ಸಾರಾಂಶ
ಹಾವೇರಿ: ಕುಲಾಂತರಿ ತಳಿಯನ್ನು ಸರ್ಕಾಗಳು ತಿರಸ್ಕರಿಸಬೇಕು, ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ ಪಾವತಿಸುವಂತೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಸಾವಿರಾರು ರೈತರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ನಗರದ ಕಾಗಿನೆಲೆ ಕ್ರಾಸ್‌ನಿಂದ ಬೈಕ್ ರ‍್ಯಾಲಿ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ರೈತರು, ಜಿಲ್ಲಾಡಳಿತ ಭವನದ ಪ್ರವೇಶ ದ್ವಾರದ ಎದುರು ಧರಣಿ ನಡೆಸಿ ತಮ್ಮ ಬೇಡಿಕೆಗಳ ಹಕ್ಕೊತ್ತಾಯ ಮಾಡಿದರು. ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಬರಗಾಲ, ಅತಿವೃಷ್ಟಿಯಿಂದ ಬೆಳೆನಷ್ಟ ಅನುಭವಿಸುತ್ತಿದ್ದು ಬೆಳೆ ಪರಿಹಾರ ಕೊಡುವಲ್ಲಿ ಸರ್ಕಾರ ವಿಫಲವಾಗಿವೆ. ನಮ್ಮನ್ನು ಆಳುವ ಸರ್ಕಾರಗಳು ರೈತರ ಸಂಕಷ್ಟವನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಪ್ರಸ್ತುತ ಸರ್ಕಾರ ಮುಡಾ ಹಗರಣ, ವಾಲ್ಮೀಕಿ ಹಗರಣ ಆರೋಪ ಪ್ರತ್ಯೋರೋಪ ಮಾಡುವುದರ ಮುಖಾಂತರ ಕಾಲಹರಣ ಮಾಡುತ್ತಿದ್ದು, ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು.೨೦೨೩-೨೪ನೇ ಸಾಲಿನ ಬೆಳೆವಿಮಾದಲ್ಲಿ ಜಿಲ್ಲೆಯ ರೈತರಿಗೆ ಅನ್ಯಾಯವಾಗಿದೆ ಅಸಮರ್ಪಕ ವಿಮಾ ನೀತಿಯಿಂದ ರೈತಕುಲ ನಲುಗಿದೆ. ಹೆಸ್ಕಾಂ ಕಂಪನಿ ಬೋರ್‌ವೆಲ್ ಹಾಕಿಸಿದ ರೈತರಿಂದ ಮೊದಲಿನ ರೀತಿ ಅರ್ಜಿ ತೆಗೆದುಕೊಳ್ಳಬೇಕು. ರೈತರ ತೋಟಗಳಲ್ಲಿ ಹಾದುಹೋದ ವಿದ್ಯುತ್ ಲೈನ್‌ಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು. ಅಡಿಕೆ ಬೆಳೆಗಾರರ ಬೆಳೆವಿಮೆಯನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.ಸಂಘಟನೆ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಕೇಂದ್ರ ಸರ್ಕಾರ ರೈತರಿಗೆ ಕುಲಾಂತರಿ ಬೀಜ ವಿಶೇಷ ಕಾನೂನು ಜಾರಿಗೊಳಿಸುವ ಮೂಲಕ ಬೀಜ ಸಾಮಿತ್ವ ಹಕ್ಕನ್ನು ಕಿತ್ತುಕೊಂಡು ರೈತರ ಹಿಸಾಸಕ್ತಿಗೆ ಧಕ್ಕೆ ತರಲು ಹೊರಟಿರುವುದು ಖಂಡನೀಯ. ಕಾನೂನು ಜಾರಿಗೊಳಿಸುವ ಮುನ್ನ ಅದರ ಸಾಧಕ-ಬಾಧಕಗಳ ಬಗ್ಗೆ ರೈತ ಮುಖಂಡರೊಂದಿಗೆ ಚರ್ಚಿಸಬೇಕಿತ್ತು. ಆದರೆ ಕೇಂದ್ರ ಸರ್ಕಾರ ಇದನ್ನು ಪಾಲಿಸದೇ ನಾಮಕಾವಸ್ಥೆ ಸಭೆ ಮಾಡಿ ಕಾನೂನು ಜಾರಿಗೊಳಿಸಲು ಮುಂದಾಗಿದೆ. ಕೂಡಲೇ ರೈತ ವಿರೋಧಿಯಾಗಿರುವ ಕುಲಾಂತರಿ ಬೀಜ ವಿಶೇಷ ಕಾನೂನು ಸಂಪೂರ್ಣ ತಿರಸ್ಕರಿಸಿ ರೈತರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ರೈತರ ಅಹವಾಲು ಆಲಿಸಿ ಮಾತನಾಡಿ, ೨೦೨೩-೨೪ನೇ ಸಾಲಿನ ಬಾಕಿ ಉಳಿದಿರುವ ರು. ೬೬ ಕೋಟಿ ಬೆಳೆವಿಮೆ ಪರಿಹಾರ ಹಣದಲ್ಲಿ ೪೦ಕೋಟಿ ಕೊಡಲು ನಿರ್ಣಯ ಕೈಗೊಳ್ಳಲಾಗಿದೆ. ಶೀಘ್ರದಲ್ಲಿಯೇ ಹಣ ಬಿಡುಗಡೆಯಾಗಲಿದೆ. ಇನ್ನುಳಿದ ಬಾಕಿ ಪರಿಹಾರ ಹಣ ನೀಡುವ ಕುರಿತು ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಮಾಲತೇಶ ಪೂಜಾರ, ಶಿವಬಸಪ್ಪ ಗೋವಿ, ಎಚ್.ಎಚ್. ಮುಲ್ಲಾ, ಶಿವಯೋಗಿ ಹೊಸಗೌಡ್ರ, ದಿಳ್ಳೆಪ್ಪ ಮಣ್ಣೂರ, ಮರಿಗೌಡ ಪಾಟೀಲ, ಗಂಗಣ್ಣ ಎಲಿ, ಮಲ್ಲನಗೌಡ್ರ ಮಾಳಗಿ, ಸುರೇಶ ಚಲವಾದಿ, ಯಶವಂತ ಎಡಗೋಡಿ ಸೇರಿದಂತೆ ಅನೇಕರು ಇದ್ದರು.ಜಿಲ್ಲಾಡಳಿತದ ವಿರುದ್ಧ ಆಕ್ರೋಶ: ಬೆಳೆ ನಷ್ಟ ಸಮೀಕ್ಷೆ ನಡೆಸುವಲ್ಲಿ ಜಿಲ್ಲಾಡಳಿತ ಹಿಂದೆ ಬಿದ್ದಿದ್ದು, ಇದರಿಂದ ರೈತರಿಗೆ ಪರಿಹಾರ ಸಮರ್ಪಕವಾಗಿ ಸಿಗದಂತಾಗಿದೆ. ಅದೇ ರೀತಿ ಕೆರೆ ತುಂಬಿಸುವ ಯೋಜನೆಗೆ ಸಾವಿರಾರು ಕೋಟಿ ವೆಚ್ಚ ಮಾಡಿದ್ದರೂ ಕೆರೆಗಳಿಗೆ ಸಮರ್ಪಕವಾಗಿ ನೀರು ತುಂಬಿಸಿಲ್ಲ. ತುಂಗಾ ಮೇಲ್ದಂಡೆ, ನೀರಾವರಿ ಯೋಜನೆ, ರೈಲ್ವೆ ಮಾರ್ಗ ಹೀಗೆ ಹತ್ತಾರು ಅಭಿವೃದ್ಧಿ ಕಾರ್ಯಕ್ಕೆ ಭೂಮಿಯನ್ನು ಪಡೆದು ಪರಿಹಾರ ನೀಡುವಲ್ಲಿ ವಿಳಂಬ ಧೋರಣೆ ನಡೆಸುತ್ತಿದೆ. ಇದರಿಂದ ಕೃಷಿ ನಂಬಿಕೊಂಡಿರುವ ಕುಟುಂಬಗಳು ಬೀದಿಗೆ ಬರುವಂತಾಗಿದೆ ಎಂದು ರೈತಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಹೇಳಿದರು.