ರಭಾ ಸಹ ವರದಿಗಾರರ ಕೂಟಕ್ಕೆ ಕಟ್ಟಡ, ಜಾಗ ನೀಡುವ ಬಗ್ಗೆ ಉತ್ಸುಕರಾಗಿದ್ದಾರೆ. ಪಾಲಿಕೆ ಹಿಂಭಾಗದ ಕಟ್ಟಡ ದುರಸ್ತಿಪಡಿಸಿ, ಪೇಂಟಿಂಗ್ ಮಾಡಿಸಿ, ವರದಿಗಾರರ ಕೂಟಕ್ಕೆ ನೀಡುವ ಬಗ್ಗೆ ಪ್ರಾದೇಶಿಕ ಆಯುಕ್ತರ ಜೊತೆಗೆ ಚರ್ಚಿಸಿ, ಕ್ರಮ ಕೈಗೊಳ್ಳುತ್ತೇವೆ ಎಂದರು.
ಪ್ರಾದೇಶಿಕ ಆಯುಕ್ತರ ಜೊತೆಗೆ ಖುದ್ದಾಗಿ ಈ ಬಗ್ಗೆ ಚರ್ಚಿಸಲಾಗುವುದು. ಇದೇ ತಿಂಗಳ ಅಂತ್ಯದೊಳಗೆ ವರದಿಗಾರರ ಕೂಟದ ಮನವಿಗೆ ಸ್ಪಂದಿಸಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.ಮನವಿ ಸಲ್ಲಿಸುವ ವೇಳೆ ಖಜಾಂಚಿ ಈ.ಪವನಕುಮಾರ, ಪಿಆರ್‌ಒ ಪಿ.ಎಸ್.ಲೋಕೇಶ, ಕಾರ್ಯದರ್ಶಿಗಳಾದ ಬಿ.ಸಿಕಂದರ್, ಕೆ.ಎಸ್. ಚನ್ನಬಸಪ್ಪ (ಶಂಭು), ಸಂಘಟನಾ ಕಾರ್ಯದರ್ಶಿ ಆರ್.ರವಿಬಾಬು, ಐ.ಗುರುಶಾಂತಪ್ಪ, ಆರ್.ಎಸ್. ತಿಪ್ಪೇಸ್ವಾಮಿ, ಬಿ.ಜಿ. ಮಹಾದೇವ, ಎಚ್.ಟಿ. ರಮೇಶ, ಎನ್.ನಿಂಗರಾಜು, ವಸಂತಕುಮಾರ ಇತರರು ಇದ್ದರು.
- - --3ಕೆಡಿವಿಜಿ5, 6.ಜೆಪಿಜಿ:
ದಾವಣಗೆರೆ ಜಿಲ್ಲಾ ವರದಿಗಾರರ ಕೂಟಕ್ಕೆ ಕಟ್ಟಡ ನೀಡುವಂತೆ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ, ಪಾಲಿಕೆ ಆಯುಕ್ತೆ ರೇಣುಕಾ ಅವರಿಗೆ ಕೂಟದ ಗೌರವಾಧ್ಯಕ್ಷ ಬಿ.ಎನ್.ಮಲ್ಲೇಶ, ಅಧ್ಯಕ್ಷ ನಾಗರಾಜ ಎಸ್.ಬಡದಾಳ್ ನೇತೃತ್ವದಲ್ಲಿ ಮನವಿ ಅರ್ಪಿಸಲಾಯಿತು.