ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕಿ

| Published : Aug 17 2024, 12:45 AM IST / Updated: Aug 17 2024, 12:46 AM IST

ಸಾರಾಂಶ

ಚಿಂತಾಮಣಿಯ ತಾಲೂಕನ್ನು ಪ್ಲಾಸ್ಟಿಕ್‌ಮುಕ್ತವನ್ನಾಗಿ ಮಾಡುವ ಕನಸನ್ನು ಹೊಂದಿದ್ದು ಅದನ್ನು ನನಸು ಮಾಡಬೇಕಾದರೆ ನಾವೆಲ್ಲರೂ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಬೇಕು. ಹಂತ ಹಂತವಾಗಿ ಕಡಿವಾಣ ಹಾಕುವುದರ ಮೂಲಕ ಪ್ಲಾಸ್ಟಿಕ್‌ ಬಳಕೆ ನಿಲ್ಲಿಸಲು ಸಾಧ್ಯ

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಸ್ವಾತಂತ್ರ್ಯ ಬಂದು ೭೮ವರ್ಷಗಳು ಕಳೆದರೂ ಆಧುನಿಕ ಗುಲಾಮಗಿರಿ ಪದ್ಧತಿಗಳೂ ಇನ್ನೂ ಜೀವಂತವಾಗಿದ್ದು, ಅವುಗಳನ್ನು ಹೋಗಲಾಡಿಸಬೇಕಾಗಿದೆ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಸುದರ್ಶನ್ ಯಾದವ್ ನುಡಿದರು.

ನಗರದ ಝಾನ್ಸಿರಾಣಿ ಲಕ್ಷ್ಮೀಬಾಯಿ ಕ್ರೀಡಾಂಗಣದಲ್ಲಿ ೭೮ನೇ ಸ್ವಾತಂತ್ರ‍್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಗಳಿಸಿರುವ ಸ್ವಾತಂತ್ರ‍್ಯವನ್ನು ಉಳಿಸಿ ಬೆಳೆಸಿ ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಪ್ಲಾಸ್ಟಿಕ್‌ ಬಳಕೆ ಕೈಬಿಡಿ

ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಚಿಂತಾಮಣಿಯನ್ನು ಪ್ಲಾಸ್ಟಿಕ್ ಮುಕ್ತ ಚಿಂತಾಮಣಿಯ ತಾಲ್ಲೂಕನ್ನಾಗಿಸುವ ಕನಸನ್ನು ಹೊಂದಿದ್ದು ಅದನ್ನು ನನಸು ಮಾಡಬೇಕಾದರೆ ನಾವೆಲ್ಲರೂ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಬೇಕು. ಹಂತ ಹಂತವಾಗಿ ಕಡಿವಾಣ ಹಾಕುವುದರ ಮೂಲಕ ಪ್ಲಾಸ್ಟಿಕ್‌ ಬಳಕೆ ನಿಲ್ಲಿಸಲು ಸಾಧ್ಯವೆಂದರು.

ಡಿವೈಎಸ್‌ಪಿ ಮುರಳೀಧರ್ ಮಾತನಾಡಿ ಪ್ರತಿ ಪ್ರಜೆಯೂ ಸಮವಸ್ತ್ರ ಧರಿಸದ ಪೊಲೀಸ್ ಇದ್ದಂತೆ. ನೀವು ಸಹಾ ಸಮಾಜದ ಶಾಂತಿ ಸುವವ್ಯಸ್ಥೆ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸಬೇಕು ಎಂದರು.

ಸಾಧಕರಿಗೆ ಸನ್ಮಾನ

ವಿವಿಧ ಶಾಲಾ ವಿದ್ಯಾರ್ಥಿಗಳ ತಂಡದವರು ಪರೇಡ್ ಮೂಲಕ ಗಣ್ಯರಿಗೆ ಗೌರವ ವಂದನೆ ಸಲ್ಲಿಸಿದರು, ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಯೋಗಾಸನ, ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು, ರಾಷ್ಟ್ರಪತಿ ಪದಕ ಪುರಸ್ಕೃತ ಡಿವೈಎಸ್‌ಪಿ ಮುರಳೀಧರ್‌ರನ್ನು ಮತ್ತು ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ತಾ.ಪಂ. ಇಒ ಎಸ್.ಆನಂದ್, ಪೌರಾಯುಕ್ತ ಚಲಪತಿ, ಕೃಷಿಕ ಸಮಾಜದ ಅಧ್ಯಕ್ಷ ಗೋವಿಂದಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ಮುನಿರೆಡ್ಡಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶ್ರೀನಾಥರೆಡ್ಡಿ, ನಗರಸಭಾ ಸದಸ್ಯರಾದ ರೆಡ್ಡಪ್ಪ, ರಾಜಾಚಾರಿ, ಸುಹಾಸಿನಿ ಶೇಷುರೆಡ್ಡಿ, ಕಲಾವತಿ ಆಂಜಿನಪ್ಪ, ಶಬ್ಬೀರ್, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.