ರೈಲ್ವೆ ಸಂಪರ್ಕಕ್ಕೆ ಅನುದಾನ ಬಿಡುಗಡೆಗೊಳಿಸಿ

| Published : Oct 08 2024, 01:05 AM IST

ಸಾರಾಂಶ

ರೈಲ್ವೆಲೈನ್ ಸಮೀಕ್ಷೆ ಕಾರ್ಯ ಪೂರ್ಣಗೊಂಡು 31.30 ಕಿ.ಮೀ. ಕಾಮಗಾರಿಯ ಅಂದಾಜು ವೆಚ್ಚ ₹919.49 ಕೋಟಿಗೆ ನಿಗದಿಯಾಗಿದೆ.

ಕಂಪ್ಲಿ: ಗಂಗಾವತಿಯಿಂದ ವಯಾ ಕಂಪ್ಲಿ ಮೂಲಕ ದರೋಜಿಗೆ ಬ್ರಾಡ್‌ಗೇಜ್ ರೈಲ್ವೆ ಸಂಪರ್ಕಕ್ಕೆ ಒತ್ತಾಯಿಸಿ ಕಂಪ್ಲಿ ತಾಲೂಕು ರೈಲ್ವೆ ಮಾರ್ಗಕ್ಕಾಗಿ ಕ್ರಿಯಾಸಮಿತಿ ಅಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ ರೈಲ್ವೆ ಖಾತೆ ಸಹಾಯಕ ಸಚಿವ ವಿ.ಸೋಮಣ್ಣಗೆ ಸಿರಿಗೆರೆಯಲ್ಲಿ ಮನವಿ ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು, ಕಂಪ್ಲಿ ಮೂಲಕ ದರೋಜಿ-ಗಂಗಾವತಿ ಬ್ರಾಡ್‌ಗೇಜ್ ರೈಲ್ವೆಲೈನ್ ಸಮೀಕ್ಷೆ ಕಾರ್ಯ ಪೂರ್ಣಗೊಂಡು 31.30 ಕಿ.ಮೀ. ಕಾಮಗಾರಿಯ ಅಂದಾಜು ವೆಚ್ಚ ₹919.49 ಕೋಟಿಗೆ ನಿಗದಿಯಾಗಿದೆ. ಕೂಡಲೇ ಕಾಮಗಾರಿ ಆರಂಭಕ್ಕೆ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿಗೆ ಚಾಲನೆ ನೀಡುವಲ್ಲಿ ತಾವು ಜಾಗೃತಿ ವಹಿಸಬೇಕು. ಈ ಬ್ರಾಡ್‌ಗೇಜ್ ರೈಲ್ವೆ ಸಂಪರ್ಕದಿಂದ ಗಂಗಾವತಿ ನಗರದಿಂದ ನೇರವಾಗಿ ಬಳ್ಳಾರಿ, ಬೆಂಗಳೂರು, ಗುಂತಕಲ್, ಗುಂಟೂರು ನಗರಗಳಿಗೆ ನೇರ ಸಂಪರ್ಕ ಕಲ್ಪಿಸುತ್ತದೆ. ಧಾರ್ಮಿಕ ಕ್ಷೇತ್ರಗಳಾದ ಶ್ರೀಶೈಲ, ತಿರುಪತಿ ಹಾಗೂ ಗುಂತಕಲ್ ರೈಲ್ವೆ ಜಂಕ್ಷನ್ ತಲುಪಲು ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎಂದರು.

ಕಂಪ್ಲಿ, ಗಂಗಾವತಿ, ಸಿಂಧನೂರು ತಾಲೂಕಿನಲ್ಲಿ ಅತಿ ಹೆಚ್ಚು ಭತ್ತ ಬೆಳೆಯುವುದರಿಂದ ಅಕ್ಕಿಯನ್ನು ಹೊರ ರಾಜ್ಯ, ದೇಶಗಳಿಗೆ ರವಾನಿಸಲು, ಭತ್ತದ ಕೊಯ್ಲು ಯಂತ್ರಗಳನ್ನು ಸಾಗಿಸಲು, ತರಿಸಿಕೊಳ್ಳಲು ಅನುಕೂಲವಾಗುತ್ತದೆ. ಅಲ್ಲದೆ, ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಪ್ರಾಶಸ್ತ್ಯ ಕೊಟ್ಟಂತಾಗುತ್ತದೆ. ವಯಾ ಕಂಪ್ಲಿ, ಗಂಗಾವತಿ-ದರೋಜಿ ನೂತನ ಬ್ರಾಡಗೇಜ್ ರೈಲ್ವೆಲೈನ್ ನಿರ್ಮಾಣಕ್ಕಾಗಿ ತೀವ್ರ ಒತ್ತು ಕೊಟ್ಟು ಕಾಮಗಾರಿಗೆ ಹಣ ಮಂಜೂರು ಮಾಡಿಸಲು ಕ್ರಮ ಕೈಗೊಳ್ಳಬೇಕೆಂದು ಮನವರಿಕೆ ಮಾಡಿಕೊಟ್ಟರು.

ಪದಾಧಿಕಾರಿಗಳಾದ ಹಾದಿಮನಿ ಕಾಳಿಂಗವರ್ಧನ, ಅಯ್ಯೋದಿ ವೆಂಕಟೇಶ, ಬಂಗಿ ದೊಡ್ಡ ಮಂಜುನಾಥ ಇತರರಿದ್ದರು.