ಕೊಬ್ಬರಿ ಖರೀದಿಗೆ ನೋಂದಣಿ ಪ್ರಕ್ರಿಯೆ ಆರಂಭ

| Published : Mar 05 2024, 01:43 AM IST

ಸಾರಾಂಶ

ಬೆಂಬಲ ಬೆಲೆಯ ಕೊಬ್ಬರಿ ನೋಂದಣಿ ಪ್ರಿಕ್ರಿಯೆ ಹೊಸದುರ್ಗ ಮಾರುಕಟ್ಟೆ ಆವರಣದಲ್ಲಿ ಸೋಮವಾರ ನಡೆಯಿತು. ನೋಂದಣಿ ಕೇಂದ್ರದ ಬಳಿ ನೆರಳಿಲ್ಲದ ಕಾರಣ ವಯಸ್ಸಾದ ಮಹಿಳೆಯರು ಸೇರಿದಂತೆ ವೃದ್ಧರು ಬಿಸಿಲಿನ ತಾಪಕ್ಕೆ ಬಸವಳಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಕೊಬ್ಬರಿ ಖರೀದಿ ಸಂಬಂಧ ರೈತರ ನೋಂದಣಿ ಕಾರ್ಯವನ್ನು ಸರ್ಕಾರ ಪ್ರಾರಂಭಿಸಿದ್ದು, ಮಾರುಕಟ್ಟೆ ಆವರಣದಲ್ಲಿ ನೋಂದಣಿ ಮಾಡಿಸಲು ಬಂದ ರೈತರಿಗೆ ನೀರು ನೆರಳಿನ ವ್ಯವಸ್ಥೆಯಿಲ್ಲದೆ ಬಸವಳಿಯುವಂತಾಗಿದೆ. ಕಳೆದ ಬಾರಿ ಹೊಸದುರ್ಗ ಮಾರುಕಟ್ಟೆ ಆವರಣದಲ್ಲಿ ಮಾತ್ರ ನೋಂದಣಿ ಕಾರ್ಯ ಮಾಡಲಾಗಿತ್ತು. ಆದರೆ ಈ ಬಾರಿ ಹೊಸದುರ್ಗ ಹಾಗೂ ಶ್ರೀರಾಂಪುರ ಮಾರುಕಟ್ಟೆ ಆವರಣದಲ್ಲಿಯೂ ನೋಂದಣಿ ಕಾರ್ಯ ಮಾಡಲಾಗುತ್ತಿದೆ. ಆದರೆ, ನೋಂದಣಿ ಕೇಂದ್ರದ ಬಳಿ ನೆರಳಿಲ್ಲದ ಕಾರಣ ವಯಸ್ಸಾದ ಮಹಿಳೆಯರು ಸೇರಿದಂತೆ ವೃದ್ಧರು ಬಿಸಿಲಿನ ತಾಪಕ್ಕೆ ಬಸವಳಿದರು.ಕಳೆದ ಬಾರಿ ನೋಂದಣಿ ಕಾರ್ಯದಲ್ಲಿ ಅಕ್ರಮ ಎಸಗಲಾಗಿದೆಯೆಂದು ಸರ್ಕಾರ ಅದನ್ನು ರದ್ದು ಪಡಿಸಿ, ಹೊಸದಾಗಿ ಮತ್ತೆ ನೋಂದಣಿ ಮಾಡಿಕೊಳ್ಳುತ್ತಿದೆ. ಆದರೆ ಅದೇ ತಪ್ಪುಗಳು ಈ ಬಾರಿಯೂ ನಡೆಯುವುದಿಲ್ಲ ಎನ್ನುವುದು ಏನು ಗ್ಯಾರೆಂಟಿ ಎಂಬ ಪ್ರಶ್ನೆ ರೈತರಲ್ಲಿ ಮೂಡಲಾರಂಭಿಸಿದೆ.

ಕಳೆದ ಬಾರಿ ಬೆಂಬಲ ಬೆಲೆ ಕೊಬ್ಬರಿ ಬಿಡಲು 2 ರಾತ್ರಿ, 2 ಹಗಲು ಸರತಿ ಸಾಲಿನಲ್ಲಿ ನಿಂತಿ ನೋಂದಣಿ ಮಾಡಿಸಿದ್ದೆ, ಈಗ ಅದು ಸರಿಯಿಲ್ಲ. ಮತ್ತೆ ನೋಂದಣಿ ಮಾಡಿಸುವಂತೆ ಸರ್ಕಾರದವರು ಹೇಳಿದ್ದಾರೆ. ಈಗ ನೋಂದಣಿ ಮಾಡಿಸಲು ರಾತ್ರಿಯಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದೇನೆ. ರೈತರು ಎಂದರೆ ಕೆಲಸವಿಲ್ಲದವರಾ? ಎಂದು ಅಸಮಾಧಾನ ಹೊರ ಹಾಕಿದರು.ಈ ಮಧ್ಯೆ ಪದೇಪದೆ ಸರ್ವರ್‌ ಸಮಸ್ಯೆ ಆಗುತ್ತಿದ್ದು, ನೋಂದಣಿ ಕಾರ್ಯವೂ ನಿಧಾನಗತಿಯಲ್ಲಿ ನಡೆಯುತ್ತಿದೆ. ಈ ನೋಂದಣಿ ಕಾರ್ಯ ಎಚ್ಟು ದಿನ ನಡೆಯುತ್ತದೆ ಎನ್ನುವುದೇ ಖಾತ್ರಿಯಿಲ್ಲ. ಅಲ್ಲದೆ ಈ ಬಗ್ಗೆ ಅಧಿಕಾರಿಗಳ ಬಳಿಯೂ ಉತ್ತರವಿಲ್ಲ. ರಾಜ್ಯದಲ್ಲಿ ಒಟ್ಟು 6.25 ಮೆಟ್ರಿಕ್‌ ಟನ್‌ ಕೊಬ್ಬರಿ ಖರೀದಿ ಮಾಡಲು ಅನುಮತಿ ನೀಡಲಾಗಿದೆ. ಅಷ್ಠು ಕೊಬ್ಬರಿ ಆಗುವವರೆಗೂ ನೋಂದಣಿ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದ ನೋಂದಣಿ ಕೇಂದ್ರದ ಅಧಿಕಾರಿ ಶಂಕರ್‌, ಇನ್ನು ರೈತರಿಗೆ ಮೂಲಭೂತ ಸೌಕರ್ಯಗಳ ಬಗ್ಗೆ ಪ್ರಶ್ನಿಸಿದರೆ ನಮ್ಮದು ಏನಿದ್ದರೂ ನೋಂದಣಿ ಕೆಲಸ ನೋಂದಣಿಗೆ ಬರುವ ರೈತರಿಗೆ ಬೇಕಾದ ನೀರು ನೆರಳಿನ ವ್ಯವಸ್ಥೆಯನ್ನು ಮಾರುಕಟ್ಟೆ ಸಮಿತಿಯವರು ಮಾಡಿಕೊಡಬೇಕು ಎಂದು ತಿಳಿಸಿದರು.

ಹೊಸದುರ್ಗ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಗೌತಮ್‌ ಮಾತನಾಡಿ, ನೋಂದಣಿಗೆ ಬರುವ ರೈತರಿಗೆ ನೀರಿ ನೆರಳಿನ ವ್ಯವಸ್ಥೆ ಕಲ್ಪಿಸುವುದು ಮಾರುಕಟ್ಟೆ ಸಮಿತಿ ಕೆಲಸ. ಕಳೆದ ಒಂದು ವಾರದಿಂದಲೂ ನೋಂದಣಿ ಪ್ರಕ್ರಿಯೆ ಪ್ರಾರಂಭಿ ಸುವುದಾಗಿ ಹೇಳಿಕೊಂಡು ಬರಲಾಗುತಿತ್ತು. ಆದರೆ ಪ್ರಾರಂಭಿಸಿರಲಿಲ್ಲ, ಇಂದು ಪ್ರಾರಂಭಿಸಿದ್ದಾರೆ. ಇಂದು ಶಾಸಕರ ಕಾರ್ಯಕ್ರಮವಿದ್ದರಿಂದ ನೆರಳಿಗೆ ಶಾಮಿ ಯಾನ ಹಾಕಿಸುವುದು ತಡವಾಗಿದೆ. ಕೂಡಲೇ ಶಾಮಿಯಾನ ಹಾಕಿಸಿ ನೆರಳಿನ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.ಮಾಹಿತಿಯಿಲ್ಲ: ಈಗಾಗಲೇ ಕೊಬ್ಬರಿ ಖರೀದಿ ನೋದಣಿ ಪ್ರಕ್ರಿಯೆ ಮುಗಿದಿದೆ. 2ನೇ ಬಾರಿ ಕೊಬ್ಬರಿ ಖರೀದಿ ಪ್ರಕ್ರಿಯೆ ಆರಂಭಗೊಂಡಿರುವ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ ಎಂದು ತಹಶೀಲ್ದಾರ್‌ ತಿರುಪತಿ ಪಾಟೀಲ್‌ ಹೇಳಿದರು.