ಅಕ್ರಮವಾಗಿ ನಿರ್ಮಿಸಿರುವ ನಿವೇಶನ, ಮನೆ ಸಕ್ರಮಗೊಳಿಸಿ

| Published : Jul 06 2024, 12:57 AM IST

ಸಾರಾಂಶ

ಪಟ್ಟಣ ಪ್ರದೇಶಗಳಲ್ಲಿ ಅಕ್ರಮವಾಗಿ ನಿರ್ಮಾಣವಾಗಿರುವ ನಿವೇಶನ, ಮನೆ ಹಾಗೂ ವಾಣಿಜ್ಯ ಕಟ್ಟಡಗಳನ್ನು ಸಕ್ರಮಗೊಳಿಸಿ ಇ-ಸ್ವತ್ತು ನೀಡುವಂತೆ ಕರ್ನಾಟಕ ಸೇನಾಪಡೆ ವತಿಯಿಂದ ನಗರಾಭಿವೃದ್ಧಿ ಇಲಾಖೆ ಸಚಿವ ಬಿ.ಎಸ್.ಸುರೇಶ್‌ ಅವರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರಪಟ್ಟಣ ಪ್ರದೇಶಗಳಲ್ಲಿ ಅಕ್ರಮವಾಗಿ ನಿರ್ಮಾಣವಾಗಿರುವ ನಿವೇಶನ, ಮನೆ ಹಾಗೂ ವಾಣಿಜ್ಯ ಕಟ್ಟಡಗಳನ್ನು ಸಕ್ರಮಗೊಳಿಸಿ ಈ-ಸ್ವತ್ತು ನೀಡುವಂತೆ ಒತ್ತಾಯಿಸಿ ಕರ್ನಾಟಕ ಸೇನಾಪಡೆ ವತಿಯಿಂದ ನಗರಾಭಿವೃದ್ಧಿ ಇಲಾಖೆ ಸಚಿವ ಬಿ.ಎಸ್.ಸುರೇಶ್‌ ಅವರಿಗೆ ಮನವಿ ಸಲ್ಲಿಸಲಾಯಿತು.ಜಿಲ್ಲಾಡಳಿತ ಭವನದ ಕೆಡಿಪಿ ಸಭಾಂಗಣದಲ್ಲಿ ನಡೆಯುತ್ತಿದ್ದ ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸಿದ ಸಚಿವ ಬಿ.ಎಸ್.ಸುರೇಶ್‌ ಅವರಿಗೆ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮನವಿ ಸಲ್ಲಿಸಿ, ಕರ್ನಾಟಕ ರಾಜ್ಯದ ಪಟ್ಟಣ ಪ್ರದೇಶಗಳಲ್ಲಿ ಬಹಳಷ್ಟು ನಿವೇಶನಗಳು, ಮನೆ ಹಾಗೂ ವಾಣಿಜ್ಯ ಕಟ್ಟಡಗಳು ಅನಧಿಕೃತವಾಗಿ ಬಡಾವಣೆಗಳಲ್ಲಿ ನಿರ್ಮಾಣವಾಗಿದೆ. ಇದು ಸ್ಥಳೀಯ ಸಂಸ್ಥೆಗಳಲ್ಲಿ ಸಕ್ರಮವಾಗದೇ, ರಾಜ್ಯದ ನಗರಪಾಲಿಕೆ, ನಗರಸಭೆ, ಪುರಸಭೆ, ಪಪಂ ಗಳಲ್ಲಿ ಈ-ಸ್ವತ್ತು ನೀಡುತ್ತಿಲ್ಲ (ನಮೂನೆ3) ಇದರಿಂದ ಅಲ್ಲಿನ ನಿವಾಸಿಗಳಿಗೆ ತೊಂದರೆಯಾಗಿದೆ ಎಂದು ತಿಳಿಸಿದರು.

ಸಾರ್ವಜನಿಕರು ತಮ್ಮ ಆರೋಗ್ಯ, ಶಿಕ್ಷಣ ಮದುವೆ ಹಾಗೂ ಇನ್ನಿತರ ತುರ್ತು ಆರ್ಥಿಕ ಸಮಸ್ಯೆ ಬಗೆಹರಿಸಲು ತಮ್ಮ ಸ್ವಾಧೀನದಲ್ಲಿರುವ ಸ್ವತ್ತನ್ನು ಮಾರಾಟ ಮಾಡಲು ಆಗದೇ ತೊಂದರೆಯಾಗಿದೆ. ಆದ್ದರಿಂದ ಸ್ಥಳೀಯ ಸಂಸ್ಥೆಗಳಲ್ಲಿ ಅನಧಿಕೃತ ಬಡಾವಣೆಯಲ್ಲಿ ನಿರ್ಮಾಣವಾಗಿರುವ ಮನೆ, ವಾಣಿಜ್ಯ ಕಟ್ಟಡ ಮತ್ತು ನಿವೇಶನಗಳನ್ನು ಸಕ್ರಮಗೊಳಿಸಿ ಈ ಸ್ವತ್ತು ನೀಡುವಂತೆ ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರದಿಂದ ಸೂಕ್ತವಾದ ಆದೇಶ ಹೊರಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಪಣ್ಯದಹುಂಡಿ ರಾಜು ಮತ್ತಿತರರಿದ್ದರು.