ಘನ ತ್ಯಾಜ್ಯ ಮತ್ತು ತ್ಯಾಜ್ಯ ನೀರು ಸಮರ್ಪಕವಾಗಿ ಸಂಸ್ಕರಿಸದ ಹಾಗೂ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿದ ಬೆಂಗಳೂರು ಅನಾಲಿಟಿಕ್ಸ್ ಆ್ಯಂಡ್ ರಿಸರ್ಚ್ ಲ್ಯಾಬೊರೇಟರಿ ಸಂಸ್ಥೆ ವಿರುದ್ಧ ಕ್ರಮಕ್ಕೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದ್ದಾರೆ.
-ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದ ನಿಯಮ ಉಲ್ಲಂಘಸಿದಕ್ಕಾಗಿ ಕ್ರಮ
ಕನ್ನಡಪ್ರಭ ವಾರ್ತೆ ಬೆಂಗಳೂರುಘನ ತ್ಯಾಜ್ಯ ಮತ್ತು ತ್ಯಾಜ್ಯ ನೀರು ಸಮರ್ಪಕವಾಗಿ ಸಂಸ್ಕರಿಸದ ಹಾಗೂ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿದ ಬೆಂಗಳೂರು ಅನಾಲಿಟಿಕ್ಸ್ ಆ್ಯಂಡ್ ರಿಸರ್ಚ್ ಲ್ಯಾಬೊರೇಟರಿ ಸಂಸ್ಥೆ ವಿರುದ್ಧ ಕ್ರಮಕ್ಕೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದ್ದಾರೆ.
ಕಾವೇರಿ ನದಿ ಸೇರಿದಂತೆ ಜಲಮೂಲಗಳಿಗೆ ತ್ಯಾಜ್ಯ ಸೇರ್ಪಡೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಮಲಿಂಗಾರೆಡ್ಡಿ, ಘನ ತ್ಯಾಜ್ಯ ಮತ್ತು ತ್ಯಾಜ್ಯ ನೀರು ನಿರ್ವಹಣೆ ಕುರಿತಂತೆ ಖುದ್ದು ಪರಿಶೀಲಿಸಲು ಮುಂದಾಗಿದ್ದಾರೆ. ಅದರಂತೆ ಶನಿವಾರ ಥಣಿಸಂದ್ರ ಬಳಿಯ ಬೆಂಗಳೂರು ಅನಾಲಿಟಿಕ್ಸ್ ಆ್ಯಂಡ್ ರಿಸರ್ಚ್ ಲ್ಯಾಬೊರೇಟರಿ ಸಂಸ್ಥೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸಂಸ್ಥೆಯಿಂದ ಪರಿಸರಕ್ಕೆ ಹಾನಿಯಾಗುವಂತಹ ಕಾರ್ಯಗಳನ್ನು ಪತ್ತೆ ಮಾಡಿ ಕ್ರಮಕ್ಕೆ ಸೂಚಿಸಿದ್ದಾರೆ. ಜತೆಗೆ ರಾಜ್ಯದಲ್ಲಿನ ಇದೇ ಮಾದರಿಯ ಸಂಸ್ಥೆಗಳ ಪರಿಶೀಲನೆಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ನಿರ್ದೇಶಿಸಿದರು.ಬೆಂಗಳೂರು ಅನಾಲಿಟಿಕ್ಸ್ ಆ್ಯಂಡ್ ರಿಸರ್ಚ್ ಲ್ಯಾಬೊರೇಟರಿ ಸಂಸ್ಥೆಯು ನೀರಿನ ಗುಣಮಟ್ಟ ಪರಿಶೀಲಿಸುವ ಪ್ರಯೋಗಾಲಯವಾಗಿದೆ. ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ಅನುಮತಿ ಪಡೆಯುವಾಗ ಮೂವರು ವಿಶ್ಲೇಷಕರು ಕಾರ್ಯನಿರ್ವಹಿಸುವ ಷರತ್ತು ವಿಧಿಸಲಾಗಿತ್ತು. ಆದರೆ, ಶನಿವಾರ ಸಚಿವರು ಭೇಟಿ ನೀಡಿದಾಗ ಒಬ್ಬರು ವಿಶ್ಲೇಷಕರು ಮಾತ್ರ ಉಪಸ್ಥಿತರಿರುವುದು ತಿಳಿದುಬಂದಿದೆ. ಉಳಿದಿಬ್ಬರು ವಿಶ್ಲೇಷಕರು ಕಳೆದ 5 ತಿಂಗಳಿನಿಂದ ಸಂಸ್ಥೆಯಲ್ಲಿ ಕಾರ್ಯನಿರ್ವಸುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಅದರ ಜತೆಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರವಾಗಿ ಪಡೆದ ಅವಧಿ 2025ರಲ್ಲಿಯೇ ಮುಕ್ತಾಯವಾಗಿದೆ. ಆದರೂ ಪರವಾನಗಿ ನವೀಕರಿಸದೆ ಪ್ರಯೋಗಾಲಯ ಕಾರ್ಯನಿರ್ವಹಿಸುವುದು ದಾಖಲೆಗಳಿಂದ ತಿಳಿದುಬಂದಿದೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ರಾಮಲಿಂಗಾರೆಡ್ಡಿ, ಸಂಸ್ಥೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಪ್ರಯೋಗಾಲಯದಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡದೇ, ಗುಂಡಿಗಳಿಗೆ ಹಾಕುತ್ತಿರುವುದನ್ನು ಸಚಿವರು ಗಮನಿಸಿದರು. ಹಾಗೆಯೇ, ಶಬ್ದದ ಮಟ್ಟ ಅಳೆಯಲು ಸಂಗ್ರಹಿಸಿದ ಕ್ಷೇತ್ರ ದತ್ತಾಂಶ ಮತ್ತು ಅಂತಿಮ ವಿಶ್ಲೇಷಣಾ ವರದಿಯ ಅಂಕಿಅಂಶಗಳಲ್ಲಿ ವ್ಯತ್ಯಾಸ ಕಂಡುಬಂದಿದೆ. ಇದರಿಂದ ಪ್ರಯೋಗಾಲಯದ ವಿಶ್ಲೇಷಣಾ ವರದಿಗಳ ಮೇಲೆ ಅನುಮಾನ ವ್ಯಕ್ತವಾಗುತ್ತಿದೆ ಎಂದು ಸಚಿವರು ಅಭಿಪ್ರಾಯಪಟ್ಟರು ಹಾಗೂ ಇದಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಪ್ರಯೋಗಾಲಯ ಮಾದರಿಯಲ್ಲಿಯೇ ರಾಜ್ಯದಲ್ಲಿ ನೀರು, ಗಾಳಿ ಮತ್ತು ಶಬ್ದದ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಿಸುವ 50 ಘಟಕಗಳಿದ್ದು, ಆ ಎಲ್ಲ ಪ್ರಯೋಗಾಲಯಗಳನ್ನು ಸಮಗ್ರ ತನಿಖೆಗೆ ಒಳಪಡಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಿಗೆ ಸಚಿವ ರಾಮಲಿಂಗಾರೆಡ್ಡಿ ನಿರ್ದೇಶಿಸಿದರು.