ಸಾರಾಂಶ
ರೈತರು ತಮ್ಮ ಜಮೀನಿನ ಎಲ್ಲ ಸರ್ವೆ ನಂಬರುಗಳ ಮಾಹಿತಿಯನ್ನು ಫ್ರುಟ್ಸ್ ತಂತ್ರಾಂಶದಲ್ಲಿ ಪಹಣಿ ಜೋಡಣೆ ಮಾಡಿಸಬೇಕು
ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಕೃಷಿ, ತೋಟಗಾರಿಕೆ, ಕಂದಾಯ, ರೇಷ್ಮೆ, ಪಶು ಸಂಗೋಪನೆ ಸಹಕಾರ ಇಲಾಖೆಗಳಲ್ಲಿ ಸೌಲಭ್ಯ ಪಡೆಯಲು ಹಾಗೂ ಬೆಳೆ ಪರಿಹಾರ, ಬೆಳೆವಿಮೆ ಬೆಂಬಲ ಬೆಲೆ ಯೋಜನೆ ಪ್ರಯೋಜನ ಪಡೆಯಲು ರೈತರು ಫ್ರುಟ್ಸ್ ತಂತ್ರಾಂಶದಲ್ಲಿ ತಮ್ಮ ಜಮೀನಿನ ಎಲ್ಲ ಸರ್ವೆ ನಂಬರುಗಳ ವಿವರಗಳನ್ನು ಸೇರ್ಪಡೆಗೊಳಿಸುವುದು ಕಡ್ಡಾಯವಾಗಿರುತ್ತದೆ ಎಂದು ಉಪವಿಭಾಗಾಧಿಕಾರಿ ಟಿ.ವಿ. ಪ್ರಕಾಶ ತಿಳಿಸಿದರು.ಸೋಮವಾರ ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಕಂದಾಯ ಇಲಾಖೆಯಗಳ ಆಶ್ರಯದಲ್ಲಿ ಫ್ರುಟ್ಸ್ ತಂತ್ರಾಂಶದಲ್ಲಿ ಪಹಣಿ ಜೋಡಣೆ ಜಾಗೃತಿ ಅಭಿಯಾನಕ್ಕೆಚಾಲನೆ ನೀಡಿ ಮಾತನಾಡಿದರು.
ಫ್ರುಟ್ಸ್ ತಂತ್ರಾಂಶದಲ್ಲಿ ಪಹಣಿ ಜೋಡಣೆಯಾಗದಿದ್ದಲ್ಲಿ ಸರ್ಕಾರದ ಸೌಲಭ್ಯದಿಂದ ವಂಚಿತರಾಗುತ್ತಾರೆ ಎಂದು ತಿಳಿಸಿದರು.ಪ್ರಸಕ್ತ ವರ್ಷದಲ್ಲಿ ಬೆಳೆ ಸಮೀಕ್ಷೆ ದತ್ತಾಂಶ ಹಾಗೂ ಫ್ರುಟ್ಸ್ ತಂತ್ರಾಂಶದಲ್ಲಿರುವ ಅಂಶಗಳ ಆಧಾರದಲ್ಲಿ ಬೆಳೆ ಪರಿಹಾರ ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಪಾವತಿಯಾಗುವುದರಿಂದ ರೈತರು ತಮ್ಮ ಜಮೀನಿನ ಎಲ್ಲ ಸರ್ವೆ ನಂಬರುಗಳ ಮಾಹಿತಿಯನ್ನು ಫ್ರುಟ್ಸ್ ತಂತ್ರಾಂಶದಲ್ಲಿ ಪಹಣಿ ಜೋಡಣೆ ಮಾಡಿಸಬೇಕು ಎಂದರು.
ತಹಸೀಲ್ದಾರ್ ಬಿ.ವಿ. ಗಿರೀಶಬಾಬು ಮಾತನಾಡಿ, ಈ ಹಿಂದೆ ಅತಿವೃಷ್ಟಿ ಅಥವಾ ಅನಾವೃಷ್ಟಿ ಸಂದರ್ಭದಲ್ಲಿ ಬೆಳೆನಷ್ಟದ ವಿವರವನ್ನು ಪರಿಹಾರ ತಂತ್ರಾಂಶದಲ್ಲಿ ಮ್ಯಾನುವಲ್‌ನಲ್ಲಿ ನಮೂದಿಸಿ ಅದಕ್ಕನುಗುಣವಾಗಿ ಪರಿಹಾರ ಮೊತ್ತವನ್ನು ನೀಡುವ ವ್ಯವಸ್ಥೆ ಇತ್ತು. ಈ ವ್ಯವಸ್ಥೆಯಲ್ಲಿ ಹಣ ದುರುಪಯೋಗವಾಗುವುದು ಕಂಡುಬಂದಿರುವುದರಿಂದ ಸರ್ಕಾರವು 2023- 24ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ನಷ್ಟ ಪರಿಹಾರವನ್ನು ಬೆಳೆ ಸಮೀಕ್ಷೆ ಮತ್ತು ಫ್ರುಟ್ಸ್ ನೋಂದಣಿಯಾಗಿರುವ ಬೆಳೆ ಮತ್ತು ಜಮೀನಿನ ವಿಸ್ತೀರ್ಣಕ್ಕೆ ಅನುಗುಣವಾಗಿ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಿರುವುದರಿಂದ ಈಗಾಗಲೇ ಫ್ರುಟ್ಸ್‌ನಲ್ಲಿ ನೋಂದಣಿಯಾಗಿರುವ ರೈತರು ತಮ್ಮ ಜಮೀನಿನಲ್ಲಿ ಯಾವುದೇ ಸರ್ವೆ ನಂಬರ್‌ಗಳು ಬಿಟ್ಟು ಹೋಗದಂತೆ ನೋಂದಣಿ ಮಾಡಿಕೊಳ್ಳುವಂತೆ ತಿಳಿಸಿದರು.ಸಹಾಯಕ ಕೃಷಿ ನಿರ್ದೆಶಕ ವಿ.ಸಿ. ಉಮೇಶ ಮಾಹಿತಿ ನೀಡಿದರು. ತಾಂತ್ರಿಕ ಕೃಷಿ ಅಧಿಕಾರಿ ಮಹಮದ್ ರಫಿಉಲ್ಲಾ ಸಿಬ್ಬಂದಿ ಇದ್ದರು.