ಸಾರಾಂಶ
ಜಿಬಿಎ ಅಡಿ 5 ನಗರ ಪಾಲಿಕೆಗಳು ಅಧಿಕೃತವಾಗಿ ಜಾರಿಗೆ ಬರಲಿದ್ದು, ಜಿಬಿಎ ಹಾಗೂ ಆಡಳಿತ ನಿರ್ವಹಣೆಗೆ ಭಾರತೀಯ ಆಡಳಿತ ಸೇವೆ (ಐಎಎಸ್) ಭಾರತೀಯ ಪೊಲೀಸ್ ಸೇವೆ (ಐಪಿಎಸ್), ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಹಾಗೂ ಕರ್ನಾಟಕ ಪೊಲೀಸ್ ಸೇವೆ (ಕೆಎಸ್‌ಪಿಎಸ್) ಹುದ್ದೆಗಳ ಮರು ವಿನ್ಯಾಸ
ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಡಿ ಐದು ನಗರ ಪಾಲಿಕೆಗಳು ಮಂಗಳವಾರದಿಂದ ಅಧಿಕೃತವಾಗಿ ಜಾರಿಗೆ ಬರಲಿದ್ದು, ಜಿಬಿಎ ಹಾಗೂ ಐದು ನಗರ ಪಾಲಿಕೆ ಆಡಳಿತ ನಿರ್ವಹಣೆಗೆ ಭಾರತೀಯ ಆಡಳಿತ ಸೇವೆ (ಐಎಎಸ್) ಭಾರತೀಯ ಪೊಲೀಸ್ ಸೇವೆ (ಐಪಿಎಸ್), ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಹಾಗೂ ಕರ್ನಾಟಕ ಪೊಲೀಸ್ ಸೇವೆ (ಕೆಎಸ್‌ಪಿಎಸ್) ಹುದ್ದೆಗಳನ್ನು ಮರು ವಿನ್ಯಾಸಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು 5 ನಗರ ಪಾಲಿಕೆಗಳಾದ ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ ಮತ್ತು ಬೆಂಗಳೂರು ಪಶ್ಚಿಮ ನಗರ ಪಾಲಿಕೆಗಳು ರಚನೆ ಕುರಿತು ಸೋಮವಾರ ರಾಜ್ಯ ಸರ್ಕಾರ ಅಧಿಕೃತ ರಾಜ್ಯಪತ್ರ ಹೊರಡಿಸಲಿದೆ.
ಈಗಾಗಲೇ ಐದೂ ನಗರ ಪಾಲಿಕೆಗಳಿಗೆ ಕಚೇರಿಗಳನ್ನೂ ಗುರುತಿಸಲಾಗಿದೆ. ಸೆ.2ರಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಲಿ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಆರಂಭವಾಗಲಿದೆ.
ವಿಧಾನಸಭಾ ಕ್ಷೇತ್ರದ ಆಧಾರದಲ್ಲಿ ನಗರ ಪಾಲಿಕೆಗಳ ಗಡಿ ಗುರುತಿಸಿ ಕರಡು ಅಧಿಸೂಚನೆ ಹೊರಡಿಸಲಾಗಿದೆ. ಆ ಬಗ್ಗೆ ಸಲ್ಲಿಕೆಯಾಗಿರುವ ಆಕ್ಷೇಪಣೆಗಳನ್ನು ಪರಿಶೀಲಿಸಲಾಗಿದ್ದು, ಬಹುತೇಕ ಕರಡು ಅಧಿಸೂಚನೆಯಲ್ಲಿ ಸೂಚಿಸಿದ ಗಡಿ ಅಂತಿಮವಾಗಲಿದೆ ಎಂದು ಸರ್ಕಾರದ ಮೂಲಗಳನ್ನು ಆಧರಿಸಿ ತಿಳಿಸಿವೆ.
ಪ್ರತಿ ನಗರಪಾಲಿಕೆಗೆ ತಲಾ ಎರಡು ವಲಯ ರೂಪಿಸಲಾಗುತ್ತಿದ್ದು, ವಲಯ ಕಚೇರಿಗಳನ್ನು ಈಗಾಗಲೇ ನಿಗದಿ ಪಡಿಸಲಾಗಿದೆ.
ಜಿಬಿಎ ಕೇಂದ್ರ ಕಚೇರಿ ಹಾಲಿ ಬಿಬಿಎಂಪಿ ಕೇಂದ್ರ ಕಚೇರಿ ನಿಗದಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರದ(ಜಿಬಿಎ) ಮುಖ್ಯ ಕಚೇರಿಗೆ ಹಾಲಿ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ ಅನೆಕ್ಸ್1 ಮತ್ತು ಅನೆಕ್ಸ್ 2 ಕಟ್ಟಡ ನಿಗದಿ ಪಡಿಸಲಾಗಿದೆ. ಅದರಂತೆ ಅನೆಕ್ಸ್ 1ರಲ್ಲಿ ಜಿಬಿಎ ಅಧ್ಯಕ್ಷರಾದ ಮುಖ್ಯಮಂತ್ರಿ ಕಚೇರಿ, ಉಪಾಧ್ಯಕ್ಷರಾದ ಬೆಂಗಳೂರು ನಗರಾಭಿವೃದ್ಧಿ ಸಚಿವರ ಕಚೇರಿ, ಜಿಬಿಎ ಮುಖ್ಯ ಆಯುಕ್ತರ ಕಚೇರಿಗಳು ಹಾಗೂ ಸಭಾ ಕೊಠಡಿ ಇರಲಿವೆ. ಅನೆಕ್ಸ್ 2ರಲ್ಲಿ ಮೂವರು ವಿಶೇಷ ಆಯಕ್ತರು, ಎಂಜಿನಿಯರಿಂಗ್ ಮುಖ್ಯಸ್ಥರು, ಕಾನೂನು ಕೋಶದ ಮುಖ್ಯಸ್ಥರು, ನಗರ ಯೋಜನೆ ಅಧಿಕಾರಿಗಳಿಗೆ ನಿಗದಿ ಪಡಿಸಲಾಗಿದೆ.
ಯಾವ ವಿಧಾನಸಭಾ ಕ್ಷೇತ್ರ ಯಾವ ನಗರ ಪಾಲಿಕೆಗೆ? ಮತ್ತು ಕಚೇರಿ ಎಲ್ಲಿ?
ಸಿವಿ ರಾಮನ್‌ನಗರ, ಚಾಮರಾಜಪೇಟೆ, ಚಿಕ್ಕಪೇಟೆ, ಗಾಂಧಿನಗರ, ಶಾಂತಿನಗರ, ಶಿವಾಜಿನಗರ , ಪುಲಕೇಶಿನಗರ (ಕುಶಾಲ ನಗರ ವಾರ್ಡ್)ಗಳು ಬರಲಿವೆ. ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವಲಯ-1ಕ್ಕೆಎಂಜಿ ರಸ್ತೆಯಲ್ಲಿರುವ ಹಾಲಿ ಬಿಬಿಎಂಪಿ ಪೂರ್ವ ವಲಯ ಕಚೇರಿ, ವಲಯ-2ಕ್ಕೆ ಕೇಂದ್ರ ಕಚೇರಿ ಆವರಣದ ಅನೆಕ್ಸ್ -3 ಕಟ್ಟಡ ನಿಗದಿ ಪಡಿಸಲಾಗಿದೆ.
ಬೆಂಗಳೂರು ಪೂರ್ವ ನಗರ ಪಾಲಿಕೆ
ಕೆಆರ್ ಪುರ, ಮಹದೇವಪುರ (ಬೆಳ್ಳಂದೂರು ವಾರ್ಡ್ ಹೊರತುಪಡಿಸಿ) ವಿಧಾನಸಭಾ ಕ್ಷೇತ್ರಗಳು ಬರಲಿದ್ದು, ಪೂರ್ವ ನಗರ ಪಾಲಿಕೆಯ ವಲಯ-1ಕ್ಕೆ ಹಾಲಿ ಮಹದೇವಪುರ ವಲಯ ಕಚೇರಿ, ವಲಯ-2ಕ್ಕೆ ಹಾಲಿ ಕೆ.ಆರ್.ಪುರ ಮುಖ್ಯ ಎಂಜಿನಿಯರ್ ಕಚೇರಿಯನ್ನು ನಿಗದಿ ಪಡಿಸಲಾಗಿದೆ.
ಬೆಂಗಳೂರು ಪಶ್ಚಿಮ ನಗರ ಪಾಲಿಕೆ
ಬಸವನಗುಡಿ, ದಾಸರಹಳ್ಳಿ (ಚಿಕ್ಕಸಂದ್ರ, ರಾಜಗೋಪಾಲನಗರ, ಹೆಗ್ಗನಹಳ್ಳಿ ವಾರ್ಡ್‌ಗಳು), ಗೋವಿಂದರಾಜನಗರ, ಮಹಾಲಕ್ಷ್ಮೀ ಲೇಔಟ್, ಮಲ್ಲೇಶ್ವರ, ಪದ್ಮನಾಭನಗರ (ಹೊಸಕೆರೆಹಳ್ಳಿ, ಗಣೇಶ ಮಂದಿರ, ಕರಿಸಂದ್ರ, ಯಡಿಯೂರು ವಾರ್ಡ್‌ಗಳು), ರಾಜಾಜಿನಗರ, ರಾಜರಾಜೇಶ್ವರಿನಗರ (ಎಚ್‌ಎಂಟಿ, ಲಕ್ಷ್ಮೀದೇವಿನಗರ, ಲಗ್ಗೆರೆ, ಕೊಟ್ಟಿಗೆಪಾಳ್ಯ, ಜ್ಞಾನಭಾರತಿ, ರಾಜರಾಜೇಶ್ವರಿನಗರ ವಾರ್ಡ್‌ನ ಕೆಲಭಾಗ), ವಿಜಯನಗರ, ಯಶವಂತಪುರ (ಹೆಮ್ಮಿಗೆಪುರ ವಾರ್ಡ್ ಹೊರತುಪಡಿಸಿ) ವಿಧಾನಸಭಾ ಕ್ಷೇತ್ರಗಳು ಬೆಂಗಳೂರು ಪಶ್ಚಿಮ ವಲಯಕ್ಕೆ ಸೇರ್ಪಡೆಯಾಗಲಿವೆ.ಪಶ್ಚಿಮ ನಗರ ಪಾಲಿಕೆಯ ವಲಯ-1ಕ್ಕೆ ಹಾಲಿ ಆರ್ ಆರ್‌ನಗರ ವಲಯ ಆಯುಕ್ತರ ಕಚೇರಿ, ವಲಯ-2ಕ್ಕೆ ಹಾಲಿ ಚಂದ್ರಾಲೇಔಟ್‌ನ ಪಾಲಿಕೆ ಸೌಧ ಕಚೇರಿ ಕಟ್ಟಡ ನಿಗದಿ ಪಡಿಸಲಾಗಿದೆ.
ಬೆಂಗಳೂರು ಉತ್ತರ ನಗರ ಪಾಲಿಕೆ
ಬ್ಯಾಟರಾಯನಪುರ, ದಾಸರಹಳ್ಳಿ (ಶೆಟ್ಟಿಹಳ್ಳಿ, ಮಲ್ಲಸಂದ್ರ, ಬಗಲಗುಂಟೆ, ಟಿ.ದಾಸರಹಳ್ಳಿ ವಾರ್ಡ್‌ಗಳು), ಹೆಬ್ಬಾಳ, ರಾಜರಾಜೇಶ್ವರಿನಗರ (ಜಾಲಹಳ್ಳಿ, ಜೆಪಿ ಪಾರ್ಕ್, ಯಶವಂತಪುರ ವಾರ್ಡ್‌ಗಳು), ಸರ್ವಜ್ಞನಗರ, ಯಲಹಂಕ, ಪುಲಕೇಶಿನಗರ (ಕುಶಾಲ ನಗರ ವಾರ್ಡ್ ಹೊರತು ಪಡಿಸಿ) ವಿಧಾನಸಭಾ ಕ್ಷೇತ್ರಗಳು ಬೆಂಗಳೂರು ಉತ್ತರ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾಗಲಿವೆ.
ಉತ್ತರ ನಗರ ಪಾಲಿಕೆಯ ವಲಯ-1ಕ್ಕೆ ಹಾಲಿ ಯಲಹಂಕ ವಲಯ ಆಯುಕ್ತರ ಕಚೇರಿ, ವಲಯ-2ಕ್ಕೆ ಹಾಲಿ ದಾಸರಹಳ್ಳಿ ವಲಯ ಆಯುಕ್ತರ ಕಚೇರಿ ಕಟ್ಡಡ ನಿಗದಿ ಪಡಿಸಲಾಗಿದೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆ
ಬಿಟಿಎಂ ಲೇಔಟ್, ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ, ಜಯನಗರ, ಮಹದೇವಪುರ (ಬೆಳ್ಳಂದೂರು ವಾರ್ಡ್ ಮಾತ್ರ), ಪದ್ಮನಾಭನಗರ (ಕುಮಾರಸ್ವಾಮಿ ಲೇಔಟ್, ಪದ್ಮನಾಭನಗರ, ಚಿಕ್ಕಲ್ಲಸಂದ್ರ ವಾರ್ಡ್‌ಗಳು ಮಾತ್ರ), ರಾಜರಾಜೇಶ್ವರಿನಗರ (ರಾಜರಾಜೇಶ್ವರಿನಗರ ವಾರ್ಡ್ ಮಾತ್ರ), ಯಶವಂತಪುರ (ಹೆಮ್ಮಿಗೆಪುರ ವಾರ್ಡ್ ಮಾತ್ರ) ವಿಧಾನಸಭಾ ಕ್ಷೇತ್ರಗಳು ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಗೆ ಬರಲಿವೆ.
ದಕ್ಷಿಣ ನಗರ ಪಾಲಿಕೆಯ ವಲಯ-1ಕ್ಕೆ ಹಾಲಿ ದಕ್ಷಿಣ ವಲಯ ಆಯುಕ್ತರ ಕಚೇರಿ, ವಲಯ-2ಕ್ಕೆ ಹಾಲಿ ಬೊಮ್ಮನಹಳ್ಳಿಯ ವಲಯ ಕಚೇರಿಯನ್ನು ನಿಗದಿ ಪಡಿಸಲಾಗಿದೆ.
ಬಿಬಿಎಂಪಿ ಅಧಿಕಾರಿಗಳ ಜಿಬಿಎಗೆ ಮರು ನಿಯೋಜನೆ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸೆ.2ಕ್ಕೆ ಅಸ್ಥಿತ್ವಕ್ಕೆ ಬರುವುದರಿಂದ ಬಿಬಿಎಂಪಿ ತನ್ನ ಅಸ್ಥಿತ್ವ ಕಳೆದುಕೊಳ್ಳಲಿದೆ. ಹೀಗಾಗಿ, ಬಿಬಿಎಂಪಿಗೆ ಮಂಜೂರಾಗಿರುವ ಐಎಎಸ್, ಐಪಿಎಸ್, ಕೆಎಎಸ್ ಹಾಗೂ ಕೆಎಸ್‌ಪಿಎಸ್ ಅಧಿಕಾರಿಗಳನ್ನು ಜಿಬಿಎಗೆ ಮರು ನಿಯೋಜನೆ ಮಾಡುವಂತೆ ಸರ್ಕಾರಕ್ಕೆ ಸಲ್ಲಿಕೆ ಮಾಡಿದ ಪ್ರಸ್ತಾವನೆ ಆಧಾರದಲ್ಲಿ ಅಧಿಕಾರಿಗಳನ್ನು ಮರು ನಿಯೋಜನೆ ಮಾಡಿ ಆದೇಶಿಸಲಾಗಿದೆ.
ಜಿಬಿಎ ಹುದ್ದೆಗಳ ವಿವರ:
ಭಾರತೀಯ ಆಡಳಿತ ಸೇವೆಯ ಪ್ರಧಾನ ಕಾರ್ಯದರ್ಶಿ ಅಥವಾ ಅದಕ್ಕಿಂತ ಉನ್ನತ ಶೇಣೆಯ ಅಧಿಕಾರಿಯನ್ನು ಜಿಬಿಎ ಮುಖ್ಯ ಆಯುಕ್ತರ ಹುದ್ದೆಗೆ ನಿಯೋಜಿಸಲಾಗಿದೆ. ಈಗಾಗಲೇ ಜಿಬಿಎಗೆ ಮುಖ್ಯ ಆಯುಕ್ತರಾಗಿ ಪ್ರಭಾರಿಯಾಗಿ ಹಾಲಿ ಬಿಬಿಎಂಪಿಯ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ.
ಉಳಿದಂತೆ 4 ವಿಶೇಷ ಆಯುಕ್ತರ ಹುದ್ದೆಗೆ ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ. ಬಿಎಂಟಿಎಫ್‌ಗೆ ಎಡಿಜಿಪಿ ಶ್ರೇಣಿ ಐಪಿಎಸ್ ಅಧಿಕಾರಿ, ಬಿಎಂಟಿಎಫ್ ಎಸ್‌ಪಿ ಹುದ್ದೆಗೆ ಐಪಿಎಸ್ ಎಸ್‌ಪಿ ಶ್ರೇಣಿಯ ಅಧಿಕಾರಿ, ಬಿಎಂಟಿಎಫ್ ಉಪ ಪೊಲೀಸ್ ಅಧೀಕ್ಷಕ ಹುದ್ದೆಗೆ ಕೆಎಸ್‌ಪಿಎಸ್ ಹುದ್ದೆಯ ಅಧಿಕಾರಿಯನ್ನು ನೇಮಕಗೊಳಿಸಲಿದೆ.
ಆಡಳಿತ ವಿಭಾಗದ ಉಪ ಆಯುಕ್ತರ ಹುದ್ದೆ ಆಯ್ಕೆ ಶ್ರೇಣೆಯ ಹಾಗೂ ಸಹಾಯಕ ಆಯುಕ್ತರ ಹುದ್ದೆಗೆ ಹಿರಿಯ ಶ್ರೇಣಿಯ ಎರಡು ಕೆಎಎಸ್ ಅಧಿಕಾರಿಗಳನ್ನು ನಿಯೋಜಿಸಲಾಗಲಿದೆ.
5 ನಗರ ಪಾಲಿಕೆಯ ಹುದ್ದೆ ವಿವರ:
ಐದು ನಗರ ಪಾಲಿಕೆಯ ಆಯುಕ್ತರ ಹುದ್ದೆಗೆ ತಲಾ ಒಬ್ಬ ಕಾರ್ಯದರ್ಶಿ ಶ್ರೇಣಿಯ ಐಎಎಸ್ ಅಧಿಕಾರಿ ಹಾಗೂ ಐದು ಹೆಚ್ಚುವರಿ ಆಯುಕ್ತರ ಹುದ್ದೆಗೆ ತಲಾ ಹಿರಿಯ/ಜೆಎಜಿ ಶ್ರೇಣಿಯ ಐಎಎಸ್ ಅಧಿಕಾರಿಗಳನ್ನು ನಿಯೋಜಿಸಲಾಗುತ್ತದೆ.
ಐದು ನಗರ ಪಾಲಿಕೆ ವಲಯಗಳಿಗೆ ಐದು ಜಂಟಿ ಆಯುಕ್ತರು ಹಾಗೂ ಕಂದಾಯ ವಿಭಾಗದ ಐದು ಅಪರ ಆಯುಕ್ತರ ಹುದ್ದೆಗೆ ಒಟ್ಟು 10 ಕೆಎಎಸ್ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗುತ್ತದೆ.
ಮರು ನಿಯೋಜನೆಗೊಳಿಸಿದ ಹುದ್ದೆಗಳಿಗೆ ಬಹುತೇಕ ಸೋಮವಾರ ಅಧಿಕಾರಿಗಳನ್ನು ನೇಮಕ ಮಾಡಿ ಸರ್ಕಾರ ಆದೇಶಿಸಲಿದೆ. ಉಳಿದಂತೆ ಬಿಬಿಎಂಪಿ ಕೇಂದ್ರ ಕಚೇರಿ ಹೊರತು ಪಡಿಸಿ ವಲಯ, ವಾರ್ಡ್, ಉಪ ವಿಭಾಗದ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ ಸಿಬ್ಬಂದಿಯನ್ನು ಆಯಾ ವ್ಯಾಪ್ತಿಯ ನಗರ ಪಾಲಿಕೆಗೆ ನಿಯೋಜಿಸುವುದಕ್ಕೆ ಚಿಂತನೆ ನಡೆಸಲಾಗಿದೆ.
ಯಾವ ನಗರ ಪಾಲಿಕೆಗೆ ಎಷ್ಟು ಅಧಿಕಾರಿ ಸಿಬ್ಬಂದಿ ನಿರೀಕ್ಷೆ?
ಜಿಬಿಎ ಕೇಂದ್ರ ಕಚೇರಿಗೆ-314
ಉತ್ತರ ನಗರ ಪಾಲಿಕೆ-4,315
ದಕ್ಷಿಣ ನಗರ ಪಾಲಿಕೆ-4,215
ಪೂರ್ವ ನಗರ ಪಾಲಿಕೆ-2,163
ಪಶ್ಚಿಮ ನಗರ ಪಾಲಿಕೆ-6,024
ಕೇಂದ್ರ ನಗರ ಪಾಲಿಕೆ-3,678
ಬಿಸ್ಮೈಲ್-107
ವಲಯ-ಫೀಲ್ಡ್ ಸಿಬ್ಬಂದಿ-2,784
ಬಿಎಸ್‌ಡಬ್ಲ್ಯೂಎಂಎಲ್-89
ಮಿನಿಸ್ಟೇರಿಯಲ್ ಸಿಬ್ಬಂದಿ-1,851
ಬಿಎಂಟಿಎಫ್-27
ಹಾಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಸಿಬ್ಬಂದಿ-18,790
ಅಗತ್ಯವಿರುವ ಅಧಿಕಾರಿ ಸಿಬ್ಬಂದಿ-23,689
ಮಂಜೂರಾದ ಅಧಿಕಾರಿ ಸಿಬ್ಬಂದಿ-22,411
ಹೊಸ ಪಾಲಿಕೆ ವಾರ್ಡ್ ಸಂಖ್ಯೆ ಆಯೋಗ ತೀರ್ಮಾನ: ಮಹೇಶ್ವರರಾವ್
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ ಬರುವವರೆಗೆ ಹಾಲಿ 198 ವಾರ್ಡ್ ಆಧಾರದಲ್ಲಿಯೇ ಕಾರ್ಯನಿರ್ವಹಿಸಲಿದೆ. ಐದು ಹೊಸ ನಗರ ಪಾಲಿಕೆಗಳ ಕುರಿತು ರಾಜ್ಯ ಸರ್ಕಾರ ಆದೇಶಿಸಲಿದೆ. ನಂತರ ಐದು ಪಾಲಿಕೆಗಳ ವಾರ್ಡ್ ರಚನೆಗೆ ಪ್ರತ್ಯೇಕ ಪುನರ್ ವಿಂಗಡನಾ ಆಯೋಗವನ್ನು ಸರ್ಕಾರ ರಚಿಸಲಿದೆ. ಆಯೋಗವು ಆಯಾ ನಗರ ಪಾಲಿಕೆ ವಾರ್ಡ್ ಸಂಖ್ಯೆ, ಗಡಿ, ಇತರೆ ವಿವರವನ್ನು ನಿರ್ಧರಿಸಲಿದೆ. ಹೀಗಾಗಿ ಯಾವುದೇ ರೀತಿಯ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ.