ಕೆಂಪುಕಲ್ಲು ಸಮಸ್ಯೆ ಇತ್ಯರ್ಥ, ಹೊಸ ನಿಯಮಕ್ಕೆ ಸಿಎಂ ಅಂಕಿತ

| Published : Sep 17 2025, 01:08 AM IST

ಕೆಂಪುಕಲ್ಲು ಸಮಸ್ಯೆ ಇತ್ಯರ್ಥ, ಹೊಸ ನಿಯಮಕ್ಕೆ ಸಿಎಂ ಅಂಕಿತ
Share this Article
  • FB
  • TW
  • Linkdin
  • Email

ಸಾರಾಂಶ

ಇನ್ಮುಂದೆ ಕಾನೂನು ಬದ್ಧವಾಗಿ ಕೆಂಪುಕಲ್ಲು ತೆಗೆಯಲು ಸರಳೀಕೃತ ನಿಯಮ ರೂಪಿಸಲಾಗಿದ್ದು, ಇದಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಮುಖ್ಯಮಂತ್ರಿಯ ಒಪ್ಪಿಗೆಯೂ ದೊರೆತಿದೆ ಎಂದು ವಿಧಾನಸಭೆ ಸ್ಪೀಕರ್‌ ಯು.ಟಿ. ಖಾದರ್‌ ಫರೀದ್‌ ತಿಳಿಸಿದ್ದಾರೆ.

ಇನ್ನೆರಡು ದಿನಗಳಲ್ಲಿ ಬರಲಿದೆ ಎಸ್‌ಒಪಿ, 25 ಮಂದಿಗೆ ಪರ್ಮಿಟ್‌, ರಾಯಲ್ಟಿ ಇಳಿಕೆ: ಯು.ಟಿ. ಖಾದರ್‌

ಕನ್ನಡಪ್ರಭ ವಾರ್ತೆ ಮಂಗಳೂರುಕೆಂಪು ಕಲ್ಲಿಗೆ ಸಂಬಂಧಿಸಿದ ಸಮಸ್ಯೆ ಸರ್ಕಾರದ ಮಟ್ಟದಲ್ಲಿ ಇತ್ಯರ್ಥವಾಗಿದೆ. ಇನ್ಮುಂದೆ ಕಾನೂನು ಬದ್ಧವಾಗಿ ಕೆಂಪುಕಲ್ಲು ತೆಗೆಯಲು ಸರಳೀಕೃತ ನಿಯಮ ರೂಪಿಸಲಾಗಿದ್ದು, ಇದಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಮುಖ್ಯಮಂತ್ರಿಯ ಒಪ್ಪಿಗೆಯೂ ದೊರೆತಿದೆ ಎಂದು ವಿಧಾನಸಭೆ ಸ್ಪೀಕರ್‌ ಯು.ಟಿ. ಖಾದರ್‌ ಫರೀದ್‌ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಳೀಕರಣ ಮಾಡಲಾದ ಹೊಸ ನೀತಿಯು ಜಿಲ್ಲಾಡಳಿತದ ಮೂಲಕ ಅನುಷ್ಠಾನಗೊಳ್ಳಲಿದೆ. ಇನ್ನೆರಡು ದಿನಗಳಲ್ಲಿ ಈ ಕುರಿತಾದ ಮಾರ್ಗಸೂಚಿ (ಎಸ್‌ಒಪಿ) ಬರಲಿದೆ ಎಂದು ಹೇಳಿದರು.25 ಮಂದಿಗೆ ಪರ್ಮಿಟ್‌, ರಾಯಲ್ಟಿ ಇಳಿಕೆ: ಹೊಸ ನಿಯಮದ ಪ್ರಕಾರ ಕೆಂಪುಕಲ್ಲು ತೆಗೆಯಲು 53 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ 25 ಮಂದಿಗೆ ಲೈಸನ್ಸ್‌ ಹಾಗೂ ಪರ್ಮಿಟ್‌ ನೀಡಲಾಗಿದೆ. ಉಳಿದ ಅರ್ಜಿಗಳನ್ನು ಅವರ ಕ್ರಮಸಂಖ್ಯೆ ಪ್ರಕಾರ ವಿಲೇವಾರಿ ಮಾಡಿ ಲೈಸನ್ಸ್‌ ನೀಡಲಾಗುತ್ತದೆ. ಈ ಹಿಂದೆ ಇದ್ದ 280 ರು. ರಾಯಲ್ಟಿಯನ್ನು ಗಣನೀಯವಾಗಿ ಇಳಿಕೆ ಮಾಡಲಾಗಿದೆ ಎಂದು ಖಾದರ್‌ ತಿಳಿಸಿದರು.ವಿಷಯ ಗೊತ್ತಿದ್ದರೂ ಪ್ರತಿಭಟನೆ ಮಾಡ್ತಾರೆ: ಕೆಂಪುಕಲ್ಲು ಸಮಸ್ಯೆ ಇತ್ಯರ್ಥವಾಗಿದೆ ಎಂಬ ವಿಚಾರ ಎಲ್ಲ ಶಾಸಕರು, ಸಂಸದರಿಗೆ ಗೊತ್ತಿದ್ದರೂ ಪ್ರತಿಭಟನೆ ಮಾಡುತ್ತಾರೆ. ಅವರಿಗೆ ಪ್ರತಿಭಟನೆ ಮಾಡುವ ಹಕ್ಕಿದೆ. ಆದರೆ ಕೆಂಪುಕಲ್ಲು ವ್ಯಾಪಾರ ಮಾಡುವವರಿಗೆ ಈ ಸಮಸ್ಯೆ ಬಗೆಹರಿದಿರುವ ಸಮಾಧಾನವಿದೆ ಎಂದರು.

ಮರಳಿಗೆ ಬೇಕು ಕೇಂದ್ರ ಅನುಮತಿ:

ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಮರಳೆತ್ತಲು ಕೇಂದ್ರದ ಅನುಮತಿ ಬೇಕು. ಈ ಕುರಿತು ರಾಜ್ಯದಿಂದ ಈಗಾಗಲೇ ಕೇಂದ್ರಕ್ಕೆ ಶಿಫಾರಸು ಕಳುಹಿಸಲಾಗಿದ್ದು, ಅಲ್ಲಿ ಒಪ್ಪಿಗೆ ದೊರೆತರೆ ಈ ಸಮಸ್ಯೆ ಕೂಡ ಬಗೆಹರಿಯಲಿದೆ. ಈ ಬಗ್ಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರದ ಜನಪ್ರತಿನಿಧಿಗಳು ಒತ್ತಡ ಹೇರಬೇಕಾಗಿದೆ ಎಂದು ಖಾದರ್‌ ಹೇಳಿದರು.------------

ಸ್ಯಾಂಡ್‌ ಬಜಾರ್‌ ಮಾದರಿ ಜಾರಿಗೆ ಚಿಂತನೆ

ಮುಂದಿನ ದಿನಗಳಲ್ಲಿ ಒಂದು ವೇಳೆ ಕೆಂಪುಕಲ್ಲು ದರ ಏರಿಕೆ, ದರ ಅನಿಯಂತ್ರಿತ ಆದ ಬಗ್ಗೆ ಮಾಹಿತಿ ಬಂದರೆ, ಮರಳು ಪೂರೈಕೆಯ ‘ಸ್ಯಾಂಡ್‌ ಬಜಾರ್‌ ಆಪ್‌’ ಮಾದರಿಯಲ್ಲೇ ಕೆಂಪು ಕಲ್ಲಿಗೂ ಮೊಬೈಲ್‌ ಆಪ್‌ ವ್ಯವಸ್ಥೆ ಜಾರಿಗೊಳಿಸಲಾಗುವುದು. ಹೀಗಾದರೆ ಸರ್ಕಾರವೇ ಕೆಂಪುಕಲ್ಲಿಗೆ ದರ ನಿಗದಿ ಮಾಡಿ ಜನಸಾಮಾನ್ಯರಿಗೆ ಕೆಂಪು ಕಲ್ಲು ನೀಡುವ ಬಗ್ಗೆ ಕ್ರಮ ಕೈಗೊಳ್ಳಲಿದೆ. ಈ ಕುರಿತು ಮುಂಬರುವ ದಿನಗಳಲ್ಲಿ ಚಿಂತನೆ ಮಾಡಲಾಗುವುದು ಎಂದು ಸ್ಪೀಕರ್‌ ಯು.ಟಿ.ಖಾದರ್‌ ಪ್ರತಿಕ್ರಿಯಿಸಿದರು.

-----------

ರಸ್ತೆ ಹೊಂಡ ಅನಾಹುತವಾದರೆ ಎಂಜಿನಿಯರ್‌ ಮೇಲೆ ಕೇಸ್‌ಉಳ್ಳಾಲ ಕ್ಷೇತ್ರದ ರಸ್ತೆಗಳಲ್ಲಿ ದೊಡ್ಡ ಹೊಂಡಗಳೆದ್ದು ಏನಾದರೂ ಅನಾಹುತ ಸಂಭವಿಸಿದರೆ ಆಯಾ ಇಲಾಖೆ ಎಂಜಿನಿಯರನ್ನೇ ಹೊಣೆಗಾರರನ್ನಾಗಿ ಮಾಡಿ ಪ್ರಕರಣ ದಾಖಲಿಸಲಾಗುವುದು. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಖಾದರ್‌ ಹೇಳಿದರು. ಮಳೆ ನಿಂತ ತಕ್ಷಣ ಉಳ್ಳಾಲದ ಎಲ್ಲ ರಸ್ತೆಗಳನ್ನು ಸುಸ್ಥಿತಿಗೆ ತರಲು ಈಗಿರುವ ಅನುದಾನ ಸೇರಿದಂತೆ ಹೆಚ್ಚುವರಿಯಾಗಿ 90 ಕೋಟಿ ರು. ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ತೊಕ್ಕೊಟ್ಟು- ಮುಡಿಪು ಸೇರಿದಂತೆ ಹಲವು ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾರ್ಯವನ್ನೂ ಕೈಗೊಳ್ಳಲಾಗುವುದು ಎಂದರು.-----------ಸೆ.22ರಿಂದ ಜಾತಿಗಣತಿ ನಡೆಯಲಿದ್ದು, ಗಣತಿದಾರರು ಮನೆಗೆ ಬರುವಾಗ ಎಲ್ಲ ಮಾಹಿತಿಯನ್ನು ಅವರಿಗೆ ನೀಡಿ ಸಹಕರಿಸಬೇಕು. ಇದಕ್ಕೂ ಮೊದಲು, ಕುಟುಂಬದ ಪಡಿತರ ಚೀಟಿಯಲ್ಲಿ ಹೆಸರು ಇಲ್ಲದೇ ಇರುವವರು ತಮ್ಮ ಆಧಾರ್‌ ಸಂಖ್ಯೆಗೆ ಕುಟುಂಬದ ಮೊಬೈಲ್‌ ಸಂಖ್ಯೆ ಲಿಂಕ್‌ ಮಾಡಬೇಕು. ಈ ಕುರಿತು ಅರಿವು ನೀಡಲು ಸೆ.17ರಂದು ಮಂಗಳೂರಿನಲ್ಲಿ ವಿಶೇಷ ಸಭೆ ಆಯೋಜಿಸಲಾಗಿದೆ.- ಯು.ಟಿ.ಖಾದರ್‌, ವಿಧಾನಸಭೆ ಸ್ಪೀಕರ್‌