ಮೈಸೂರು ದಸರಾ ಆನೆಗಳ ಜತೆಗೆ ರೀಲ್ಸ್‌ - ಫೋಟೋಗೆ ಅವಕಾಶವಿಲ್ಲ

| Published : Sep 24 2024, 01:54 AM IST

ಸಾರಾಂಶ

ಮೈಸೂರು ದಸರಾ ಆನೆಗಳ ಜತೆಗೆ ಸಾರ್ವಜನಿಕರು ರೀಲ್ಸ್‌ ಮಾಡುವುದು, ಫೋಟೋ ತೆಗೆಯಲು ಅವಕಾಶ ಮಾಡಿಕೊಡಬಾರದು ಎಂದು ಅಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಸೂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮೈಸೂರು ದಸರಾ ಜಂಬೂ ಸವಾರಿ ಆನೆಗಳ ಜತೆಗೆ ಸಾರ್ವಜನಿಕರು ರೀಲ್ಸ್‌ ಮಾಡುವುದು, ಫೋಟೋ ತೆಗೆಸುವುದಕ್ಕೆ ಅನುವು ಮಾಡಿಕೊಟ್ಟ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಅರಣ್ಯ ಸಚಿವ ಈಶ್ವರ್‌ ಖಂಡ್ರೆ, ಆನೆಗಳನ್ನು ಸುರಕ್ಷಿತವಾಗಿ ಶಿಬಿರಕ್ಕೆ ಬಿಡುವವರೆಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ಸೂಚಿಸಿದ್ದಾರೆ.

ಮೈಸೂರು ದಸರಾ ಜಂಬೂ ಸವಾರಿಗೆ ಕಾಡಿನಿಂದ ಬಂದಿರುವ ಆನೆಗಳೊಂದಿಗೆ ಸಾರ್ವಜನಿಕರು ರೀಲ್ಸ್‌ ಮಾಡಲು, ಫೋಟೋ ತೆಗೆಸಿಕೊಳ್ಳಲು ಅಧಿಕಾರಿಗಳು ಅವಕಾಶ ನೀಡಿದ್ದಾರೆ. ಅದರಿಂದ ಆನೆಗಳು ವಿಚಲಿತವಾಗಿದ್ದು, ಅನುಚಿತವಾಗಿ ವರ್ತಿಸುತ್ತಿವೆ. ಕೆಲದಿನಗಳ ಹಿಂದೆ ಕಂಜನ್‌ ಮತ್ತು ಧನಂಜಯ ಆನೆಗಳ ನಡುವೆ ಕಾದಾಟವಾಗಲು ಇದೂ ಕಾರಣ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆನೆಗಳನ್ನು ವೀಕ್ಷಿಸಲು ಬರುವವರಲ್ಲಿ ಕೆಲವರು ರೀಲ್ಸ್‌ ಮಾಡುವುದರ ಜತೆಗೆ ಆನೆಗಳ ಸೊಂಡಿಲನ್ನು ತಬ್ಬಿಕೊಂಡು ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಶಿಬಿರದಿಂದ ಬಂದಿರುವ ಆನೆಗಳು ಸುರಕ್ಷಿತವಾಗಿ ಶಿಬಿರಕ್ಕೆ ವಾಪಾಸಾಗುವವರೆಗೂ ಯಾವುದೇ ಅನಾಹುತವಾಗದಂತೆ ಅಧಿಕಾರಿಗಳು ಎಚ್ಚರವಹಿಸಬೇಕು. ಇನ್ನು ಮುಂದೆ ಆನೆಗಳೊಂದಿಗೆ ರೀಲ್ಸ್‌ ಮಾಡಲು, ಅನುಚಿತವಾಗಿ ಭಾವಚಿತ್ರ ತೆಗೆಸಿಕೊಳ್ಳಲು ಅವಕಾಶ ನೀಡಬಾರದು ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವಂತೆ ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರದ ಮೂಲಕ ತಿಳಿಸಿದ್ದಾರೆ.