ಸಾರಾಂಶ
ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ನಗರಸಭೆ ಅಧ್ಯಕ್ಷೆ
ಕನ್ನಡಪ್ರಭ ವಾರ್ತೆ ಶಿರಸಿಸಾರ್ವಜನಿಕರು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು. ಎಲ್ಲೆಂದರಲ್ಲಿ ಕಸ ಬೀಸಾಡುವುದನ್ನು ಬಿಡಬೇಕು ಎಂದು ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಹೇಳಿದರು.
ಬುಧವಾರ ನಗರದ ಅಕ್ಷಯ ಗಾರ್ಡನ್‌ನಲ್ಲಿ ನಡೆದ ಶಿರಸಿ ನಗರಸಭೆಯ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪೌರ ಕಾರ್ಮಿಕರು ಸ್ವಚ್ಛತೆ ಮಾಡದಿದ್ದರೆ ಪರಿಸರ ಹದಗೆಡುತ್ತದೆ. ಸಾಮಾನ್ಯರು ರಸ್ತೆಗೆ ಕಾಲಿಡಲು ಆಗದ ಸ್ಥಿತಿ ನಿರ್ಮಾಣ ಆಗುತ್ತದೆ. ಸ್ವಚ್ಛತೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಆಗ ಎಲ್ಲೆಡೆ ಸ್ವಚ್ಛತೆ ಮನೆಮಾಡುತ್ತದೆ. ಇದು ಸ್ವಚ್ಛತಾ ಕಾರ್ಮಿಕರಿಗೆ ಮಾಡುವ ಸಹಕಾರವಾಗಿದೆ ಎಂದರು.
ಉಪಾಧ್ಯಕ್ಷ ರಮಾಕಾಂತ ಭಟ್ ಮಾತನಾಡಿ, ಪೌರ ಕಾರ್ಮಿಕರು ಕಾಯಕ ಯೋಗಿಗಳಾಗಿದ್ದಾರೆ. ಇಂತಹ ಸ್ವಚ್ಛತಾ ಯೋಧರಿಗೆ ಸಾರ್ವಜನಿಕರು ಗೌರವ ಸಲ್ಲಿಸಬೇಕು ಎಂದರು.ಪೌರಾಯುಕ್ತ ಪ್ರಕಾಶ ಚನ್ನಪ್ಪನವರ ಮಾತನಾಡಿ, ಪೌರಕಾರ್ಮಿಕರು ತಮ್ಮ ಕೆಲಸದ ಜತೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಲಿಕೆಗೆ ಉತ್ತೇಜನ ನೀಡಬೇಕು ಎಂದರು.
ಪೌರಕಾರ್ಮಿಕರಾದ ಸನಿಯಾ ರತ್ನಾಚಾರಿ, ಶ್ರೀಮತಿ ಮಾಸ್ತಿ ಹರಿಜನ, ಗಣಪತಿ ಹರಿಜನ, ಅನೀಲ ಭೋಜಾ ಹರಿಜನ, ವಿಶ್ವನಾಥ ಹರಿಜನ, ಶಿವು ಜಾಡಮಾಲಿ, ಶರದ್ ಕಾನಡೆ, ಅನೀಲ ರಮೇಶ ಹರಿಜನ, ಪ್ರದೀಪ ಶಿರಸಿಕರ, ನವಿನ ಎಸ್. ಅವರನ್ನು ನಗರಸಭೆಯಿಂದ ಗೌರವಿಸಲಾಯಿತು. ಇದೇ ವೇಳೆ ಪೌರ ಕಾರ್ಮಿಕರಿಗೆ ಸುರಕ್ಷಾ ಧಿರಿಸು ವಿತರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು. ಇದೇ ವೇಳೆ ಪೌರ ಕಾರ್ಮಿಕರು ಹಾಗೂ ಅವರ ಮಕ್ಕಳಿಗೆ ವಿವಿಧ ಕ್ರೀಡಾ ಸ್ಪರ್ಧೆ, ಮನೋರಂಜನಾ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ನಂತರ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಪ್ರಮುಖರಾದ ಜನಮೇಜಯ ರಾವ್, ಸದಸ್ಯರಾದ ಪ್ರದೀಪ ಶೆಟ್ಟಿ, ಮಧುಕರ ಬಿಲ್ಲವ, ಶ್ರೀಕಾಂತ ಬಳ್ಳಾರಿ, ವನಿತಾ ಶೆಟ್ಟಿ, ಮಾಲತಿ ಶೆಟ್ಟಿ, ಶಾರದಾ ಶೇಟ್, ಗೀತಾ ಶೆಟ್ಟಿ, ತಾರಾ ನಾಯ್ಕ, ಶಮೀನ ಭಾನು, ರುಬೇಕಾ ಫರ್ನಾಂಡೀಸ್, ಶೀಲು ಬ್ಲೇಜ್ ವಾಜ್, ನೇತ್ರಾವತಿ ಮತ್ತಿತರರಿದ್ದರು. ಮಂಜುನಾಥ ಬಾರೇಕರ ಉಪನ್ಯಾಸ ನೀಡಿದರು. ಮಾಸ್ತಿ ಹರಿಜನ ಪ್ರಾರ್ಥಿಸಿದರು. ವೇಣುಗೋಪಾಲ ಶಾಸ್ತ್ರೀ ನಿರೂಪಿಸಿದರು.