ಸಾರಾಂಶ
ವಿವಿಧ ವ್ಯಾಪಾರ ವಹಿವಾಟಿನ ಸ್ಥಳಗಳಲ್ಲಿನ ಪರಿಶೀಲನೆ ವೇಳೆ ಮಾಹಿತಿ
ಕನ್ನಡಪ್ರಭ ವಾರ್ತೆ, ಕಡೂರುಸರಕಾರದ ನಿಯಮಾವಳಿಗಳ ಪ್ರಕಾರ ತಾಲೂಕಿನ ಎಲ್ಲ ವಾಣಿಜ್ಯ ವ್ಯವಹಾರದ ಅಂಗಡಿಗಳು, ಮತ್ತಿತರ ಉದ್ಯಮಗಳನ್ನು ನಡೆಸುವವರು ಕಾರ್ಮಿಕ ಇಲಾಖೆಯಲ್ಲಿ ಕಡ್ಡಾಯ ನೋಂದಣಿ ಮಾಡಿಸಲೇ ಬೇಕೆಂದು ಕಾರ್ಮಿಕ ಇಲಾಖೆ ವಿಸ್ತರಣಾಧಿಕಾರಿ ವೈ.ಎಂ.ಶಶಿಕಲಾ ತಿಳಿಸಿದರು.
ವ್ಯಾಪಾರ, ಉದ್ಯಮಗಳ ನೋಂದಣಿ ಕುರಿತು ಇಲಾಖೆ ಸಿಬ್ಬಂದಿಗಳೊಂದಿಗೆ ಪಟ್ಟಣದ ವಿವಿಧ ವ್ಯಾಪಾರ ವಹಿವಾಟಿನ ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಿ ಮಾಹಿತಿ ನೀಡಿ ಮಾತನಾಡಿದರು. ಗ್ರಾಮೀಣ ಪ್ರದೇಶ ಸೇರಿದಂತೆ ತಾಲೂಕಿನಲ್ಲಿ ಸುಮಾರು 8 ಸಾವಿರಕ್ಕೂ ಹೆಚ್ಚು ದಿನಸಿ ಅಂಗಡಿಗಳು, ವಿವಿಧ ಕಾರ್ಖಾನೆಗಳು, ಹೋಟೆಲ್, ಬಾರ್, ಆಭರಣ ಅಂಗಡಿ ಮತ್ತಿತರ ಘಟಕಗಳು ಕಾರ್ಮಿಕ ಇಲಾಖೆಯಲ್ಲಿ ನೋಂದಣಿಗೆ ಮುಂದಾಗುತ್ತಿಲ್ಲ. ಸ್ವತಃ ನಾವುಗಳೇ ತಿಳಿ ಹೇಳಿದರೂ ನೋಂದಣಿಗೆ ಆಸಕ್ತಿ ತೋರಿಸುತ್ತಿಲ್ಲ. ಇದುವರೆಗೆ ಶೇ 10 ರಷ್ಟು ಮಾತ್ರ ನೋಂದಣಿ ಆಗಿದೆ ಎಂದರು.ಈ ನೋಂದಣಿ ಪ್ರತಿ 5 ವರ್ಷಕ್ಕೊಮ್ಮೆ ನವೀಕರಿಸಬೇಕಿದ್ದರೂ ಅದನ್ನು ಮಾಡಿಸುತ್ತಿಲ್ಲ. ಪಟ್ಟಣ ಪ್ರದೇಶದಲ್ಲಿ ಪುರಸಭೆ ಮತ್ತು ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯಿತಿ ಪರವಾನಗಿ ತೆಗೆದುಕೊಂಡಿದ್ದು. ಕಾರ್ಮಿಕ ಇಲಾಖೆ ಪರವಾನಗಿ ಏಕೆ ಎನ್ನುತ್ತಾರೆ. ಆದರೆ ಸರ್ಕಾರದ ಮಾನದಂಡದಂತೆ ಯಾವುದೇ ವ್ಯಾಪಾರವಾದರೂ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕಾರ್ಮಿಕ ಇಲಾಖೆ ನೋಂದಣಿ ಕಡ್ಡಾಯ ಎಂದರು.
ಕೆಲವರು ಕಾರ್ಮಿಕರಲ್ಲದವರು ಎಲೆಕ್ಟ್ರೀಷಿಯನ್, ಪೇಂಟರ್, ಬಡಗಿ ಹೀಗೆ ಯಾವುದಾದರೂ ಕೆಲಸ ನಮೂದಿಸಿ ಇಲಾಖೆ ಕಾರ್ಡು ಪಡೆದಿದ್ದಾರೆ. ಅವೆಲ್ಲವನ್ನೂ ಪರಿಶೀಲಿಸಿ ನೈಜ ಕಾರ್ಮಿಕರನ್ನು ಗುರುತಿಸುವ ಕಾರ್ಯವಾಗಲು ಆದ್ಯತೆ ನೀಡ ಬೇಕಿದೆ ಎಂದರು. ಇಲಾಖೆ ಸೌಲಭ್ಯಗಳು ನೈಜ ಕಾರ್ಮಿಕರಿಗೆ ತಲುಪಲು ಕಾರ್ಮಿಕರು ಸತ್ಯವಾದ ಮಾಹಿತಿ ನೀಡಿ ನೋಂದಣಿ ಮಾಡಿಸ ಬೇಕು. ಪರಿಶೀಲನೆ ಬಳಿಕ ಮಾಹಿತಿ ಸುಳ್ಳೆಂದು ಕಂಡು ಬಂದರೆ ಅಂತಹ ಅರ್ಜಿಗಳನ್ನು ವಜಾಗೊಳಿಸಲಾಗುವುದು. ಸಕ್ರಿಯವಾದ ಕಾರ್ಡುಗಳಲ್ಲೂ ಸುಳ್ಳು ಮಾಹಿತಿ ಇರುವುದು ಧೃಢಪಟ್ಟರೆ ಅವುಗಳನ್ನೂ ವಜಾ ಮಾಡಲಾಗುವುದು ಎಂದು ಶಶಿಕಲಾ ತಿಳಿಸಿದರು.ಇನ್ನು ಪಟ್ಟಣದಲ್ಲಿ 15 ಕಾರ್ಮಿಕ ಸಂಘಗಳ ಮೂಲಕ ನೋಂದಣಿ ನೇರವಾಗಿ ನಡೆಯುತ್ತಿದೆ. ನೋಂದಣಿಯಾದವರಲ್ಲಿ ಅಸಲಿ-ನಕಲಿ ನಾವು ಸ್ಥಳಕ್ಕೆ ಹೋಗಿ ಭೇಟಿ ನೀಡಿ ಪರಿಶೀಲಿಸಿದಾಗ ಮಾತ್ರ ಗೊತ್ತಾಗುತ್ತದೆ ಇದು ಇಲಾಖೆಗೆ ಸವಾಲಾಗಿ ಪರಿಣಮಿಸಿದ್ದು, ನೈಜ ಕಾರ್ಮಿಕರನ್ನು ಗುರುತಿಸುವ ಕೆಲಸ ನಡೆಯುತ್ತಿದೆ ಎಂದರು.ಬಾಕ್ಸ್ ಸುದ್ದಿಗೆ-
ಇಲಾಖೆಯಲ್ಲಿ ನೋಂದಣಿ ಮಾಡಿಸಿರುವ ತಾಲೂಕಿನ ಕಾರ್ಮಿಕರ ಸಂಖ್ಯೆ 39 ಸಾವಿರ ದಾಟಿದ್ದು ಇದರಲ್ಲಿ 512 ಕಾರ್ಡು ಗಳನ್ನು ಅಮಾನತ್ತಿನಲ್ಲಿಡಲಾಗಿದೆ. 8,600 ಕಾರ್ಡುಗಳು ಮೃತರಾದ ಮತ್ತಿತರ ಕಾರಣಗಳಿಂದಾಗಿ ನಿಷ್ಕ್ರಿಯಗೊಂಡಿವೆ. 29,300 ಸಕ್ರಿಯ ಕಾರ್ಡುಗಳಿವೆ. ಕಾರ್ಮಿಕರಿಗಾಗಿ ವಿವಿಧ ಸೌಲಭ್ಯಗಳಿವೆ. ಕಾರ್ಮಿಕರ ಇಲಾಖೆಯಲ್ಲಿ ನೋಂದಣಿಯಾಗಿ ಒಂದು ವರ್ಷವಾಗಿದ್ದು ಮದುವೆಯಾದವರಿಗೆ 60 ಸಾವಿರ ರು. ಕಾರ್ಮಿಕ ಮೃತಪಟ್ಟರೆ 75 ಸಾವಿರ ರು,ಅಪಘಾತದಲ್ಲಿ ಮೃತಪಟ್ಟರೆ 5 ಲಕ್ಷ ರು ಹಣವನ್ನು ಕುಟುಂಬಕ್ಕೆ ಇಲಾಖೆ ನೀಡುತ್ತದೆ.ವೈ.ಎಂ.ಶಶಿಕಲಾ, ವಿಸ್ತರಣಾಧಿಕಾರಿ, 14ಕೆಕೆಡಿಯು1.ಕಡೂರು ಕಾರ್ಮಿಕ ಇಲಾಖೆಯಲ್ಲಿನ ನೋಂದಣಿಗೆ ಕಾರ್ಮಿಕ ಇಲಾಖೆ ಅಧಿಕಾರಿ ವೈ.ಎಂ. ಶಶಿಕಲಾ ಅಂಗಡಿಗಳಿಗೆ ತೆರಳಿ ಪರಿಶೀಲನೆ ನಡೆಸಿದರು.