ಪ್ರಣಾಳಿಕೆ ಸಿದ್ಧಪಡಿಸಲು ಜನಾಭಿಪ್ರಾಯ ಸಂಗ್ರಹ

| Published : Mar 08 2024, 01:49 AM IST

ಸಾರಾಂಶ

ರಾಜ್ಯಾದ್ಯಂತ ಸುಮಾರು 3 ಲಕ್ಷ ತಜ್ಞರು, ಹಿರಿಯರಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ.

ಕೊಪ್ಪಳ: ಈಗಾಗಲೇ ಜಗತ್ತಿನ ಐದನೇ ಆರ್ಥಿಕ ಶಕ್ತಿಯಾಗಿ ಭಾರತವನ್ನು ರೂಪಿಸಿದ ಪ್ರಧಾನಿ ನರೇಂದ್ರ ಮೋದಿ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಪ್ರಣಾಳಿಕೆಯನ್ನು ಜನಾಭಿಪ್ರಾಯ ಸಂಗ್ರಹದೊಂದಿಗೆ ಸಿದ್ಧಪಡಿಸಲು ಮುಂದಾಗಿದ್ದಾರೆ. ಇದಕ್ಕಾಗಿಯೇ ಸಂಕಲ್ಪ ಪತ್ರ ಅಭಿಯಾನ ಪ್ರಾರಂಭಿಸಲಾಗಿದೆ ಎಂದು "ವಿಕಾಸನ ಹಾದಿ ನರೇಂದ್ರ ಮೋದಿ " ಸಂಚಾಲಕ ಮಂಜುನಾಥ ನಾಡಗೌಡ ಹೇಳಿದರು.

ಕೊಪ್ಪಳದಲ್ಲಿ ಸಂಕಲ್ಪ ಪತ್ರ ಅಭಿಯಾನದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ರಾಜ್ಯಾದ್ಯಂತ ಸುಮಾರು 3 ಲಕ್ಷ ತಜ್ಞರು, ಹಿರಿಯರಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಕೊಪ್ಪಳ ಲೋಕಸಭಾ ವ್ಯಾಪ್ತಿಯಲ್ಲಿ ಸುಮಾರು 11 ಸಾವಿರ ಜನರಿಂದ ಅಭಿಪ್ರಾಯ ಸಂಗ್ರಹ ಮಾಡುವ ಗುರಿ ಹೊಂದಲಾಗಿದೆ. ಪತ್ರಕರ್ತರು, ವೈದ್ಯರು ಸೇರಿದಂತೆ ಎಲ್ಲ ಬಗೆಯ ಜನರಿಂದಲೂ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಕಳೆದ 10 ವರ್ಷಗಳ ಅಧಿಕಾರಾವಧಿಯಲ್ಲಿ ಸುಮಾರು 25 ಕೋಟಿ ಬಡವರು ಬಡತನದಿಂದ ಹೊರಗೆ ಬಂದಿದ್ದಾರೆ. ವಿಶ್ವದಲ್ಲಿಯೇ ಭಾರತ ಐದನೇ ಶಕ್ತಿಯಾಗಿ ರೂಪುಗೊಂಡಿದೆ. ಪ್ರತಿದಿನ 37 ಕಿ.ಮೀ. ಹೆದ್ದಾರಿ ನಿರ್ಮಾಣ ಮಾಡಲಾಗುತ್ತದೆ. 51 ಕೋಟಿ ಜನಧನ್ ಖಾತೆಗಳನ್ನು ತೆರೆಯಲಾಗಿದೆ. ಪಿಎಂ ಸ್ವನಿಧಿಯಿಂದ 78 ಲಕ್ಷ ಬೀದಿಬದಿ ವ್ಯಾಪಾರಿಗಳಿಗೆ ಅನುಕೂಲವಾಗುತ್ತಿದೆ. ಹೀಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ವಿಕಸಿತ ಭಾರತವಾಗುತ್ತಿದೆ. ಈಗ ಪುನಃ ದೇಶದ ಜನಾಭಿಪ್ರಾಯದ ಮೇಲೆಯೇ ಪ್ರಣಾಳಿಕೆ ರೂಪಿಸಲಾಗುತ್ತದೆ ಎಂದರು.ಆಕಾಂಕ್ಷಿಗಳು ಹೆಚ್ಚಿದ್ದಾರೆ:

ಬಿಜೆಪಿಯಲ್ಲಿ ಆಕಾಂಕ್ಷಿಗಳು ಹೆಚ್ಚಿರುವುದರಿಂದ ಒಂದಷ್ಟು ಗೊಂದಲವಾಗಿದೆ. ಆದರೆ, ಇದು ನಮ್ಮ ಶಕ್ತಿಯೇ ಹೊರತು ಭಿನ್ನಾಭಿಪ್ರಾಯ ಅಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ ಹೇಳಿದರು.ಪಕ್ಷ ಕಟ್ಟುವ ಕಾರ್ಯಕ್ಕೂ ಹೆಚ್ಚು ಆಕಾಂಕ್ಷಿಗಳು ಇರುವುದು ಉತ್ತಮ ಬೆಳವಣಿಗೆಯಾಗಿದೆ. ಕಾರಟಗಿಯಲ್ಲಿ ಮಂಡಲ ಅಧ್ಯಕ್ಷರಾಗಲು ನಾಲ್ಕಾರು ಆಕಾಂಕ್ಷಿಗಳು ಮುಂದಾಗಿದ್ದಾರೆ. ಅದ್ಯಾವುದೇ ಸಾಂವಿಧಾನಿಕ ಹುದ್ದೆಯಲ್ಲ, ಅಧಿಕಾರವೂ ಅಲ್ಲ. ಪಕ್ಷದ ಕೆಲಸ ಮಾಡಲು ಮುಂದಾಗುತ್ತಿರುವುದು ಬಿಜೆಪಿಯ ಬಲಾಢ್ಯವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಹೀಗಾಗಿ, ನಾವು ಅದನ್ನು ಧನಾತ್ಮಕವಾಗಿಯೇ ಪರಿಗಣಿಸುತ್ತೇವೆ ಎಂದರು.ಸಂಸದ ಸಂಗಣ್ಣ ಕರಡಿ ಮಾತನಾಡಿದರು.

ಸುದ್ದಿಗೋಷ್ಠಿಯಲ್ಲಿ ಚಂದ್ರಶೇಖರ ಹಲಿಗೇರಿ, ರಾಜಶೇಖರ ಹಿರೇಮಠ, ಮಂಜುಳಾ ಕರಡಿ, ಮಂಜುನಾಥ ಪಾಟೀಲ್, ಮೌನೇಶ ದಢೇಸೂಗೂರು ಇದ್ದರು.