ಬಿಜೆಪಿ ಸದಸ್ಯತ್ವ ಅಭಿಯಾನ - 50 ಸಾವಿರಕ್ಕಿಂತ ಅಧಿಕ ಸದಸ್ಯರನ್ನು ನೋಂದಣಿ ಮಾಡಿಸಿ : ಬಾಲಚಂದ್ರ ಜಾರಕಿಹೊಳಿ

| Published : Oct 25 2024, 02:01 AM IST / Updated: Oct 25 2024, 11:25 AM IST

ಸಾರಾಂಶ

ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಅರಬಾವಿ ಕ್ಷೇತ್ರವು ಮತ್ತೊಂದು ಬಾರಿ ಸಾಧನೆ ಮಾಡಲು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ನೋಂದಣಿ ಮಾಡಿಸಲು ಕಾರ್ಯಕರ್ತರು ಶ್ರಮಿಸುವಂತೆ ಅರಬಾವಿ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದರು.

 ಗೋಕಾಕ : ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಅರಬಾವಿ ಕ್ಷೇತ್ರವು ಮತ್ತೊಂದು ಬಾರಿ ಸಾಧನೆ ಮಾಡಲು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ನೋಂದಣಿ ಮಾಡಿಸಲು ಕಾರ್ಯಕರ್ತರು ಶ್ರಮಿಸುವಂತೆ ಅರಬಾವಿ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದರು.

ನಗರದ ಎನ್.ಎಸ್.ಎಫ್ ಕಚೇರಿಯಲ್ಲಿ ಅರಬಾವಿ ಬಿಜೆಪಿ ಮಂಡಲದಿಂದ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನದ ಸಕ್ರಿಯ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸುಮಾರು 50 ಸಾವಿರಕ್ಕಿಂತ ಅಧಿಕ ಸದಸ್ಯರನ್ನು ನೋಂದಣಿ ಮಾಡಿಸುವ ಮೂಲಕ ಹೆಚ್ಚಿನ ಸಾಧನೆ ಮಾಡಲು ಕಾರಣೀಕರ್ತರಾಗುವಂತೆ ತಿಳಿಸಿದರು.

ರಾಜ್ಯದ ಸಮಗ್ರ ಅಭಿವೃದ್ಧಿ ನಮ್ಮ ಬಿಜೆಪಿಯಿಂದ ಮಾತ್ರ ಸಾಧ್ಯ. ಈಗಿರುವ ಕಾಂಗ್ರೆಸ್ ಸರ್ಕಾರದಿಂದ ಅಭಿವೃದ್ಧಿ ನಿರೀಕ್ಷಿಸಲು ಅಸಾಧ್ಯವಾಗಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ನಡೆಯುತ್ತಿಲ್ಲ. ಯಾವ ಅನುದಾನವನ್ನು ಸಹ ನೀಡುತ್ತಿಲ್ಲ. ಕಳೆದ ಒಂದೂವರೆ ವರ್ಷದಿಂದ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಜನರ ಸಂಕಷ್ಟಕ್ಕೆ ಬರುತ್ತಿಲ್ಲ ಎಂದು ದೂರಿದರು.

ನಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾಗಿರುವ ಅನುದಾನವನ್ನೂ ತಡೆ ಹಿಡಿಯುತ್ತಿದ್ದಾರೆ. ದೇವಸ್ಥಾನದ ಜೀರ್ಣೋದ್ಧಾರಕ್ಕೆ ಮಂಜೂರಾಗಿದ್ದ ₹2 ಕೋಟಿ ಅನುದಾನವನ್ನು ತಡೆ ಹಿಡಿದಿದ್ದರಿಂದ ವಿಪ ಸದಸ್ಯ ಲಖನ್ ಜಾರಕಿಹೊಳಿ ಅವರ ನಿಧಿಯಿಂದ ₹1 ಕೋಟಿ ಅನುದಾನವನ್ನು ಹೊಂದಾಣಿಕೆ ಮಾಡಿಕೊಂಡು ಒಟ್ಟು ₹2 ಕೋಟಿ ಅನುದಾನವನ್ನು ನಮ್ಮ ಕ್ಷೇತ್ರದ ದೇವಸ್ಥಾನವೊಂದಕ್ಕೆ ನೀಡಲಾಯಿತು ಎಂದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೇ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಅಲ್ಲಿಯತನಕ ನಮಗೆ ಅಭಿವೃದ್ಧಿ ಕನಸಾಗಿಯೇ ಉಳಿಯಲಿದೆ. ಮುಂಬರುವ ತಾಪಂ ಮತ್ತು ಜಿಪಂ ಚುನಾವಣೆಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಲು ಕಾರ್ಯಕರ್ತರು ಈಗಿನಿಂದಲೇ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು.

 ನಮ್ಮ ಬಿಜೆಪಿ ಸರ್ಕಾರದ ಸಾಧನೆಗಳನ್ನು ಸಹ ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ನಡೆಯಬೇಕಾಗಿದೆ ಎಂದು ತಿಳಿಸಿದರು.ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ, ಬಿಜೆಪಿ ರಾಜ್ಯ ಮಾಧ್ಯಮ ಸಂಚಾಲಕ ಎಫ್.ಎಸ್.ಸಿದ್ದನಗೌಡರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಮಾದಮ್ಮನವರ, ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಈರಣ್ಣ ಅಂಗಡಿ, ಕಾರ್ಯದರ್ಶಿಗಳಾದ ಪರಸಪ್ಪ ಬಬಲಿ, ಮಹಾಂತೇಶ ಕುಡಚಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.