ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಐತಿಹಾಸಿಕ ತೊಣ್ಣೂರುಕೆರೆ ಹಿನ್ನೀರಿನ ಪ್ರದೇಶದಲ್ಲಿ ಕೆರೆಗೆ ಅಕ್ರಮವಾಗಿ ಅಳವಡಿಕೆ ಮಾಡಿಕೊಂಡಿದ್ದ ನೀರೆತ್ತುವ ಮೋಟಾರ್‌ಗಳನ್ನು ತಹಸೀಲ್ದಾರ್ ಬಸವರೆಡ್ಡಪ್ಪರೋಣದ ಅವರ ನೇತೃತ್ವದ ಟಾಸ್ಕ್ ಪೋರ್ಸ್ ಅಧಿಕಾರಿಗಳ ತಂಡ ಬುಧವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲು ಯತ್ನಿಸಿದಾಗ ರೈತರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.ಬಿಸಿಲ ಬೇಗೆಯಿಂದಾಗಿ ತೊಣ್ಣೂರು ಕೆರೆಯಲ್ಲಿ ನೀರಿನಮಟ್ಟ ದಿನೇ ದಿನೇ ಕಡಿಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಲಿದೆ ಎಂದು ಅಧಿಕಾರಿಗಳು ಕೊಟ್ಟ ಮಾಹಿತಿ ಮೇರೆಗೆ ತಹಸೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ಮಂಗಳವಾರ ರಾತ್ರಿ ಹಾಗೂ ಬುಧವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಕೆರೆಯ ಹಿನ್ನೀರಿನ ಪ್ರದೇಶದಲ್ಲಿ ಇರುವ ಗ್ರಾಮಗಳಿಂದ ಸುಮಾರು 330ಕ್ಕೂ ಅಧಿಕ ಮೋಟಾರ್‌ಗಳನ್ನು ಅಕ್ರಮವಾಗಿ ಅಳವಡಿಕೆ ಮಾಡಿ ಬೆಳೆಗಳಿಗೆ ನೀರೆತ್ತಿರುವುದು ಕಂಡು ಬಂದಿದೆ.
ಆ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಅಕ್ರಮ ಮೋಟಾರ್‌ಗಳನ್ನು ತೆರವುಗೊಳಿಸಲು ಮುಂದಾದಾಗ ಸ್ಥಳೀಯ ಗ್ರಾಮಗಳ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ನಾವು ಹಲವು ವರ್ಷಗಳಿಂದಲೂ ಕೆರೆಗೆ ಮೋಟಾರ್ ಹಾಕಿಕೊಂಡು ನೀರು ತೆಗೆದು ಬೆಳೆ ಬೆಳೆದುಕೊಂಡು ಜೀವನ ನಡೆಸುತ್ತಿದ್ದೇವೆ. ಇದೇ ನಮ್ಮ ಬದುಕಿಗೆ ಆಧಾರವಾಗಿದೆ. ಹಾಗಾಗಿ ಮೋಟಾರ್ ತೆರವುಗೊಳಿಸಬೇಡಿ. ತೆರವುಗೊಳಿಸಿದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ.ಈ ವೇಳೆ ತಹಸೀಲ್ದಾರ್ ಬಸವರೆಡ್ಡಪ್ಪರೋಣದ, ಕೆರೆಯಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ. ಹೀಗೆ ಮಳೆಯಾಗದೆ ಇದ್ದರೆ ನೀರು ಖಾಲಿಯಾಗಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಲಿದೆ ಎಂದು ರೈತರ ಮನವೊಲಿಸಲು ಸಾಕಷ್ಟು ಪ್ರಯತ್ನ ನಡೆಸಿದರು.
ಆದರೂ ರೈತರು ಒಪ್ಪಲಿಲ್ಲ. ಕೊನೆಗೆ ಮೋಟಾರಗಳಿಗೆ ವಿದ್ಯುತ್ ಪೂರೈಕೆ ಮಾಡುತ್ತಿರುವ ಟ್ರಾನ್ಸ್ ಫಾರ್ಮರ್‌ಗಳಿಂದ ವಿದ್ಯುತ್ ಕಡಿತಗೊಳಿಸುವಂತೆ ವಿದ್ಯುತ್ ಕಂಪನಿ ಅಧಿಕಾರಿಗಳಿಗೆ ಸೂಚಿಸಿದರು. ನಂತರ ಅಧಿಕಾರಿಗಳು 11ಕ್ಕೂ ಅಧಿಕ ಮೋಟಾರ್ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ವಾಪಸ್ಸಾದರು.
ಈ ವೇಳೆ ಮಾತನಾಡಿದ ತಹಸೀಲ್ದಾರ್ ಬಸವರೆಡ್ಡಪ್ಪರೋಣದ ಬೇಸಿಗೆಯಿಂದಾಗಿ ತೊಣ್ಣೂರು ಕೆರೆಯ ನೀರಿನ ಮಟ್ಟ ಕಡಿಮೆಯಾಗಿದೆ. ಕೆರೆಯಿಂದ 34 ಹಳ್ಳಿಗಳಿಗೆ ಕುಡಿಯುವ ನೀರುಪೂರೈಕೆ ಮಾಡುವ ಹಿನ್ನೆಲೆಯಲ್ಲಿ ನೀರಿನ ಮಟ್ಟ ಕಡಿಮೆಯಾಗದರೆ ತೊಂದರೆಯಾಗಲಿದೆ ಎಂಬ ಅಧಿಕಾರಿಗಳು ಕೊಟ್ಟ ವರದಿ ಹಿನ್ನೆಲೆಯಲ್ಲಿ ಕೆರೆಯ ಹಿನ್ನೀರಿನಲ್ಲಿ ಅಕ್ರಮವಾಗಿ ಅಳವಡಿಕೆ ಮಾಡಲಾಗಿರುವ ಮೋಟಾರ್‌ಗಳನ್ನು ಗುರುತಿಸಿ ತೆರವುಗೊಳಿಸುವಂತೆ ರೈತರ ಮನವೊಲಿಸುವ ಪ್ರಯತ್ನ ನಡೆಸಲಾಗಿದೆ. ಕುಡಿಯುವ ನೀರಿಗೆ ಮೊದಲ ಆದ್ಯತೆಯಾಗಿರುವುದರಿಂದ ಈಗಾಗಲೇ ಅಧಿಕಾರಿಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಸೂಚಿಸಲಾಗಿದೆ ಎಂದರು.