ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ಗೆ ನಬಾರ್ಡ್‌ನಿಂದ ನೀಡಲಾಗುವ ಪುನರ್ಧನ ಸೌಲಭ್ಯದ ನಿಧಿಯನ್ನು ಕಡಿತಗೊಳಿಸಿರುವುದನ್ನು ವಿರೋಧಿಸಿ ಸೋಮವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.ಡಿಸಿಸಿ ಬ್ಯಾಂಕ್‌ನಿಂದ ಶೂನ್ಯ ಬಡ್ಡಿದರ ಯೋಜನೆಯಲ್ಲಿ ರೈತರಿಗೆ ಸಾಲ ನೀಡಲಾಗುತ್ತಿದ್ದು, ರೈತರಿಗೆ ಬೆಳೆ ಸಾಲ ನೀಡುವ ಮಿತಿಯನ್ನು 5 ಲಕ್ಷ ರು.ವರೆಗೆ ಹಾಗೂ ಶೇ. 3ರ ಮಧ್ಯಮಾವಧಿ ಸಾಲದ ಮಿತಿಯನ್ನು 15 ಲಕ್ಷ ರು.ವರೆಗೆ ರಾಜ್ಯ ಸರ್ಕಾರ ಹೆಚ್ಚಿಸಿರುವುದು ಸ್ವಾಗತದ ವಿಷಯವಾಗಿದೆ. ಆದರೆ, ರೈತರು ಶೂನ್ಯ ಬಡ್ಡಿದರದಲ್ಲಿ ಮಧ್ಯಮಾವಧಿ ಸಾಲ ಪಡೆಯಲು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅನ್ನೇ ಅವಲಂಬಿಸಿರುತ್ತಾರೆ. ಇದುವರೆಗೂ ನಬಾರ್ಡ್‌ನಿಂದ ಡಿಸಿಸಿ ಬ್ಯಾಂಕ್‌ಗೆ ಕಡಿಮೆ ಬಡ್ಡಿದರದಲ್ಲಿ ಪುನರ್ಧನ ಸೌಲಭ್ಯ ನೀಡಲಾಗುತ್ತಿತ್ತು. ಇದರಿಂದ ಸಾಲ ನೀಡಲು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ಗೆ ಸಂಪನ್ಮೂಲದ ಕೊರತೆ ಆಗುತ್ತಿರಲಿಲ್ಲ. ಆದರೆ, ಇತ್ತೀಚಿನ ಕೆಲವು ವರ್ಷಗಳಿಂದ ನಬಾರ್ಡ್ ನವರು ಬ್ಯಾಂಕ್ ಗಳಿಗೆ ನೀಡುವ ಪುರ್ಧನ ಸೌಲಭ್ಯವನ್ನು ಗಣನೀಯವಾಗಿ ಕಡಿತಗೊಳಿಸಿರುತ್ತಾರೆ ಎಂದು ಮನವಿದಾರರು ತಿಳಿಸಿದರು.
ಈ ಹಿಂದೆ ಇದ್ದ ಶೇ.40 ರಿಂದ 2024-25ನೇ ಸಾಲಿಗೆ ಶೇ.10ರಷ್ಟು ಕಡಿತಗೊಳಿಸಲಾಗಿದೆ. ಕಳೆದ 5 ವರ್ಷಗಳಲ್ಲಿ ಗಣನೀಯವಾಗಿ ನಬಾರ್ಡ್‌ನಿಂದ ಪುನರ್ಧನ ಕಡಿಮೆ ಯಾಗಿದೆ. ಇದರಿಂದ ಡಿಸಿಸಿ ಬ್ಯಾಂಕ್ ರೈತರ ಸಾಲ ಬೇಡಿಕೆಯನ್ನು ಸಂಪೂರ್ಣವಾಗಿ ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಮನವಿದಾರರು ಆರೋಪಿಸಿದ್ದಾರೆ. ಜಿಲ್ಲೆ ಯಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರ ಸಾಲದ ಬೇಡಿಕೆ 2650 ಕೋಟಿ ರು. ಇದೆ. ಆದರೆ, ಪ್ರಸ್ತುತ 1200 ಕೋಟಿ ರು. ಸಾಲ ಮಾತ್ರ ನೀಡಲು ಸಾಧ್ಯವಾಗಿದೆ. ಬೇಡಿಕೆಯ ಅರ್ಧದಷ್ಟನ್ನೂ ಪೂರೈಸಲು ಸಾಧ್ಯವಾಗುತ್ತಿಲ್ಲ. ಅಲ್ಲದೇ, ಪ್ರಾಥಮಿಕ ಸಹಕಾರ ಸಂಘಗಳು ಆರ್ಥಿಕವಾಗಿ ಸದೃಢವಾಗಿಲ್ಲ. ಸ್ವಂತ ಬಂಡವಾಳದಿಂದ ಸಾಲ ನೀಡುವ ಶಕ್ತಿ ಹೊಂದಿಲ್ಲ. ಅನಿವಾರ್ಯವಾಗಿ ಅಪೆಕ್ಸ್ ಬ್ಯಾಂಕ್ ನಿಂದ ಹೆಚ್ಚಿನ ಬಡ್ಡಿದರದಲ್ಲಿ ಸಾಲ ಪಡೆದು ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಿ ನಷ್ಟ ಅನುಭವಿಸುವಂತಾಗಿದೆ ಎಂದು ತಿಳಿಸಿದರು.ಆದ್ದರಿಂದ ಜಿಲ್ಲೆಯ ಪರವಾಗಿ ರಾಜ್ಯದ ರೈತರ ಹಿತದೃಷ್ಟಿಯಿಂದ ಜಿಲ್ಲಾ ಬ್ಯಾಂಕ್ ಗಳಿಗೆ ನೀಡಲಾಗುತ್ತಿರುವ ನಬಾರ್ಡ್ ಪುನರ್ಧನ ಸೌಲಭ್ಯ ಹೆಚ್ಚಿಸುವಂತೆ ಮುಖ್ಯಮಂತ್ರಿಗಳು ನಬಾರ್ಡ್ ಸಂಸ್ಥೆಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಪ್ರಮುಖರಾದ ವಾಟಗೋಡು ಸುರೇಶ್, ವಿದ್ಯಾಧರ್, ಸುಧೀರ್, ವೆಂಕಟೇಶ್, ದುಗ್ಗಪ್ಪಗೌಡ, ಶಿವಶಂಕರ್, ಚಂದ್ರಶೇಖರಗೌಡ, ಹನುಮಂತು ಸೇರಿದಂತೆ ಹಲವರು ಇದ್ದರು.ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಮಾತನಾಡಿ,ಜಿಲ್ಲೆಯಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರ ಸಾಲದ ಬೇಡಿಕೆ 2650 ಕೋಟಿ ರು. ಇದೆ. ಆದರೆ, ಪ್ರಸ್ತುತ 1200 ಕೋಟಿ ರು. ಸಾಲಮಾತ್ರ ನೀಡಲು ಸಾಧ್ಯವಾಗಿದೆ. ಬೇಡಿಕೆಯ ಅರ್ಧದಷ್ಟನ್ನೂ ಪೂರೈಸಲು ಸಾಧ್ಯವಾಗುತ್ತಿಲ್ಲ. ಅಲ್ಲದೇ, ಪ್ರಾಥಮಿಕ ಸಹಕಾರ ಸಂಘಗಳು ಆರ್ಥಿಕವಾಗಿ ಸದೃಢವಾಗಿಲ್ಲ. ಸ್ವಂತ ಬಂಡವಾಳದಿಂದ ಸಾಲ ನೀಡುವ ಶಕ್ತಿ ಹೊಂದಿಲ್ಲ. ಅನಿವಾರ್ಯವಾಗಿ ಅಪೆಕ್ಸ್ ಬ್ಯಾಂಕ್‌ನಿಂದ ಹೆಚ್ಚಿನ ಬಡ್ಡಿದರದಲ್ಲಿ ಸಾಲ ಪಡೆದು ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಿ ನಷ್ಟ ಅನುಭವಿಸುವಂತಾಗಿದೆ ಎಂದರು.