ಸಾರಾಂಶ
ಕನ್ನಡಪ್ರಭ ವಾರ್ತೆ ಜಮಖಂಡಿ
ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳ ಪ್ರವಾಹದಿಂದ ಬಾಧಿತವಾಗಿರುವ ಗ್ರಾಮಗಳಿಗೆ ಪುನರ್ವಸತಿ ಕಲ್ಪಿಸಬೇಕು ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ವಿರುಪಾಕ್ಷಯ್ಯ ಪಂ.ಹಿರೇಮಠ ಆಗ್ರಹಿಸಿದರು.ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಬೇಕು. ಆಲಮಟ್ಟಿ ಜಲಾಶಯದಲ್ಲಿ 254 ಮೀಟರ್ ನೀರು ಸಂಗ್ರಹಿಸಿ, ವಿಜಯಪುರ ಮತ್ತು ಬಾಗಲಕೋಟೆ ಎರಡೂ ಜಿಲ್ಲೆಗಳಿಗೆ ಹೆಚ್ಚಿನ ನೀರಾವರಿ ಸೌಲಭ್ಯ ಒದಗಿಸಬೇಕು. ಯುಕೆಪಿ ಅಡಿಯಲ್ಲಿ ಪ್ರವಾಹಕ್ಕೊಳಗಾಗುವ ರೈತರ ಜಮೀನು ಮತ್ತು ಗ್ರಾಮಗಳಿಗೆ ಪುನರ್ವಸತಿ ಕಲ್ಪಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಬಾಗಲಕೋಟೆ ಜಿಲ್ಲೆಯಲ್ಲಿ ಜೆ.ಎಲ್.ಬಿ.ಸಿ. ಕಾಲುವೆಗಳಿಗೆ 30 ವರ್ಷಗಳಿಂದ ನೀರು ಸರಬರಾಜಾಗಿಲ್ಲ. ಸರ್ಕಾರ ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳು ಈಬಗ್ಗೆ ಗಮನ ಹರಿಸಬೇಕು ಹಾಗೂ ಕಾಲುವೆಗಳಿಗೆ ನೀರು ಹರಿಸಬೇಕೆಂದರು.ಬೀಳಗಿ ಪಟ್ಟಣಕ್ಕೆ ಪ್ರತೇಕ ಏತ ನೀರಾವರಿ ಯೋಜನೆ ಯೊಂದನ್ನು ಪ್ರಾರಂಬಿಸಬೇಕು. ಕೃಷ್ಣಾ ನದಿಯ ಲಕ್ಷಾಂತರ ಕ್ಯುಸೆಕ್ ನೀರು ಸಮುದ್ರ ಪಾಲಾಗುತ್ತಿದ್ದು, ಸರ್ಕಾರ ಬಾಗಲಕೋಟೆಯ ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸುವ ಯೋಜನೆಯನ್ನು ಪ್ರಾರಂಭಿಸಬೇಕು. ಒತ್ತೂವರಿಯಾಗಿರುವ ಕೆರೆಗಳನ್ನು ತೆರವುಗೊಳಿಸಿ ನೀರು ಸಂಗ್ರಹಿಸಬೇಂಕೆಂದು ಒತ್ತಾಯಿಸಿದರು.
ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಕಾಯ್ದೆಗಳು ಅವೈಜ್ಞಾನಿಕವಾಗಿವೆ ಎಂದ ಅವರು ತಕ್ಷಣ ಕಾಯ್ದೆಗಳ ಮರು ಪರಿಶೀಲನೆ ನಡೆಸಿ ಪ್ರಕೃತಿ ವಿಕೋಪದಿಂದ ಜೀವ ಮತ್ತು ಆಸ್ತಿ ಹಾನಿಗೊಳಗಾದವರಿಗೆ ಹೆಚ್ಚಿನ ಪರಿಹಾರ ನೀಡಬೇಕು. ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ರೈತರಿಗೆ ಬೆಳೆ ಪರಿಹಾರ ಹಾಗೂ ಬೆಳೆವಿಮೆಯ ಹಣ ಬಂದಿರುವುದಿಲ್ಲ. ಕೂಡಲೇ ಬಾಕಿ ಉಳಿದಿರುವ ರೈತರಿಗೆ ಬೆಳೆಪರಿಹಾರ ದೊರಕಿಸಿಕೊಡಬೇಕು. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕ್ಕೆ ಭೂಸ್ವಾಧೀನ ಮಾಡಿಕೊಳ್ಳುವ ರೈತರ ಜಮೀನುಗಳಿಗೆ ಪ್ರತಿ ಎಕರೆಗೆ ಕನಿಷ್ಠ ₹50 ಲಕ್ಷಗಳನ್ನು ನೀಡಬೇಕೆಂದರು.ಈ ವೇಳೆ ಉತ್ತರ ಪ್ರಾಂತ ಕಾರ್ಯಕಾರಣಿ ಸದಸ್ಯ ಡಾ.ಶಿವಾನಂದ ಬಿದರಿ, ತಾಲೂಕು ಅಧ್ಯಕ್ಷ ಸಿದ್ದನಗೌಡ ಪಾಟೀಲ,ಜಿಲ್ಲಾ ಕಬ್ಬು ಬೆಳೆಗಾರ ಸುಬ್ಬರಾಯಗೌಡ ಪಾಟೀಲ, ತಾಲೂಕು ಘಟಕದ ಕಾರ್ಯದರ್ಶಿ ಮಹೇಶ ದೇಶಪಾಂಡೆ ಎಸ್.ಕೆ.ಪಾಟೀಲ, ಎಸ್.ಬಿ.ಪಾಟೀಲ ಇದ್ದರು.