ಸಾರಾಂಶ
ಹಂಪಿಯ ಸ್ಮಾರಕಗಳ ವೈಭವದ ಸಿಂಚನವನ್ನು ತಮ್ಮ ಕಣ್ಣಿನ ಬಿಂಬದಲ್ಲೇ ಸೆರೆಹಿಡಿದರು.
ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿಯಲ್ಲಿ ಮಳೆ ಬಂದರೆ ಸಾಕು ಐತಿಹಾಸಿಕ ಸ್ಮಾರಕಗಳ ಪ್ರತಿಬಿಂಬ ನಳನಳಿಸುತ್ತದೆ.
ಈ ಸ್ಮಾರಕಗಳ ಸೊಬಗನ್ನು ಸವಿಯಲು ಪ್ರವಾಸಿಗರು ಮಳೆಯನ್ನು ಲೆಕ್ಕಿಸದೇ ಆಗಮಿಸುತ್ತಾರೆ. ಈ ದೃಶ್ಯ ನಮ್ಮ ಪ್ರಾಚೀನ ಕಲೆ, ಸಂಸ್ಕೃತಿ, ವಾಸ್ತುಶಿಲ್ಪ ಪ್ರಪಂಚದ ಮೇಲೆ ಈಗಿನ ಪೀಳಿಗೆ ಈಗಲೂ ಆಕರ್ಷಿತವಾಗುತ್ತಿದೆ ಎಂಬುದನ್ನು ಸಾದರಪಡಿಸುತ್ತದೆ.ಹಂಪಿಯಲ್ಲಿ ಶನಿವಾರ ಸಂಜೆ ಮಳೆ ಸುರಿಯುತ್ತಿದ್ದಂತೆಯೇ ಪ್ರವಾಸಿಗರು ಮಳೆಯನ್ನು ಲೆಕ್ಕಿಸದೇ ವಿಜಯ ವಿಠ್ಠಲ ದೇವಾಲಯ, ಕಲ್ಲಿನತೇರು, ದೇವಾಲಯದ ಗೋಪುರ ಸೇರಿದಂತೆ ವಿವಿಧ ಸ್ಮಾರಕಗಳ ಪ್ರತಿಬಿಂಬವನ್ನು ವೀಕ್ಷಿಸಿದರು. ಹಂಪಿಯ ಸ್ಮಾರಕಗಳ ವೈಭವದ ಸಿಂಚನವನ್ನು ತಮ್ಮ ಕಣ್ಣಿನ ಬಿಂಬದಲ್ಲೇ ಸೆರೆಹಿಡಿದರು. ಇನ್ನು ಕೆಲವರು ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿದರು.
ಹಂಪಿ ಸ್ಮಾರಕಗಳ ಪ್ರತಿಬಿಂಬದಲ್ಲಿ ತಮ್ಮ ಚಿತ್ರವನ್ನು ಕಂಡು ಹಲವು ಪ್ರವಾಸಿಗರು ಖುಷಿಯಾದರು. ಮುಸ್ಸಂಜೆಯಲ್ಲಿ ಇಂತಹದೊಂದು ಸನ್ನಿವೇಶ ಸೃಷ್ಟಿಯಾಗಿತ್ತು. ಇದು ಯಾವುದೇ ಸಿನಿಮಾ ಸೆಟ್ ಕೂಡ ಇಲ್ಲ. ಕೋಟ್ಯಂತರ ರುಪಾಯಿ ಸುರಿದು ಹಾಕಿದ ಸೆಟ್‌ಗಳ ಬೆಲೆಯನ್ನು ಕಳೆದ ಈ ಸ್ಮಾರಕಗಳ ಪ್ರತಿಬಿಂಬದ ಸೊಬಗನ್ನು ಹಂಪಿ ಪ್ರವಾಸಿ ಮಾರ್ಗದರ್ಶಿಗಳು ಪ್ರವಾಸಿಗರಿಗೆ ಮಳೆಯಲ್ಲೇ ವಿವರಿಸುತ್ತಿರುವುದು ಕಂಡು ಬಂದಿತು.