ಹವ್ಯಕ ಸಮಾಜವು ಮೂಲತಃ ಪ್ರತಿಭಾವಂತ ಸಮಾಜವಾಗಿದ್ದು, ರಾಜ ಮಹಾರಾಜರ ಕಾಲದಿಂದಲೂ ಸಮಾಜಕ್ಕೆ ಪ್ರಾಮುಖ್ಯತೆ ನೀಡುತ್ತಾ ಬರಲಾಗಿದೆ.

ಹುಬ್ಬಳ್ಳಿ:

ನಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸುವ ಕಾರ್ಯವೇ ಪ್ರತಿಬಿಂಬವಾಗಿದೆ. ಹವ್ಯಕ ಸಮಾಜದಲ್ಲಿ ಹಲವಾರು ಮಾದರಿ ಪ್ರತಿಭೆಗಳಿದ್ದು, ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಅವಶ್ಯವಾಗಿವೆ ಎಂದು ಹು-ಧಾ ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ವಿ.ಎಂ. ಭಟ್ಟ ಅಭಿಪ್ರಾಯ ವ್ಯಕ್ತಪಡಿಸಿದರು.

ಶ್ರೀ ಅಖಿಲ ಹವ್ಯಕ ಮಹಾಸಭಾ ಬೆಂಗಳೂರು ಹಾಗೂ ಹು-ಧಾ ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಸಹಯೋಗದಲ್ಲಿ ಇಲ್ಲಿನ ಗೋಕುಲ ರಸ್ತೆಯ ಹವ್ಯಕ ಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಹು-ಧಾ ಪ್ರಾಂತ್ಯ ಪ್ರತಿಬಿಂಬ ಪ್ರತಿಭಾ ಶೋಧ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹವ್ಯಕ ಸಮಾಜವು ಮೂಲತಃ ಪ್ರತಿಭಾವಂತ ಸಮಾಜವಾಗಿದ್ದು, ರಾಜ ಮಹಾರಾಜರ ಕಾಲದಿಂದಲೂ ಸಮಾಜಕ್ಕೆ ಪ್ರಾಮುಖ್ಯತೆ ನೀಡುತ್ತಾ ಬರಲಾಗಿದೆ. ಪ್ರತಿ ವರ್ಷ ಸಮಾಜವು ಒಂದೆಡೆ ಸೇರುವ ಮೂಲಕ ಸಾಂಸ್ಕೃತಿಕ, ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮ ಮಾಡುವ ಮೂಲಕ ನಮ್ಮ ಧಾರ್ಮಿಕ, ಕಲೆ, ಸಾಹಿತ್ಯ, ಸಂಪ್ರದಾಯವನ್ನು ಉಳಿಸಿ-ಬೆಳೆಸಿಕೊಂಡು ಹೋಗಬೇಕಿದೆ ಎಂದರು.

ಅತಿಥಿಗಳಾಗಿ ಆಗಮಿಸಿದ್ದ ಅಖಿಲ‌ ಹವ್ಯಕ ಮಹಾಸಭಾ ಅಧ್ಯಕ್ಷ ಡಾ. ಗಿರಿಧರ ಕಜೆ, ಹವ್ಯಕ ಸಮುದಾಯವೆಂದರೆ ಪ್ರತಿಭೆಗಳ ಮಹಾಸಾಗರ ಹಾಗೂ ಅದ್ಭುತ ಜ್ಞಾನದ ಗಣಿಯಾಗಿದೆ. ಸಮಾಜದವರು ಇಂದು ಬಹುತೇಕ ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಹವ್ಯಕ ಸಮುದಾಯದ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಬೆಳಕಿಗೆ ತರುವ ಕಾರ್ಯವನ್ನು ಸಂಸ್ಥೆ ಕಳೆದ 31 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಕಳೆದ ಐದು ವರ್ಷಗಳಿಂದ ರಾಜ್ಯದ ಎಲ್ಲ‌ ಜಿಲ್ಲೆಗಳಲ್ಲಿಯೂ ಪ್ರತಿಬಿಂಬ ಪ್ರತಿಭಾ ಶೋಧಾ ಕಾರ್ಯಕ್ರಮ ನಡೆಸಿಕೊಂಡ ಬರಲಾಗುತ್ತಿದೆ. ಹು-ಧಾ ಪ್ರಾಂತ್ಯದ ಜಿಲ್ಲಾಮಟ್ಟದ ಸ್ಪರ್ಧೆ ವಿಜೇತರಿಗೆ ಬೆಂಗಳೂರಿನಲ್ಲಿ ಸ್ಪರ್ಧೆ ಆಯೋಜಿಸಲಾಗುವುದು ಎಂದು ತಿಳಿಸಿದರು.

ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಸದಸ್ಯ ಶಿವರಾಮ‌ ಹೆಗಡೆ ಮಾತನಾಡಿದರು. ಇದೇ ವೇಳೆ ಅಖಿಲ ಹವ್ಯಕ‌ ಮಹಾಸಭಾದ ಮಹಿಳಾ ವೇದಿಕೆಯ ಹುಬ್ಬಳ್ಳಿ-ಧಾರವಾಡ ಶಾಖೆಗಳನ್ನು ಅಧ್ಯಕ್ಷ ಡಾ. ಗಿರಿಧರ ಕಜೆ ಉದ್ಘಾಟಿಸಿದರು. ಸಂಚಾಲಕ‌ ಮೂರ್ತಿ ಹೆಗಡೆ, ವೀಣಾ ಹೆಗಡೆ, ವಸಂತ ಭಟ್, ಶ್ರೀಕಾಂತ ಹೆಗಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸಮಾರೋಪ:

ಬಳಿಕ ನಡೆದ ಸಮಾರೋಪದಲ್ಲಿ ಯಲ್ಲಾಪುರದ ಸಮಾಜ ಸೇವಕ ಪ್ರಮೋದ ಹೆಗಡೆ ಮಾತನಾಡಿ, ಹವ್ಯಕ ಸಮಾಜವು ಸುಸಂಸ್ಕೃತದಿಂದ ಕೂಡಿದೆ. ನಮ್ಮ ಸಮಾಜಕ್ಕೆ ಸಾವಿರಾರು ವರ್ಷದ ಇತಿಹಾಸವಿದ್ದು, ಎಲ್ಲೇ ಹೋದರೂ ನಮ್ಮನ್ನು ಗುರುತಿಸುವ ಬ್ರ‍್ಯಾಂಡ್ ಹೊಂದಿದ್ದೇವೆ. ವಿಶ್ವದಲ್ಲಿಯೇ ನಮ್ಮ ಸಮಾಜವು ಪ್ರತಿಭಾವಂತರಿಂದ ಕೂಡಿದ್ದು, ಮೂರನೇ ಸ್ಥಾನದಲ್ಲಿದ್ದೇವೆ. ಇದಕ್ಕೆ ನಮ್ಮ ಋಷಿ-ಮುನಿಗಳು ಹಾಕಿಕೊಟ್ಟ ಪರಂಪರೆ ಕಾರಣ ಎಂದರು.

ಸಾಧಕರಿಗೆ ಸನ್ಮಾನ:

ಸಾಹಿತಿ ಅರುಣಕುಮಾರ ಹಬ್ಬು, ಪತ್ರಕರ್ತ ಮೋಹನ ಹೆಗಡೆ, ಗೋಸೇವಕ ದತ್ತಾತ್ರೇಯ ಭಟ್ಟ, ಸಮಾಜ ಸೇವಕ ಆರ್.ಕೆ. ಹೆಗಡೆ, ಕಲಾಸೇವಕ ಆರ್.ಜಿ. ಭಟ್ಟ ವರ್ಗಾಸರ, ಶಿಕ್ಷಣ ತಜ್ಞೆ ಮಂಗಳಾ ಭಟ್ಟ ಅವರನ್ನು ಸನ್ಮಾನಿಸಲಾಯಿತು. ಸ್ಪರ್ಧಾ ಸೌರಭದಲ್ಲಿ ಗೆದ್ದವರಿಗೆ ಬಹುಮಾನ ವಿತರಿಸಲಾಯಿತು. ಸಂಜೆ ಸಂಗೀತ ಸೌರಭ, ಯಕ್ಷಗಾನ ಪ್ರದರ್ಶನ ನಡೆಯಿತು. ಬೆಳಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ. ಗಿರಿಧರ ಕಜೆ ಮಾತನಾಡಿದರು. ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಉಪಾಧ್ಯಕ್ಷ ಶ್ರೀಕಾಂತ ಹೆಗಡೆ, ಗೌರವ ಕಾರ್ಯದರ್ಶಿ ಸುದರ್ಶನ ಹೇಮಾದ್ರಿ, ಹವ್ಯಕ ಮಹಿಳಾ ಮಂಡಳ ಅಧ್ಯಕ್ಷೆ ಅನಿತಾ ಭಟ್ಟ, ವಿ.ಎಂ. ಭಟ್ಟ, ಮೂರ್ತಿ ಹೆಗಡೆ, ಡಿ. ಶಂಕರ ಭಟ್ಟ ಸೇರಿದಂತೆ ಹಲವರಿದ್ದರು.