ಸಂಡೂರು ಕ್ಷೇತ್ರದ ಬಿಜೆಪಿ ಬಂಡಾಯ ಶಮನಗೊಳಿಸಿದ ರೆಡ್ಡಿ

| Published : Oct 23 2024, 01:54 AM IST

ಸಂಡೂರು ಕ್ಷೇತ್ರದ ಬಿಜೆಪಿ ಬಂಡಾಯ ಶಮನಗೊಳಿಸಿದ ರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಬಿಜೆಪಿ ಬಂಡಾಯವನ್ನು ಶಮನಗೊಳಿಸುವಲ್ಲಿ ಶಾಸಕ ಜನಾರ್ದನ ರೆಡ್ಡಿ ಯಶಸ್ವಿಯಾಗಿದ್ದಾರೆ.

ಬಳ್ಳಾರಿ: ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಬಿಜೆಪಿ ಬಂಡಾಯವನ್ನು ಶಮನಗೊಳಿಸುವಲ್ಲಿ ಶಾಸಕ ಜನಾರ್ದನ ರೆಡ್ಡಿ ಯಶಸ್ವಿಯಾಗಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಬಂಡಾಯ ಶಮನಗೊಳಿಸುವಂತೆ ರೆಡ್ಡಿಗೆ ನೀಡಿದ ಸೂಚನೆಯಂತೆ ಶಾಸಕ ಜನಾರ್ದನ ರೆಡ್ಡಿ ಅವರ ನಿವಾಸದ ಬಳಿ ಜರುಗಿದ ಪಕ್ಷದ ಕಾರ್ಯಕರ್ತರು ಹಾಗೂ ದಿವಾಕರ್ ಬೆಂಬಲಿಗರ ಸಭೆಯಲ್ಲಿ ಪಾಲ್ಗೊಂಡ ಕೆ.ಎಸ್. ದಿವಾಕರ್ ಅವರು ಜನಾರ್ದನ ರೆಡ್ಡಿ ಅವರು ಹಾಗೂ ಪಕ್ಷದ ಹಿರಿಯ ನಾಯಕರ ಸಲಹೆಯಂತೆ ಬಂಡಾಯದಿಂದ ಹಿಂದೆ ಸರಿದಿದ್ದೇನೆ. ಸಂಡೂರು ಉಪ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿ, ಅತ್ಯಧಿಕ ಮತಗಳಿಂದ ಗೆಲ್ಲಿಸಿಕೊಂಡು ಬರಲು ಅವಿರತ ಶ್ರಮಿಸುತ್ತೇನೆ ಎಂದು ಘೋಷಣೆ ಮಾಡಿದರು.

ಬಹಿರಂಗ ಸಭೆಯಲ್ಲಿ ಮಾತನಾಡಿದ ಶಾಸಕ ಜನಾರ್ದನ ರೆಡ್ಡಿ, ಪಕ್ಷದ ನಿಷ್ಠೆಯಿಂದ ದುಡಿದವರಿಗೆ ಮುಂದಿನ ದಿನಗಳಲ್ಲಿ ರಾಜಕೀಯ ಭವಿಷ್ಯವಿದೆ ಎಂಬುದನ್ನು ಮರೆಯಬಾರದು. ದಿವಾಕರ್‌ಗೆ ಟಿಕೆಟ್ ಸಿಕ್ಕಿಲ್ಲ ಎಂಬ ಬೇಸರ ನನಗೂ ಇದೆ. ಆದರೆ, ಪಕ್ಷದ ನಿರ್ಧಾರಕ್ಕೆ ತಲೆಬಾಗಬೇಕು ಎಂದರು.

ಮೂರುವರೆ ವರ್ಷಗಳಲ್ಲಿ ಮತ್ತೆ ಚುನಾವಣೆ ಬರುತ್ತದೆ ಎಂದು ಹೇಳುವ ಮೂಲಕ ಮುಂದಿನ ಅಭ್ಯರ್ಥಿ ನೀವೇ ಎಂದು ದಿವಾಕರ್‌ಗೆ ಸೂಚ್ಯವಾಗಿ ಸಭೆಯಲ್ಲಿ ರೆಡ್ಡಿ ತಿಳಿಸಿದರು. ದಿವಾಕರ್ ಅವರನ್ನು ನನ್ನ ಜೊತೆಗಿಟ್ಟುಕೊಂಡು ಬೆಳೆಸುತ್ತೇನೆ. ನಿಮ್ಮ ಮಗನನ್ನು ಶಾಸಕ ಮಾಡುತ್ತೇನೆ ಎಂದು ದಿವಾಕರ್ ತಂದೆಗೆ ಮಾತುಕೊಟ್ಟಿದ್ದೇನೆ. ಮಾತಿಗೆ ತಪ್ಪುವುದಿಲ್ಲ. ನಾವೆಲ್ಲರೂ ಸೇರಿ ಪಕ್ಷವನ್ನು ಸಂಘಟಿಸೋಣ. ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿ ಮತ್ತಷ್ಟು ಶಕ್ತಿಯುತವನ್ನಾಗಿಸೋಣ ಎಂದರಲ್ಲದೆ, ಮುಂದಿನ ದಿನಗಳಲ್ಲಿ ವಿಜಯೇಂದ್ರ ಅವರು ರಾಜ್ಯದ ಸಿಎಂ ಆಗುವುದು ಖಚಿತ. ವಿಜಯೇಂದ್ರ ಅವರ ಸಚಿವ ಸಂಪುಟದಲ್ಲಿ ದಿವಾಕರ್ ಸಚಿವರಾದರೂ ಅಚ್ಚರಿಯಿಲ್ಲ ಎಂದು ಹೇಳುವ ಮೂಲಕ ಬಂಡಾಯ ಎದ್ದಿದ್ದ ದಿವಾಕರ ಅವರನ್ನು ಜನಾರ್ದನ ರೆಡ್ಡಿ ಸಮಾಧಾನಿಸಿದರು.

ಇದೇ ವೇಳೆ ಕೆ.ಎಸ್. ದಿವಾಕರ್ ಅವರನ್ನು ಪಕ್ಷದ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ಪಕ್ಷದ ರಾಜ್ಯಾಧ್ಯಕ್ಷರು ನೀಡಿದ ಆದೇಶ ಪತ್ರವನ್ನು ದಿವಾಕರ್‌ಗೆ ರೆಡ್ಡಿ ಹಸ್ತಾಂತರಿಸಿದರು.

ಕಳೆದ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಸ್ಥಾಪಿತ ಕೆಆರ್‌ಪಿಪಿ ಪಕ್ಷದ ಅಭ್ಯರ್ಥಿಯಾಗಿ 31 ಸಾವಿರ ಮತಗಳನ್ನು ಪಡೆದು ಗಮನ ಸೆಳೆದಿದ್ದ ಕೆ.ಎಸ್. ದಿವಾಕರ್‌ಗೆ ಈ ಬಾರಿ ಬಿಜೆಪಿ ಟಿಕೆಟ್ ಕಾಯಂ ಎಂದೇ ಹೇಳಲಾಗಿತ್ತು. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಬಂಗಾರು ಹನುಮಂತು ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿತ್ತು. ಇದರಿಂದ ತೀವ್ರ ಅಸಮಾಧಾನಗೊಂಡಿದ್ದ ಕೆ.ಎಸ್. ದಿವಾಕರ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದರು. ಈ ಬೆಳವಣಿಗೆ ಕಾಂಗ್ರೆಸ್ ವಲಯದಲ್ಲಿ ಸಂತಸ ಮೂಡಿಸಿತ್ತು. ಕೆ.ಎಸ್. ದಿವಾಕರ್ ಬಂಡಾಯ ಎದ್ದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸುಲಭದ ತುತ್ತು ಎಂದೇ ವ್ಯಾಖ್ಯಾನಿಸಲಾಗಿತ್ತು. ಆದರೆ, ದಿವಾಕರ್ ಬಂಡಾಯ ಸ್ಪರ್ಧೆಯಿಂದ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಅಡ್ಡಿಯಾಗುತ್ತದೆ ಎಂದರಿತ ಬಿಜೆಪಿ ರಾಜ್ಯ ನಾಯಕರು, ದಿವಾಕರ್ ಅವರ ಮನವೊಲಿಸುವ ಜವಾಬ್ದಾರಿಯನ್ನು ಜನಾರ್ದನ ರೆಡ್ಡಿಗೆ ವಹಿಸಿದ್ದರು. ಎರಡು ದಿನಗಳ ಕಾಲ ಜರುಗಿದ ಮಾತುಕತೆಯ ಬಳಿಕ ದಿವಾಕರ್ ಕೊನೆಗೆ ರೆಡ್ಡಿ ಸಲಹೆಯಂತೆ ಪಕ್ಷದ ಅಭ್ಯರ್ಥಿ ಹನುಮಂತು ಅವರ ಗೆಲುವಿಗೆ ಶ್ರಮಿಸುವುದಾಗಿ ಸಭೆಯಲ್ಲಿ ಘೋಷಿಸಿದರು.