ರೆಡ್ಡಿ ಮತ್ತೆ ಜೈಲು ಪಾಲು; ಗಣಿ ಜಿಲ್ಲೆಯಲ್ಲಿ ಸಂಚಲನ, ಬೆಂಬಲಿಗರಲ್ಲಿ ಆತಂಕ

| Published : May 07 2025, 12:45 AM IST

ರೆಡ್ಡಿ ಮತ್ತೆ ಜೈಲು ಪಾಲು; ಗಣಿ ಜಿಲ್ಲೆಯಲ್ಲಿ ಸಂಚಲನ, ಬೆಂಬಲಿಗರಲ್ಲಿ ಆತಂಕ
Share this Article
  • FB
  • TW
  • Linkdin
  • Email

ಸಾರಾಂಶ

ಓಬಳಾಪುರಂ ಮೈನಿಂಗ್ ಕಂಪನಿ ನಡೆಸಿದ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಸೇರಿದಂತೆ ಪ್ರಕರಣದ ನಾಲ್ವರು ಆರೋಪಿಗಳಿಗೆ ಹೈದ್ರಾಬಾದ್‌ನ ಸಿಬಿಐ ವಿಶೇಷ ನ್ಯಾಯಾಲಯ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದು, ರೆಡ್ಡಿ ಜೈಲು ಪಾಲು ಗಣಿ ಜಿಲ್ಲೆಯಲ್ಲಿ ಸಂಚಲನ ಸೃಷ್ಟಿಸಿದೆ.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಓಬಳಾಪುರಂ ಮೈನಿಂಗ್ ಕಂಪನಿ ನಡೆಸಿದ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹಾಗೂ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಸೇರಿದಂತೆ ಪ್ರಕರಣದ ನಾಲ್ವರು ಆರೋಪಿಗಳಿಗೆ ಹೈದ್ರಾಬಾದ್‌ನ ಸಿಬಿಐ ವಿಶೇಷ ನ್ಯಾಯಾಲಯ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದು, ರೆಡ್ಡಿ ಜೈಲು ಪಾಲು ಗಣಿ ಜಿಲ್ಲೆಯಲ್ಲಿ ಸಂಚಲನ ಸೃಷ್ಟಿಸಿದೆ.

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜಾಮೀನು ಪಡೆದು ಬಳ್ಳಾರಿಗೆ ಬರುವ ಅವಕಾಶ ಪಡೆದಿದ್ದ ಜನಾರ್ದನ ರೆಡ್ಡಿ ಮತ್ತೆ ರಾಜಕೀಯ ಮುನ್ನೆಲೆಗೆ ಬರಲಿದ್ದಾರೆ ಎಂಬ ನಿರೀಕ್ಷೆಯ ನಡುವೆ ಹೈದ್ರಾಬಾದ್‌ನ ಸಿಬಿಐ ವಿಶೇಷ ನ್ಯಾಯಾಲಯ ಮಂಗಳವಾರ ನೀಡಿರುವ ಮಹತ್ವದ ತೀರ್ಪು ರೆಡ್ಡಿ ಪರಿವಾರದ ರಾಜಕೀಯ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದೆ.

ರೆಡ್ಡಿ ಆಶ್ರಯದಲ್ಲಿಯೇ ಇದ್ದು ರಾಜಕೀಯ ಭವಿಷ್ಯ ಕಂಡುಕೊಳ್ಳಲು ಹವಣಿಸುತ್ತಿದ್ದ ಹಿಂಬಾಲಕರಿಗೂ ರೆಡ್ಡಿ ಜೈಲು ಪಾಲು ಆಘಾತ ನೀಡಿದೆ. ರೆಡ್ಡಿಗೆ 7 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವುದು ಬಳ್ಳಾರಿಯ ಬಿಜೆಪಿಯ ಒಂದು ಬಣಕ್ಕೆ ಸಂಕಟ ತಂದಿದ್ದರೆ, ಮತ್ತೊಂದು ಬಣಕ್ಕೆ ಸಂತಸವನ್ನುಂಟು ಮಾಡಿದೆ.

ಅಕ್ರಮ ಗಣಿಗಾರಿಕೆ ಆರೋದಪಡಿ 2011ರ ಸೆ.5ರಂದು ಜನಾರ್ದನ ರೆಡ್ಡಿಯನ್ನು ಸಿಬಿಐ ಅಧಿಕಾರಿಗಳು ಬಂಧಿಸಿ, ಹೈದ್ರಾಬಾದ್‌ನ ಚಂಲಗುಡ ಜೈಲಿಗೆ ಕಳಿಸಿದ್ದರು. ಓಬಳಾಪುರಂ ಮೈನಿಂಗ್ ಕಂಪನಿ ನಡೆಸಿದ ಅಕ್ರಮ ಗಣಿಗಾರಿಕೆಯ ಪ್ರಕರಣದಲ್ಲಿ ಇದೀಗ ರೆಡ್ಡಿ 7 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.ತೀರ್ಪಿಗೆ ಸ್ವಾಗತ, ನನ್ನ ತಂದೆ ಆತ್ಮಕ್ಕೆ ಶಾಂತಿ- ಗಣೇಶ್‌

ಸಿಬಿಐ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿರುವ ಜನಾರ್ದನ ರೆಡ್ಡಿ ಗಣಿ ಅಕ್ರಮದ ವಿರುದ್ಧ ಕಾನೂನು ಹೋರಾಟ ಮಾಡುತ್ತಲೇ ಬಂದಿದ್ದ, ಗಣಿ ಉದ್ಯಮಿ ಟಪಾಲ್‌ ಗಣೇಶ್‌, ರೆಡ್ಡಿಗೆ ಜೈಲು ಶಿಕ್ಷೆಯಿಂದ ನನ್ನ ತಂದೆಯ ಆತ್ಮಕ್ಕೆ ಶಾಂತಿ ಸಿಕ್ಕಿದೆ ಎಂದು ಪ್ರತಿಕ್ರಿಯಿಸಿದ್ದಾರೆ.ರಾಜಕೀಯ ಬಲದಿಂದ ರೆಡ್ಡಿ ಮೊದಲಿನಿಂದಲೂ ಕರ್ನಾಟಕದ ಗಡಿಯಲ್ಲಿ ಅಕ್ರಮ ಗಣಿಗಾರಿಕೆ ಮಾಡುತ್ತಲೇ ಬಂದಿದ್ದರು. ಆಂಧ್ರಪ್ರದೇಶದಲ್ಲಿ ಪರವಾನಿಗೆ ಪಡೆದು ಕರ್ನಾಟಕದಲ್ಲಿ ಅಕ್ರಮ ನಡೆಸಿದರೂ ಆತನನ್ನು ನಿಯಂತ್ರಿಸುವವರು ಇರಲಿಲ್ಲ. ಹಾಗಂತ ನಾನು ಸುಮ್ಮನೆ ಕೂರಲಿಲ್ಲ. ರೆಡ್ಡಿ ವಿರುದ್ಧ ನನ್ನ ನ್ಯಾಯಾಂಗ ಹೋರಾಟ ಮುಂದುವರಿಸಿದೆ. ರೆಡ್ಡಿ ಕರ್ನಾಟಕಕ್ಕೆ ಸೇರಿದ ಬರೋಬ್ಬರಿ 29 ಲಕ್ಷ ಟನ್ ಅದಿರನ್ನು ಒತ್ತುವರಿ ಮಾಡಿದ್ದಾರೆ. ರೆಡ್ಡಿ ಗಣಿಕಳ್ಳ ಎಂದು ಒಂದಲ್ಲ ಒಂದು ದಿನ ಇಡೀ ರಾಜ್ಯವೇ ಹೇಳುವಂತಾಗುತ್ತದೆ ಎಂದು ಮಾಧ್ಯಮಗಳ ಮುಂದೆ ಹೇಳುತ್ತಲೇ ಬಂದಿದ್ದೇನೆ. ಕೊನೆಗೆ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ. ರೆಡ್ಡಿ ಗಣಿಕಳ್ಳ ಎಂಬುದು ಸಾಬೀತಾಗಿದೆ ಎಂದು ಟಪಾಲ್ ಗಣೇಶ್ ಹೇಳಿದರು.ಜನಾರ್ದನ ರೆಡ್ಡಿ ಅಧಿಕಾರ ದುರ್ಬಳಕೆ ಮಾಡಿಕೊಂಡು ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರು. ನಾನಾ ಬಗೆಯ ಕಿರುಕುಳ ನೀಡಿದರು. ಆದರೆ, ನಾನು ಜಗ್ಗಲಿಲ್ಲ. ಗಣಿಗಾರಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಲೇ ಬಂದೆ. ಜೊತೆಗೆ ನ್ಯಾಯಾಂಗ ಹೋರಾಟವೂ ನಡೆಸಿದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ವಿಫಲವಾಯಿತು. ಆದರೆ, ನ್ಯಾಯಾಂಗ ಹೋರಾಟದಿಂದ ನಮಗೆ ನ್ಯಾಯ ಸಿಕ್ಕಿತು ಎಂದು ಟಪಾಲ್ ಪ್ರತಿಕ್ರಿಯಿಸಿದರು.ಆಂಧ್ರಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ಪಡೆದು ಕರ್ನಾಟಕದಲ್ಲಿ ಗಣಿಗಾರಿಕೆ ಮಾಡಿದ ಆರೋಪ ಎದುರಿಸುತ್ತಿರುವ ಜನಾರ್ದನ ರೆಡ್ಡಿ, ನಾನು ಕರ್ನಾಟಕದ ಹಿಡಿ ಮಣ್ಣು ಮುಟ್ಟಿಲ್ಲ. ನಾನು ಎಲ್ಲೂ ಅಕ್ರಮ ಎಸಗಿಲ್ಲ ಎಂದು ಸಮರ್ಥಿಸಿಕೊಂಡೇ ಬಂದಿದ್ದರು ಎಂದರು.ಪ್ರತಿಬಾರಿಯೂ ತಮ್ಮ ವಿರುದ್ಧದ ಆರೋಪವನ್ನು ರಾಜಕೀಯ ಷಡ್ಯಂತ್ರ ಎಂದು ಹೇಳುತ್ತಿದ್ದ ರೆಡ್ಡಿ ಕಾಂಗ್ರೆಸ್ ಕಡೆ ಬೆರಳು ತೋರಿಸುತ್ತಿದ್ದರು. ಪೊಲೀಸ್ ಪೇದೆಯ ಮಗ ರಾಜಕೀಯವಾಗಿ ಬೆಳೆದು ಬಂದಿರುವುದು ಕಾಂಗ್ರೆಸ್ ನಾಯಕರಿಗೆ ಸಹಿಸಲಾಗುತ್ತಿಲ್ಲ. ಹೀಗಾಗಿಯೇ ನನ್ನ ವಿರುದ್ಧ ಷಡ್ಯಂತ್ರ್ಯ ನಡೆಸಿ ಜೈಲಿಗೆ ಕಳಿಸಿದರು ಎಂದು ಹೇಳುಕೊಂಡು ಬಂದಿದ್ದರು. ಓಬಳಾಪುರಂ ಮೈನಿಂಗ್ ಕಂಪನಿ ನಡೆಸಿದ ಅಕ್ರಮದಲ್ಲಿ ರೆಡ್ಡಿ ಒಂದಲ್ಲ ಒಂದು ದಿನ ಜೈಲು ಪಾಲಾಗುವುದು ಖಚಿತ ಎಂದು ನಾನು ಹೇಳಿಕೊಂಡೇ ಬಂದಿದ್ದೆ ಎಂದು ಪ್ರಕರಣದ ಪ್ರಮುಖ ಸಾಕ್ಷಿದಾರ ಟಪಾಲ್ ಗಣೇಶ್ ಆಕ್ರೋಶ ವ್ಯಕ್ತಪಡಿಸಿದರು.