ರೆಡ್ ಕ್ರಾಸ್‌ ಬೈಲಾ: ಡಿಸಿ ವಿರುದ್ಧ ಕಾನೂನು ಹೋರಾಟ

| Published : Nov 14 2025, 01:30 AM IST

ಸಾರಾಂಶ

ರಕ್ತದಾನದಂತಹ ಮಾನವೀಯ ಕಾರ್ಯದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಲ್ಲಿ ಬೈಲಾವನ್ನೇ ಉಲ್ಲಂಘಿಸಿ, ಅದರ ನಿಯಮಗಳನ್ನೆಲ್ಲಾ ಧಿಕ್ಕರಿಸಿ, ಜಿಲ್ಲಾಧಿಕಾರಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ. ಇದರ ವಿರುದ್ಧ ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸಲಿದ್ದೇವೆ ಎಂದು ರೆಡ್ ಕ್ರಾಸ್ ಸಂಸ್ಥೆ ಚುನಾಯಿತ ಪ್ರತಿನಿಧಿಗಳು ಎಚ್ಚರಿಸಿದ್ದಾರೆ.

- ನಿಯಮಗಳ ಉಲ್ಲಂಘಿಸಿ ಏಕಪಕ್ಷೀಯ ನಿರ್ಧಾರ: ಸಂಸ್ಥೆ ಸದಸ್ಯ ಯೋಗೇಶ ಆರೋಪ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ರಕ್ತದಾನದಂತಹ ಮಾನವೀಯ ಕಾರ್ಯದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಲ್ಲಿ ಬೈಲಾವನ್ನೇ ಉಲ್ಲಂಘಿಸಿ, ಅದರ ನಿಯಮಗಳನ್ನೆಲ್ಲಾ ಧಿಕ್ಕರಿಸಿ, ಜಿಲ್ಲಾಧಿಕಾರಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ. ಇದರ ವಿರುದ್ಧ ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸಲಿದ್ದೇವೆ ಎಂದು ರೆಡ್ ಕ್ರಾಸ್ ಸಂಸ್ಥೆ ಚುನಾಯಿತ ಪ್ರತಿನಿಧಿಗಳು ಎಚ್ಚರಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಸದಸ್ಯ ಎಚ್.ಎಸ್. ಯೋಗೇಶ, ನ.14ರಂದು ನಡೆದ ಸಂಘದ ಚುನಾವಣೆಯಲ್ಲಿ ತಮ್ಮ ತಂಡದ 9 ಸದಸ್ಯರು ಆಯ್ಕೆಯಾಗಿದ್ದು, 2 ತಿಂಗಳಾದರೂ ಸಂಸ್ಥೆ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಅವರು ನಮಗೆ ಯಾವುದೇ ಅಧಿಕಾರ ನೀಡಿಲ್ಲ, ಯಾವುದೇ ಪ್ರಮಾಣ ವಚನ ಬೋಧಿಸಿಲ್ಲ ಎಂದರು.

ನ.14ರಂದು ಏಕಾಏಕಿ ಸಭೆ ಕರೆದ ಬಗ್ಗೆ ನಮಗೆ ನೋಟಿಸ್‌ ಕಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಏಕಪಕ್ಷೀಯ ನಿರ್ಧಾರ ವಿರೋಧಿಸಿ ಗೆದ್ದ ನಾವು 9 ಸದಸ್ಯರು ಸಭೆಯನ್ನು ಬಹಿಷ್ಕರಿಸಿದ್ದೇವೆ. ಮೂರ್ನಾಲ್ಕು ಸಲ ಜಿಲ್ಲಾಧಿಕಾರಿ ಅವರನ್ನು ಸಂಪರ್ಕಿಸಿ, ಪ್ರಮಾಣ ವಚನ ಬೋಧಿಸಿ, ರೆಡ್‌ ಕ್ರಾಸ್ ಸಂಸ್ಥೆಯ ಕೆಲಸ, ಕಾರ್ಯಗಳನ್ನು ಸುಸೂತ್ರವಾಗಿ ನಡೆಯುವಂತೆ ಕ್ರಮ ಕೈಗೊಳ್ಳಲು ಮನವಿ ಮಾಡಿ ಬಂದಿದ್ದೇವೆ. ಆದರೂ, ಸ್ಪಂದಿಸಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ನನಗೆ ಕಾನೂನು ಗೊತ್ತಿದೆ, ಏನೂ ಹೇಳಲು ಬರಬೇಡಿ, ನನ್ನಂತೆ ಮಾಡುತ್ತೇನೆಂದು ಹೇಳಿ ಕಳಿಸುತ್ತಾರೆ ಎಂದು ದೂರಿದರು.

ಸಂಸ್ಥೆಯ ಸದಸ್ಯರಾದ ಕಿರಣ್ ಎಂ. ಜೈನ್, ಬೆಳ್ಳೂಡಿ ಶಿವಕುಮಾರ, ಎಂ.ಬಿ. ಯುವರಾಜ, ಸಂತೋಷ, ಬಸವರಾಜ ಹಳ್ಳಿಕೆರೆ, ಎಚ್.ಪಿ.ವಿಶ್ವಾಸ್, ಆನಂದಪ್ಪ ಸಂಗಪ್ಪ ಜಿರಗಿ ಇತರರು ಇದ್ದರು.

- - -

(ಬಾಕ್ಸ್‌) * ಡಿಸಿಗೆ ಇ-ಮೇಲ್‌ನಲ್ಲಿ ನೋಟಿಸ್‌ ಕಾಂಗ್ರೆಸ್ ಪಕ್ಷದ 11 ಜನರನ್ನು ನಾಮನಿರ್ದೇಶಿತ ಸದಸ್ಯರಾಗಿ ಜಿಲ್ಲಾಧಿಕಾರಿ ನೇಮಕ ಮಾಡಿದ್ದಾರೆ. ಚುನಾಯಿತ 9 ಸದಸ್ಯರಿದ್ದೇವೆ. ನಾಮನಿರ್ದೇಶಿತರಾಗಿ ಆಯ್ಕೆಯಾದವರೇ 11 ಜನರಿದ್ದಾರೆ. ಇದರಿಂದಾಗಿ ನಾವ್ಯಾರೂ ರೆಡ್ ಕ್ರಾಸ್ ಸಂಸ್ಥೆಯಲ್ಲಿ ಕೆಲಸ ಮಾಡಲಾಗುತ್ತಿಲ್ಲ. ಇಂತಹ ಏಕಪಕ್ಷೀಯ ನಿರ್ಧಾರ ಕೈಗೊಂಡ ಜಿಲ್ಲಾಧಿಕಾರಿ ಕ್ರಮ ಸರಿಯಲ್ಲ. ಇದನ್ನು ವಿರೋಧಿಸಿ ನಾವು ಹೈಕೋರ್ಟ್ ಮೆಟ್ಟಿಲೇರಲಿದ್ದೇವೆ ಎಂದು ಅವರು ಎಚ್ಚರಿಸಿದರು. ಬೆಂಗಳೂರಿನ ಹೈಕೋರ್ಟ್‌ನ ನ್ಯಾಯಾಧೀಶರು ಹಾಗೂ ಜಿಲ್ಲಾಧಿಕಾರಿಗೆ ಈಗಾಗಲೇ ಇ-ಮೇಲ್ ಮೂಲಕ ನೋಟಿಸ್ ಸಹ ರವಾನಿಸಿದ್ದೇವೆ. ನ.13ರಂದು ನಡೆಯಬೇಕಿದ್ದ ಸಭೆಗೆ 9 ಸದಸ್ಯರು ಸಭೆಯು ಕಾನೂನಾತ್ಮಕವಾಗಿ ನಡೆಯುತ್ತಿಲ್ಲವೆಂದು ಜಿಲ್ಲಾಧಿಕಾರಿಗೆ ತಕರಾರು ಅರ್ಜಿಯನ್ನೂ ಸಲ್ಲಿಸಿ ಬಂದಿದ್ದೇವೆ. ಜಿಲ್ಲಾಧಿಕಾರಿ ಯಾವುದೋ ಒತ್ತಡಕ್ಕೆ ಮಣಿದು, ಹೀಗೆಲ್ಲಾ ಮಾಡುತ್ತಿದ್ದಾರೆಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಸೇವಾ ಸಂಸ್ಥೆಯಾದ ರೆಡ್ ಕ್ರಾಸ್‌ ಸಂಸ್ಥೆ ಹಿತಕಾಯುವ ಕೆಲಸವನ್ನು ಜಿಲ್ಲಾಡಳಿತ ಮಾಡಲಿ ಎಂದು ಒತ್ತಾಯಿಸಿದರು.

- - -

-13ಕೆಡಿವಿಜಿ3.ಜೆಪಿಜಿ:

ದಾವಣಗೆರೆಯಲ್ಲಿ ಗುರುವಾರ ರೆಡ್ ಕ್ರಾಸ್ ಸಂಸ್ಥೆ ಚುನಾಯಿತ ಸದಸ್ಯ ಎಚ್.ಎಸ್.ಯೋಗೇಶ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಿರಣ್ ಎಂ. ಜೈನ್, ಬೆಳ್ಳೂಡಿ ಶಿವಕುಮಾರ, ಎಂ.ಬಿ. ಯುವರಾಜ, ಸಂತೋಷ ಇದ್ದರು.