ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಂಚಿನ ಪುತ್ಥಳಿಯನ್ನು ಅವಮಾನಕರ ರೀತಿಯಲ್ಲಿ ಕಸದ ಲಾರಿಯಲ್ಲಿ ತೆರವು ಮಾಡಿರುವ ಕಲಬುರಗಿ ಪಾಲಿಕೆ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದಿಂದ ನಗರದಲ್ಲಿ ಗುರುವಾರ ಸಾಂಕೇತಿಕವಾಗಿ ಪ್ರತಿಭಟಿಸಲಾಯಿತು.
- ಪ್ರತಿಭಟನೆಯಲ್ಲಿ ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘ ಆಗ್ರಹ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಂಚಿನ ಪುತ್ಥಳಿಯನ್ನು ಅವಮಾನಕರ ರೀತಿಯಲ್ಲಿ ಕಸದ ಲಾರಿಯಲ್ಲಿ ತೆರವು ಮಾಡಿರುವ ಕಲಬುರಗಿ ಪಾಲಿಕೆ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದಿಂದ ನಗರದಲ್ಲಿ ಗುರುವಾರ ಸಾಂಕೇತಿಕವಾಗಿ ಪ್ರತಿಭಟಿಸಲಾಯಿತು.ನಗರದ ಉಪ ವಿಭಾಗಾಧಿಕಾರಿ ಕಚೇರಿ ಎದುರು ಸಂಘದ ಅಧ್ಯಕ್ಷ ವೈ.ವಿರೂಪಾಕ್ಷಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಬಿ.ಮಲ್ಲೇಶ ನೇತೃತ್ವದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದ ಕುರುಬ ಸಮಾಜ ಬಾಂಧವರು ಎಸಿ ಸಂತೋಷಕುಮಾರ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿದರು.
ಇದೇ ವೇಳೆ ಸಮಾಜದ ಮುಖಂಡರು ಮಾತನಾಡಿ, ಅಹಿಂದ ವರ್ಗಗಳ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ಥಳಿಯನ್ನು ಕಲಬುರಗಿ ಹೃದಯ ಭಾಗವಾದ ಹೈಕೋ ವೃತ್ತಕ್ಕೆ ಸಿದ್ದರಾಮಯ್ಯ ವೃತ್ತ ಎಂಬುದಾಗಿ ನಾಮಕರಣ ಮಾಡಲಾಗಿತ್ತು. ಸೆ.17ರಂದು ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ಅಭಿಮಾನಿಗಳು 9 ಅಡಿ ಎತ್ತರದ ಕಂಚಿನ ಪುತ್ಥಳಿ ಪ್ರತಿಷ್ಟಾಪಿಸಿದ್ದರು ಎಂದರು.ಪಾಲಿಕೆ ಅಧಿಕಾರಿಗಳು ಮುನ್ಸೂಚನೆ ನೀಡದೇ ನಸುಕಿನ 4 ಗಂಟೆಗೆ ಕಸದ ಲಾರಿ ತಂದು, ಪ್ರತಿಮೆ ಎಳೆದಾಡಿ ತೆರವುಗೊಳಿಸಿದ್ದಾರೆ. ಇದು ಹಿಂದುಳಿದ, ದಲಿತ, ಅಲ್ಪಸಂಖ್ಯಾತರ ಸಮುದಾಯಗಳ ನಾಯಕರಿಗೆ ಮಾಡಿದ ಘೋರ ಅವಮಾನ. ಕಲಬುರಗಿಯಲ್ಲಿ 20ಕ್ಕೂ ಹೆಚ್ಚು ಪುತ್ಥಳಿ ಯಾವುದೇ ಅನುಮತಿ ಇಲ್ಲದಿದ್ದರೂ ಇವೆ. ಸಿದ್ದರಾಮಯ್ಯ ಪುತ್ಥಳಿಯನ್ನೇ ಗುರಿಯಾಗಿಸಿ ತೆರವು ಮಾಡಿದ್ದಾರೆ ಎಂದು ಟೀಕಿಸಿದರು.
ಸಿದ್ದರಾಮಯ್ಯ ವೃತ್ತ ಎಂಬುದಾಗಿ 2023ರಲ್ಲಿ ನಾಮಕರಣ ಮಾಡಿದ್ದ ಫಲಕವನ್ನೂ ಅಲ್ಲಿಂದ ತೆರವು ಮಾಡಿಸಲಾಗಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಲ್ಲಿಯೇ ವಾಸ್ತವ್ಯ ಮಾಡಿದ್ದಾಗಲೇ ಇಂತಹ ಕೃತ್ಯ ಎಸಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಸಿದ್ದು ಕಂಚಿನ ಪುತ್ಥಳಿಯನ್ನು ಪುನಃ ಅದೇ ವೃತ್ತದಲ್ಲಿ ಗೌರವಯುತವಾಗಿ ಮರು ಪ್ರತಿಷ್ಟಾಪಿಸಬೇಕು. ಪುತ್ಥಳಿಗೆ ಅವಮಾನ ಮಾಡಿದ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಸರ್ಕಾರ ಸ್ಪಂದಿಸದಿದ್ದರೆ ರಾಜ್ಯಾದ್ಯಂತ ಕುರುಬ ಸಮಾಜ ಸೇರಿದಂತೆ ಎಲ್ಲ ವರ್ಗದವರು, ಸಿದ್ದರಾಮಯ್ಯ ಅಭಿಮಾನಿಗಳು ಪ್ರತಿಭಟನೆ ನಡೆಸಬೇಕಾದೀತು ಎಂದು ಎಚ್ಚರಿಸಿದರು.ಸಂಘದ ಉಪಾಧ್ಯಕ್ಷ ಭಗತ್ ಸಿಂಹ, ನಿರ್ದೇಶಕರಾದ ಮಳಲ್ಕೆರೆ ಷಣ್ಮುಖಪ್ಪ, ಮಾಲತೇಶ ಹದಡಿ, ದೇವನಗರಿ ಎಂ.ಮನು, ಸಮಾಜದ ಹಿರಿಯ ಮುಖಂಡರಾದ ಎಚ್.ಜಿ.ಸಂಗಪ್ಪ ಪೈಲ್ವಾನ್, ನಿವೃತ್ತ ಶಿಕ್ಷಕ ಶಂಕರಮೂರ್ತಿ, ಮುದಹದಡಿ ನಾಗರಾಜ, ಮಹಾಂತೇಶ ಸೇರಿದಂತೆ ಇತರರು ಇದ್ದರು.
- - --1ಕೆಡಿವಿಜಿ1:
ದಾವಣಗೆರೆಯಲ್ಲಿ ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದಿಂದ ಉಪವಿಭಾಗಾಧಿಕಾರಿ ಸಂತೋಷಕುಮಾರ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.