ಸಾರಾಂಶ
ಕನ್ನಡಪ್ರಭ ವಾರ್ತೆ ಭಾಲ್ಕಿ
ಪ್ರಸಕ್ತ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪರೀಕ್ಷೆ ಮೂರು ಹಂತದಲ್ಲಿ ನಡೆಸಲಾಗುತ್ತಿದ್ದು, ಮೊದಲ ಹಂತದ ಪರೀಕ್ಷೆಗೆ ಎಲ್ಲಾ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಜಹರ ಹುಸೇನ ಹೇಳಿದರು.ಪಟ್ಟಣದ ಸತ್ಯನಿಕೇತನ ಪ್ರೌಢಶಾಲೆಯಲ್ಲಿ, ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ ನಿಮಿತ್ತ ಆಯೋಜಿಸಿದ್ದ ವಿಷಯ ಶಿಕ್ಷಕರ ಕಾರ್ಯಾಗಾರದ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 10ನೇ ತರಗತಿಯಲ್ಲಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಮೊದಲ ಹಂತದ ಪರೀಕ್ಷೆಗೆ ನೋಂದಣಿಯಾಗುವುದು ಕಡ್ಡಾಯವಾಗಿದೆ.
ಮೊದಲನೇ ಪರೀಕ್ಷೆಗೆ ನೊಂದಣಿಯಾಗದ ವಿದ್ಯಾರ್ಥಿಗಳು 2 ಮತ್ತು 3ನೇ ಹಂತದ ಪರೀಕ್ಷೆಗೆ ಹಾಜರಾಗಲು ಅವಕಾಶವಿಲ್ಲ. ಮೂರು ಪ್ರಯತ್ನದ ಪರೀಕ್ಷೆ ಮುಗಿದ ನಂತರವೇ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಲಾಗುವುದು. ಕಾರಣ ಯಾವ ವಿದ್ಯಾರ್ಥಿಯೂ ಅನುತ್ತೀರ್ಣರಾಗುವ ಸಂಭವವಿಲ್ಲ. ಹೀಗಾಗಿ ಈ ಸಾಲಿನಲ್ಲಿ ಶಾಲಾ ಹಂತದ ಪ್ರತಿಶತ ಫಲಿತಾಂಶ ನೋಡುವುದಿಲ್ಲ. ಎಲ್ಲಾ ಶಾಲೆಗಳೂ ಪ್ರತಿಶತ ಫಲಿತಾಂಶ ಪ್ರಕಟಿಸುತ್ತವೆ. ವಿಷಯವಾರು ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಗುಣಮಟ್ಟ ಪರೀಕ್ಷಿಸುವ ಪರೀಕ್ಷೆ ಇದಾಗಿದೆ.ಅಕ್ಷರ ದಾಸೋಹ ಯೋಜನೆ ಸಹಾಯಕ ನಿದೇರ್ಶಕ ಮಲ್ಲಿನಾಥ ಸಜ್ಜನ್ ಮಾತನಾಡಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಹಯೋಗದೊಂದಿಗೆ ಇಲಾಖೆ ವತಿಯಿಂದ ಸುಮಾರು ಮೂರು ದಿನಗಳ ಕಾಲ ಎಲ್ಲಾ ವಿಷಯಗಳ ಕಾರ್ಯಾಗಾರ ನಡೆಸಲಾಗಿದೆ ಎಂದರು.
ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ದತ್ತು ಕಾಟಕರ ಮಾತನಾಡಿ, ಮುಂಬರುವ ದಿನಗಳಲ್ಲಿ ಇನ್ನೂ ಕೆಲವು ಕಾರ್ಯಾಗಾರಗಳನ್ನು ಏರ್ಪಡಿಸಿ ಶಿಕ್ಷಕರ ಎಲ್ಲಾ ಅನುಮಾನಗಳಿಗೂ ಸೂಕ್ತ ಪರಿಹಾರ ನೀಡಲಾಗುವುದು.ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಯರಾಜ ದಾಬಶೆಟ್ಟಿ ಮಾತನಾಡಿ, ಡಿ.13 ರಿಂದ 15 ರ ವರೆಗೆ ಮೂರು ದಿವಸಗಳ ಕಾಲ ಪಟ್ಟಣದ ಶಿವಾಜಿ ಪ್ರೌಢಶಾಲೆ, ಸರ್ಕಾರಿ ಪ್ರೌಢಶಾಲೆ, ಸಂಗಮೇಶ್ವರ ಪ್ರೌಢಶಾಲೆ, ಸತ್ಯಸಾಯಿ ಪ್ರೌಢಶಾಲೆ, ದಿವ್ಯಜ್ಯೋತಿ ಪ್ರೌಢಶಾಲೆ ಮತ್ತು ಸತ್ಯನಿಕೇತನ ಪ್ರೌಢಶಾಲೆಗಳಲ್ಲಿ ಆರು ವಿಷಯಗಳಿಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಹಯೋಗದೊಂದಿಗೆ ನಡೆಸಿರುವ ವಿಷಯಾಧಾರಿತ ಕಾರ್ಯಾಗಾರ ಯಶಸ್ವಿಯಾಗಿದೆ.
ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೀತೆಂದ್ರ ಬಿರಾದಾರ, ಸಂತೋಷ ಬಿರಾದಾರ, ಸಂಪನ್ಮೂಲ ವ್ಯಕ್ತಿಗಳಾದ ಉಮೇಶ ದುಬಲಗುಂಡೆ, ಶಿವಕುಮಾರ ಬಿರಾದಾರ, ಸಂಜಪ್ಪಾ ಮಾನೂರೆ, ನಾಮದೇವ ರಾಠೋಡ, ಗೀತಾ ನಾಯಕರ, ಮುಖ್ಯಶಿಕ್ಷಕಿ ಲಲಿತಾ ಜಾಧವ ಉಪಸ್ಥಿತರಿದ್ದರು.ಮುಖ್ಯಶಿಕ್ಷಕ ಸಂತೋಷ ಪಾಟೀಲ ಸ್ವಾಗತಿಸಿದರೆ ಶಿಕ್ಷಕಿ ಎಸ್.ವಿ.ಪಾಟೀಲ ನಿರೂಪಿಸಿದರು. ನಾಮದೇವ.ಆರ್ ವಂದಿಸಿದರು.
----16ಬಿಡಿಆರ್50