ತಾಲೂಕಿನಾದ್ಯಂತ ಕಳೆದ ಕೆಲವು ತಿಂಗಳಿಂದ ತೆಂಗಿನ ತೋಟಗಳಲ್ಲಿ ಕೆಂಪು ಮೂತಿ ದುಂಬಿ (ರಿಂಕೋಪೋರಸ್ ಫೆರುಜನಿಯಸ್) ಎಂಬ ಕೀಟದ ಹಾವಳಿ ಹೆಚ್ಚಾಗಿ, ತೆಂಗಿನ ಮರಗಳು ರೋಗಬಾಧೆಗೆ ಒಳಗಾಗಿ ಒಣಗುತ್ತಿದ್ದು, ರೈತರಲ್ಲಿ ಭಾರೀ ಆತಂಕ ಮನೆಮಾಡಿದೆ.
ರೋಗಬಾಧೆಗೊಳಗಾದ ಪ್ರದೇಶಕ್ಕೆ ವಿಜ್ಞಾನಿಗಳ ತುರ್ತು ಭೇಟಿ
ಕನ್ನಡಪ್ರಭ ವಾರ್ತೆ ಅಂಕೋಲಾತಾಲೂಕಿನಾದ್ಯಂತ ಕಳೆದ ಕೆಲವು ತಿಂಗಳಿಂದ ತೆಂಗಿನ ತೋಟಗಳಲ್ಲಿ ಕೆಂಪು ಮೂತಿ ದುಂಬಿ (ರಿಂಕೋಪೋರಸ್ ಫೆರುಜನಿಯಸ್) ಎಂಬ ಕೀಟದ ಹಾವಳಿ ಹೆಚ್ಚಾಗಿ, ತೆಂಗಿನ ಮರಗಳು ರೋಗಬಾಧೆಗೆ ಒಳಗಾಗಿ ಒಣಗುತ್ತಿದ್ದು, ರೈತರಲ್ಲಿ ಭಾರೀ ಆತಂಕ ಮನೆಮಾಡಿದೆ.
ಈ ಗಂಭೀರ ಪರಿಸ್ಥಿತಿಯನ್ನು ಮನಗಂಡು ಶಿರಸಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ತಂಡ ಹಿಚಕಡ ಶೇಟಗೇರಿ, ಕಣಗಿಲ್ ಹಾಗೂ ಮೊಗಟಾ ಗ್ರಾಮಗಳ ತೆಂಗಿನ ತೋಟಗಳಿಗೆ ಭೇಟಿ ನೀಡಿ ಸವಿಸ್ತಾರವಾಗಿ ಪರಿಶೀಲನೆ ನಡೆಸಿತು.ತಜ್ಞರ ಪ್ರಕಾರ, ಈ ಕೀಟದ ಹಾವಳಿ ಸಾಮಾನ್ಯವಾಗಿ ಏಪ್ರಿಲ್, ಸೆಪ್ಟೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ದುಂಬಿಯ ಮರಿ ಹುಳಗಳು ತೆಂಗಿನ ಕಾಂಡವನ್ನು ಒಳಗಿನಿಂದ ಕೊರೆದು, ಅದರ ಮೃದು ಭಾಗವನ್ನು ತಿಂದು ಮರದ ಆಂತರಿಕ ಭಾಗವನ್ನು ದುರ್ಬಲಗೊಳಿಸುತ್ತವೆ. ಇದರ ಪರಿಣಾಮವಾಗಿ ಮರದ ಹೊರಭಾಗದಲ್ಲಿ ಯಾವುದೇ ಲಕ್ಷಣಗಳು ಸ್ಪಷ್ಟವಾಗಿ ಕಾಣಿಸದೇ ಇದ್ದರೂ, ಅಕಸ್ಮಿಕವಾಗಿ ಮರ ಬಿದ್ದುಹೋಗುವ ಸಂಭವ ಹೆಚ್ಚಿರುತ್ತದೆ.
ಈ ಕೀಟದಿಂದ ಬಾಧಿತಗೊಂಡ ಮರಗಳಲ್ಲಿ ಕಾಂಡದ ಮೇಲೆ ಸಣ್ಣ ರಂಧ್ರಗಳು ಕಾಣಿಸಿಕೊಳ್ಳುತ್ತವೆ. ಆದರೆ ಕೀಟದ ಬೆಳವಣಿಗೆಯ ಎಲ್ಲಾ ಹಂತಗಳು ಕಾಂಡದೊಳಗೇ ನಡೆಯುವುದರಿಂದ ಆರಂಭಿಕ ಹಂತದಲ್ಲೇ ಗುರುತಿಸುವುದು ಕಷ್ಟವಾಗುತ್ತದೆ ಎಂದು ವಿಜ್ಞಾನಿಗಳು ರೈತರಿಗೆ ತಿಳಿಸಿದರು.ಈ ಸಂದರ್ಭ ಕೀಟಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ರೂಪಾ ಪಾಟೀಲ, ತೋಟಗಾರಿಕೆ ತಜ್ಞ ಡಾ. ಹರೀಶ, ಕೃಷಿ ವಿಜ್ಞಾನಿ ಡಾ. ಅಮೀತ್ ಸೇರಿದಂತೆ ಸ್ಥಳೀಯ ರೈತರು ಬೊಮ್ಮಯ್ಯ ನಾಯಕ, ಜಯರಾಮ ನಾಯಕ, ಮಂಜುನಾಥ್ ನಾಯಕ, ಮಾರುತಿ ನಾಯಕ ಉಪಸ್ಥಿತರಿದ್ದರು.ನಿಯಂತ್ರಣಕ್ಕೆ ಅಗತ್ಯ ಕ್ರಮ
ತೆಂಗಿನ ತೋಟಗಳನ್ನು ಈ ಕೀಟದ ಹಾವಳಿಯಿಂದ ರಕ್ಷಿಸಲು ವಿಜ್ಞಾನಿಗಳು ಸೂಚಿಸಿದ ಕೆಲವು ಪ್ರಮುಖ ಕ್ರಮಗಳು.ಕಾಂಡದ ರಂಧ್ರಗಳಲ್ಲಿ ಕಬ್ಬಿಣದ ಕೊಕ್ಕೆಯನ್ನು ತೂರಿಸಿ ದುಂಬಿಗಳನ್ನು ಹೊರತೆಗೆದು ನಾಶಗೊಳಿಸುವುದು, 250 ಗ್ರಾಂ ಬೇವಿನ ಹಿಂಡಿ ಅಥವಾ ಶೇ.5 ಮೆಲಾಥಿಯಾನ್ ಪುಡಿಯನ್ನು ಮರಳಿನೊಂದಿಗೆ ಬೆರೆಸಿ ಮರದ ಮೇಲ್ಭಾಗದ ಗರಿಗಳಲ್ಲಿ ಹಾಕುವುದು, (ಮೇ, ಸೆಪ್ಟೆಂಬರ್, ಡಿಸೆಂಬರ್ ತಿಂಗಳಲ್ಲಿ) ದುಂಬಿ ಕೊರೆದ ರಂಧ್ರಗಳೊಳಗೆ ಇದೇ ಮಿಶ್ರಣ ಹಾಕುವುದು, ಸೈಮ್-ಆರ್.ಬಿ. ಮೋಹಕ ಬಲೆಯ ಮೂಲಕ ಹೆಣ್ಣು-ಗಂಡು ದುಂಬಿಗಳನ್ನು ಆಕರ್ಷಿಸಿ ನಾಶಗೊಳಿಸುವುದು, ಗೊಬ್ಬರದ ಗುಂಡಿಗಳಿಗೆ ಜೈವಿಕ ಕೀಟನಾಶಕ ಮೆಟರೈಜಿಯಂ ಅನಿಸೊಪಿಯೆ ಬಳಸುವುದು.ರೈತರು ತಮ್ಮ ತೋಟಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಕೀಟಬಾಧಿತ ಭಾಗಗಳು ಕಂಡು ಬಂದ ತಕ್ಷಣವೇ ಅವನ್ನು ತೆಗೆದು ನಾಶಪಡಿಸಬೇಕು. ಜೊತೆಗೆ ಅಂತರ ಬೆಳೆಯಾಗಿ ಶುಂಠಿ, ಅರಿಶಿಣ, ಕೋಕೋ, ಬಾಳೆ, ವೆನಿಲಾ, ಮೆಣಸು ಇತ್ಯಾದಿ ಬೆಳೆಗಳನ್ನು ಬೆಳೆಯುವುದರಿಂದ ಹೆಚ್ಚುವರಿ ಆದಾಯ ಪಡೆಯಬಹುದು ಎನ್ನುತ್ತಾರೆ ಶಿರಸಿಯ ಕೃಷಿ ವಿಜ್ಞಾನ ಕೇಂದ್ರದ ಕೀಟಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ರೂಪಾ ಪಾಟೀಲ.