ರೆಡ್ ಕ್ರಾಸ್ ಸಂಸ್ಥೆಯು ವಿಶ್ವದಲ್ಲಿ ಮಾನವೀಯ ಧರ್ಮವನ್ನು ಪ್ರಚುರಪಡಿಸುವ ಮೂಲಕ ವಿಶ್ವ ಶಾಂತಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಲಕ್ಷಾಂತರ ಮಂದಿಗೆ ರೆಡ್ ಕ್ರಾಸ್ ನೆರವನ್ನು ವಿಶ್ವವ್ಯಾಪಿ ಒದಗಿಸುತ್ತಾ ಬಂದಿದ್ದು, ಕೊಡಗಿನಲ್ಲಿಯೂ ರೆಡ್ ಕ್ರಾಸ್ ಗೆ ಹೆಚ್ಚಿನ ಸದಸ್ಯರು ಸೇರ್ಪಡೆಯಾಗಬೇಕು ಎಂದು ರೆಡ್ ಕ್ರಾಸ್ ರಾಜ್ಯ ಉಪಾಧ್ಯಕ್ಷ ಬಿ. ಭಾಸ್ಕರ ರಾವ್ ಕರೆ ನೀಡಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ರೆಡ್ ಕ್ರಾಸ್ ಸಂಸ್ಥೆಯು ವಿಶ್ವದಲ್ಲಿ ಮಾನವೀಯ ಧರ್ಮವನ್ನು ಪ್ರಚುರಪಡಿಸುವ ಮೂಲಕ ವಿಶ್ವ ಶಾಂತಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಲಕ್ಷಾಂತರ ಮಂದಿಗೆ ರೆಡ್ ಕ್ರಾಸ್ ನೆರವನ್ನು ವಿಶ್ವವ್ಯಾಪಿ ಒದಗಿಸುತ್ತಾ ಬಂದಿದ್ದು, ಕೊಡಗಿನಲ್ಲಿಯೂ ರೆಡ್ ಕ್ರಾಸ್ ಗೆ ಹೆಚ್ಚಿನ ಸದಸ್ಯರು ಸೇರ್ಪಡೆಯಾಗಬೇಕು ಎಂದು ರೆಡ್ ಕ್ರಾಸ್ ರಾಜ್ಯ ಉಪಾಧ್ಯಕ್ಷ ಬಿ. ಭಾಸ್ಕರ ರಾವ್ ಕರೆ ನೀಡಿದರು.ನಗರದ ರೆಡ್ ಕ್ರಾಸ್ ಭವನಕ್ಕೆ ಭೇಟಿ ನೀಡಿದ ಭಾಸ್ಕರ ರಾವ್ ಈ ಸಂದರ್ಭ ರೆಡ್ ಕ್ರಾಸ್ ಸದಸ್ಯರನ್ನುದ್ದೇಶಿಸಿ ಮಾತನಾಡಿ, ಯಾವುದೇ ದೇಶಗಳ ನಡುವೆ ಅಶಾಂತಿಯುತ ವಾತಾವರಣ ಪರಿಸ್ಥಿತಿ ಉಧ್ಬವಿಸಿದಾಗ ರೆಡ್ ಕ್ರಾಸ್ ಪ್ರಮುಖರು ಅಂಥ ದೇಶಗಳ ನಡುವೆ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಸಕ್ರಿಯರಾಗುತ್ತಾರೆ. ವಿಶ್ವದಲ್ಲಿ ಶಾಂತಿ ಕಾಪಾಡುವುದೇ ರೆಡ್ ಕ್ರಾಸ್ ನ ಪ್ರಮುಖ ಉದ್ದೇಶವಾಗಿದೆ ಎಂದರು.ಕೊಡಗು ಎಸ್‌ಪಿ ಬಿಂದುಮಣಿ ಮಾತನಾಡಿ, ಕೊಡಗಿನಲ್ಲಿ ಮಾದಕ ವ್ಯಸನಪೀಡಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದ್ದು, ರೆಡ್ ಕ್ರಾಸ್ ಮೂಲಕ ಮಾದಕ ವ್ಯಸನಪೀಡಿತರನ್ನು ಚಟಮುಕ್ತ ಮಾಡುವಂಥ ಕಾರ್‍ಯಕ್ರಮ ಆಯೋಜಿಸಬೇಕು ಎಂದು ಸಲಹೆ ನೀಡಿದರು.
ಕಳೆದ 20 ದಿನಗಳಿಂದ ಕೊಡಗಿನ ಪ್ರತಿ ಪೊಲೀಸ್ ಠಾಣೆಗಳಿಗೂ ಭೇಟಿ ನೀಡಿ ಆಯಾ ಗ್ರಾಮ ವ್ಯಾಪ್ತಿಯಲ್ಲಿನ ಕಾನೂನು ಸಮಸ್ಯೆಗಳನ್ನು ತಿಳಿದುಕೊಂಡು ಸೂಕ್ತ ಪರಿಹಾರೋಪಾಯ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದೇನೆ ಎಂದು ಹೇಳಿದರು.ರೆಡ್ ಕ್ರಾಸ್ ಕೊಡಗು ಘಟಕದ ಸಭಾಧ್ಯಕ್ಷ ಬಿ.ಕೆ. ರವೀಂದ್ರ ರೈ ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ ರೆಡ್ ಕ್ರಾಸ್ ನಲ್ಲಿ 350 ಸದಸ್ಯರಿದ್ದು, ಮುಂದಿನ ದಿನಗಳಲ್ಲಿ ಸೋಮವಾರಪೇಟೆ, ವೀರಾಜಪೇಟೆಯಲ್ಲೂ ಘಟಕ ಪ್ರಾರಂಭಿಸಿ ಸದಸ್ಯತ್ವವನ್ನು ಹೆಚ್ಚಿಸಲಾಗುತ್ತದೆ. ಮಹಿಳೆಯರಿಗಾಗಿ ಕ್ಯಾನ್ಸರ್ ತಪಾಸಣೆ ಶಿಬಿರವನ್ನೂ ಶೀಘ್ರದಲ್ಲೇ ಆಯೋಜಿಸಲಾಗುತ್ತದೆ ಎಂದೂ ರವೀಂದ್ರ ರೈ ಮಾಹಿತಿ ನೀಡಿದರು.
ಮಳೆಗಾಲದಲ್ಲಿ ರೆಡ್ ಕ್ರಾಸ್ ಭವನದಲ್ಲಿ ಕಾಳಜಿ ಕೇಂದ್ರದ ಮೂಲಕ ನಿರಾಶ್ರಿತರಿಗೆ ಆಶ್ರಯ ನೀಡಲಾಗುತ್ತಿದೆ. ಈ ಭವನದ ಮೇಲಂತಸ್ತಿನ ನಿರ್ಮಾಣ ಕಾರ್‍ಯವನ್ನು ಈ ವರ್ಷದಲ್ಲೇ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.ರೆಡ್ ಕ್ರಾಸ್ ಕೊಡಗು ಘಟಕದ ಉಪಾಧ್ಯಕ್ಷ ಅನಿಲ್ ಎಚ್.ಟಿ. ನಿರೂಪಿಸಿದರು. ಖಜಾಂಜಿ ಪ್ರಸಾದ್ ಗೌಡ ಉಪಸ್ಥಿತರಿದ್ದರು. ರೆಡ್ ಕ್ರಾಸ್ ಪ್ರಮುಖರಾದ ಎಸ್.ಸಿ. ಸತೀಶ್, ಮಧುಕರ್, ಉತ್ತಯ್ಯ, ಸತೀಶ್ ರೈ, ವಿಜಯ್ ರೈ, ವಸಂತ್, ಪ್ರಭಾಕರ್, ಲೋಕೇಶ್ ಹಾಜರಿದ್ದರು.