ನಂಬಿಕೆಯಿಂದ ಸಂಬಂಧಗಳು ಗಟ್ಟಿ

| Published : Oct 14 2024, 01:20 AM IST

ಸಾರಾಂಶ

ಆತ್ಮ ಶಕ್ತಿ ಇರುವವನನ್ನು ಯಾವ ದುಷ್ಟ ಶಕ್ತಿಯು ನಾಶಗೊಳಿಸಲಾರದು

ನರೇಗಲ್ಲ: ಆಧುನಿಕ ಯುಗದಲ್ಲಿ ಮಾನವೀಯ ಸುಮಧುರ ಸಂಬಂಧಗಳು ಕಡಿಮೆಯಾಗುತ್ತಿವೆ. ಮರಕ್ಕೆ ಬೇರು ಇಲ್ಲದಿದ್ದರೆ ಮರ ಉಳಿಯುವುದಿಲ್ಲ. ಅದೇ ರೀತಿ ಜೀವನದಲ್ಲಿ ನಂಬಿಕೆ ಇಲ್ಲದಿದ್ದರೆ ಸಂಬಂಧಗಳು ಉಳಿಯಲಾರವು. ಪರಸ್ಪರ ನಂಬಿಕೆ ಮತ್ತು ವಿಶ್ವಾಸದಿಂದ ಸಂಬಂಧ ಗಟ್ಟಿಗೊಳಿಸಬೇಕಾದ ಅವಶ್ಯಕತೆ ಇದೆ ಎಂದು ಬಾಳೆಹೊನ್ನೂರು ಶ್ರೀರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ಅವರು ಶನಿವಾರ ಸಂಜೆ ಇಲ್ಲಿಯ ಶ್ರೀಅನ್ನದಾನೇಶ್ವರ ಪ್ರೌಢಶಾಲಾ ಆವರಣದಲ್ಲಿ ನಿರ್ಮಿಸಿದ ಮಾನವ ಧರ್ಮ ಮಂಟಪದಲ್ಲಿ ಶಮಿ ವೃಕ್ಷ ಪೂಜೆ ನೆರವೇರಿಸಿ ಮಾತನಾಡಿದರು.

ಆತ್ಮ ಶಕ್ತಿ ಇರುವವನನ್ನು ಯಾವ ದುಷ್ಟ ಶಕ್ತಿಯು ನಾಶಗೊಳಿಸಲಾರದು. ಬೆಂಕಿಯಲ್ಲಿ ಚಿನ್ನ ಸುಡುತ್ತಿದ್ದರೂ ಕಪ್ಪಾಗದೇ ಹೊಳೆಯುವಂತೆ ಸಜ್ಜನರು ಎಷ್ಟೇ ತೊಂದರೆಯಲ್ಲಿದ್ದರು, ಸ್ವಾಭಿಮಾನದಿಂದ ಬಾಳಿ ಬದುಕುತ್ತಾರೆ. ಕೆಟ್ಟವರು ಒಳ್ಳೆಯವರನ್ನು ನಿಂದಿಸುವುದು ಆಗಸಕ್ಕೆ ಉಗುಳಿದಂತೆ. ಮನುಷ್ಯ ಜೀವನದಲ್ಲಿ ಎಷ್ಟೇ ಬೆಳೆದು ಬಲಗೊಂಡರೂ ಮೂಲ ಮರೆಯಬಾರದು. ಧರ್ಮ ಪರಂಪರೆ ಸಂಸ್ಕೃತಿ ಮಾನವನ ಅಭ್ಯುದಯಕ್ಕಾಗಿ ಮತ್ತು ಶ್ರೇಯಸ್ಸಿಗಾಗಿ ಇರುತ್ತವೆ ಹೊರತು ಅವನತಿಗಲ್ಲ ಎಂದರು.

ಅರಿತು ಬಾಳುವುದರಿಂದ ಬದುಕು ಬಂಗಾರಗೊಳ್ಳುತ್ತದೆ. ಹಣದಿಂದ ಎಲ್ಲವೂ ಸಿಗುವುದೆಂಬ ಭ್ರಮೆ ಇರಬಾರದು. ಬದುಕು ಬದಲಾಗಬೇಕಾದರೆ ಬದುಕುವ ದಾರಿ ಬದಲಾಗಬೇಕಾಗುತ್ತದೆ. ಮನುಷ್ಯ ಮನುಷ್ಯನನ್ನು ಪ್ರೀತಿ ವಿಶ್ವಾಸ ಕಾಣುವಂತಾದರೆ ಸಮಾಜದಲ್ಲಿ ಯಾವುದೇ ಸಂಘರ್ಷಗಳು ಉಂಟಾಗಲಾರವು. ಸಹನೆ ಸದ್ವಿನಯ ನಿನ್ನದಾದರೆ ಜೀವನದಲ್ಲಿ ಯಶಸ್ಸು ನಿಶ್ಚಿತ. ಅಸುರ ಶಕ್ತಿಗಳ ಜತೆ ಹೋರಾಡಿ ದೈವೀ ಶಕ್ತಿಗಳಿಗೆ ವಿಜಯವಾದ ದಿನವೇ ವಿಜಯ ದಶಮಿ ಆಚರಣೆಯಾಗಿದೆ. ಸ್ವಧರ್ಮದಲ್ಲಿ ನಿಷ್ಠೆ ಮತ್ತು ಪರಧರ್ಮದಲ್ಲಿ ಸಹಿಷ್ಣುತೆ ಹೊಂದಿ ಸಾಮರಸ್ಯದಿಂದ ಬಾಳಬೇಕೆಂದರು.

ಸಿದ್ಧರಬೆಟ್ಟ ಶ್ರೀಗಳು ಸಮಾರಂಭದ ಯಶಸ್ಸಿಗಾಗಿ ಕಾರಣರಾದ ಸಮಸ್ತರಿಗೂ ದಾಸೋಹ ದಾನಿಗಳಿಗೂ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಬ್ಬಿಗೇರಿ ಹಿರೇಮಠದ ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮಿಗಳಿಗೆ ಸಂಸ್ಕೃತಿ ಸಂವರ್ಧನ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಶಾಸಕರಾದ ಜಿ.ಎಸ್. ಪಾಟೀಲ ಹಾಗೂ ದಸರಾ ಮಹೋತ್ಸವದ ಪದಾಧಿಕಾರಿಗಳು ಶ್ರೀ ರಂಭಾಪುರಿ ಜಗದ್ಗುರುಗಳಿಗೆ ಬಿನ್ನವತ್ತಳೆ, ಕಾಣಿಕೆ, ರೇಷ್ಮೆ ಶಾಲು, ಫಲ, ಪುಷ್ಪ, ತಾಂಬೂಲ ಸಮರ್ಪಿಸಿ ಗೌರವಿಸಿದರು.

ಶ್ರೀಪೀಠದ ಆಡಳಿತಾಧಿಕಾರಿ ಎಸ್.ಬಿ. ಹಿರೇಮಠ, ವಾರ್ತಾ ಕಾರ್ಯದರ್ಶಿ ಡಾ.ಗುರುಮೂರ್ತಿ ಯರಗಂಬಳಿಮಠ, ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್. ಬಾಳನಗೌಡ್ರ, ಡಾ. ಗುರುಪಾದಯ್ಯ ಸಾಲಿಮಠ, ಶಾಂತಾ ಆನಂದ, ವೀರೇಶ ಕಿತ್ತೂರ, ಬಸವರಾಜ ವೀರಾಪುರ, ಬಾಬುಗೌಡ್ರ ಪಾಟೀಲ, ವರ್ಮಪ್ಪ ಹನಮನಾಳ, ಮಂಜುನಾಥ ಅಂಗಡಿ, ಅಂದಪ್ಪ ವೀರಾಪುರ, ಬಸವರಾಜ ಪಲ್ಲೇದ, ಮಲ್ಲಿಕಾರ್ಜುನ ಹರ್ಲಾಪುರ, ಸುರೇಶ ನಾಯಕ, ಸಿವಪ್ಪ ಶಿದ್ನೇಕೊಪ್ಪ, ಗುರಣ್ಣ ಅವರಕಿ, ಸೋಮನಗೌಡ ಕಣವಿ, ಭೀಮಣ್ಣ ಕಂಬಳಿ ಇದ್ದರು. ವೀರಯ್ಯ ಬಿ. ಸೋಮನಕಟ್ಟಿಮಠ ಸ್ವಾಗತಿಸಿದರು.

ಸಮಾರಂಭಕ್ಕೂ ಮುನ್ನ ಗ್ರ‍್ರಾಮದ ಶ್ರೀವೀರಭದ್ರೇಶ್ವರ ದೇವಸ್ಥಾನದಿಂದ ಶ್ರೀ ಅನ್ನದಾನೇಶ್ವರ ಪ್ರೌಢ ಶಾಲೆಯವರೆಗೆ ಬೆಳ್ಳಿ ಅಡ್ಡಪಲ್ಲಕ್ಕಿ ಮಹೋತ್ಸವ ಸಡಗರ ಸಂಭ್ರಮದಿಂದ ಜರುಗಿತು. ಬೆಳಗ್ಗೆ ಅಬ್ಬಿಗೇರಿ ಮೂಲ ಮಠದಿಂದ ಹೊಸ ಹಿರೇಮಠಕ್ಕೆ ಬಾಳೆಹೊನ್ನೂರು ಶ್ರೀರಂಭಾಪುರಿ ಜಗದ್ಗುರುಗಳು ಭಕ್ತರೊಡನೆ ಪೂಜೆಗಾಗಿ ಅಗ್ರೋದಕ ಹೊತ್ತು ನಡೆದರು. ಸಾವಿರಾರು ಭಕ್ತರು ಕುಂಭ ಹೊತ್ತು ಜಗದ್ಗುರುಗಳೊಂದಿಗೆ ಹೆಜ್ಜೆ ಹಾಕಿದರು. ದಾಸೋಹ ಸೇವೆಯನ್ನು ಶರಣಪ್ಪ ಶಿವಪ್ಪ ಕಿಟಗೇರಿ, ಪ್ರಭು ವಿ.ಬೇವಿನಕಟ್ಟಿ, ಶಕುಂತಲಾ ಬಸಪ್ಪ ನಿಡಗುಂದಿ, ಬಾಬು ವೀರಭದ್ರಪ್ಪ ನಿರಲೋಟ, ಬಸವರಾಜ ಮಲ್ಲಾಪುರ, ಪರಪ್ಪ ಕಳಕಪ್ಪ ಮಾಳಶೆಟ್ಟಿ, ಎನ್.ಬಾಬು ನವರಂಗಿ ಬೆಂಗಳೂರು ವಹಿಸಿದ್ದರು.