ಜನಪರ ಶಿಕ್ಷಣ ನೀತಿಗಾಗಿ ಶೈಕ್ಷಣಿಕ ಸಮೀಕ್ಷೆ ಕೈಪಿಡಿ ಬಿಡುಗಡೆ

| Published : Feb 04 2024, 01:35 AM IST

ಸಾರಾಂಶ

ಜನಪರ ಶಿಕ್ಷಣ ನೀತಿಗಾಗಿ ಶೈಕ್ಷಣಿಕ ಸಮೀಕ್ಷೆ ಕೈಪಿಡಿ ಬಿಡುಗಡೆ. 4 ವರ್ಷದ ಪದವಿಗೆ ವಿರೋಧ. ಶಿಕ್ಷಣ ಕೇವಲ ಉದ್ಯೋಗ ಗಿಟ್ಟಿಸಲು ಅಲ್ಲ: ಎಐಡಿಎಸ್‌ಒ

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ನಾಲ್ಕು ವರ್ಷಗಳ ಪದವಿ ಅಧ್ಯಯನ ಬೇಡ, ಶೈಕ್ಷಣಿಕ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಬೇಡ ಎಂಬುದು ಸೇರಿದಂತೆ ಹಲವು ಅಂಶಗಳ ಬಗ್ಗೆ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ (ಎಐಡಿಎಸ್‌ಒ) ನಡೆಸಿದ ಸಮೀಕ್ಷೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

ಶನಿವಾರ ನಡೆದ ಕಾರ್ಯಕ್ರಮದಲ್ಲಿ ಶೈಕ್ಷಣಿಕ ನೀತಿ ಕುರಿತು ರಾಜ್ಯದಲ್ಲಿ ನಡೆಸಿರುವ ಸಮೀಕ್ಷೆಯ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.

ಕೈಪಿಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಎ.ಮುರಿಗೆಪ್ಪ, ರಾಜ್ಯಕ್ಕೆ ಜನಪರವಾದ ಶಿಕ್ಷಣ ನೀತಿ ಬೇಕಾಗಿದೆ. ಚರ್ಚೆಗಳನ್ನು ನಡೆಸದೆ ಬಿಜೆಪಿ ಸರ್ಕಾರ ತರಾತುರಿಯಲ್ಲಿ ಜಾರಿಗೊಳಿಸಿದೆ. ಎನ್‌ಇಪಿ-2020ರಲ್ಲಿ ಮೂರು ವರ್ಷದ ಪದವಿಯನ್ನು ನಾಲ್ಕು ವರ್ಷಕ್ಕೆ ಏರಿಸಲಾಗಿದೆ. ಇದರ ಅವಶ್ಯಕತೆ ಕುರಿತು ಸರ್ಕಾರ ಯಾರನ್ನು ಕೇಳಿದೆ, ವಿದ್ಯಾರ್ಥಿಗಳ ಸಮೀಕ್ಷೆ ನಡೆಸಿದೆಯೇ? ಮುಖ್ಯವಾಗಿ ಶಾಲಾ-ಕಾಲೇಜುಗಳಲ್ಲಿ ತರಗತಿ ಕೊಠಡಿಗಳಿವೆಯೇ? ಪೂರ್ಣಕಾಲಿಕ ಶಿಕ್ಷಕರು, ಬೋಧಕರು ಇದ್ದಾರೆಯೇ ಎಂದು ಪ್ರಶ್ನಿಸಿದರು.

ಶಿಕ್ಷಣ ಕೇವಲ ಉದ್ಯೋಗ ಗಿಟ್ಟಿಸಿಕೊಳ್ಳಲು ಮಾತ್ರವಲ್ಲ. ಸ್ವಾವಲಂಬಿಯಾಗಿ, ಸ್ವತಂತ್ರವಾಗಿ ಜೀವನ ನಡೆಸಲು ಧೈರ್ಯ ತುಂಬುವಂತಿರಬೇಕು ಎಂದು ಅವರು ಹೇಳಿದರು.

ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ರಾಜಾಸಾಬ್, ಜನಪರ ಶಿಕ್ಷಣ ನೀತಿ ರೂಪಿಸಲು ಈ ಸಮೀಕ್ಷೆ ನಡೆಸಲಾಗಿದೆ. ತಾರ್ಕಿಕವಾಗಿ, ವೈಜ್ಞಾನಿಕವಾಗಿ ಯೋಚನೆ ಮಾಡುವ ವಿದ್ಯಾರ್ಥಿ ಸಮುದಾಯದ ಅವಶ್ಯಕತೆ ಸಮಾಜಕ್ಕೆ ಇದೆ. ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯಗಳನ್ನು ನೀಡಬೇಕು. ಕೈಗೆಟುಕುವ ಶುಲ್ಕ ನಿಗದಿಪಡಿಸಬೇಕು. ಪ್ರತಿಯೊಬ್ಬರಿಗೂ ಶಿಕ್ಷಣ ದೊರೆಯಬೇಕು. ಆದರೆ, ಪ್ರಸ್ತುತ ಶಿಕ್ಷಣ ವ್ಯಾಪಾರದ ಸರಕಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಎಐಡಿಎಸ್ಒ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಮಾತನಾಡಿ, ಸಮೀಕ್ಷೆಯಲ್ಲಿ 21 ಸಾವಿರ ಜನ ಭಾಗಿಯಾಗಿದ್ದಾರೆ. 9 ಪ್ರಶ್ನೆಗಳನ್ನು ನೀಡಿ ಪ್ರತಿಕ್ರಿಯೆಗಳನ್ನು ಪಡೆಯಲಾಗಿದೆ. ಇದೇ ಮೊದಲ ಬಾರಿಗೆ ಶಿಕ್ಷಣ ನೀತಿಯ ಕುರಿತು ರಾಜ್ಯದಲ್ಲಿ ಬೃಹತ್ ಪ್ರಮಾಣದ ಸಮೀಕ್ಷೆ ನಡೆಸಲಾಗಿದೆ ಎಂದು ತಿಳಿಸಿದರು.ಸಮೀಕ್ಷೆಯ ಅಭಿಪ್ರಾಯ

-ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸಬೇಕು. ಹಣಕಾಸಿನ ಹೊಣೆ ಸರ್ಕಾರ ವಹಿಸಿಕೊಳ್ಳಬೇಕು.

-ನವೋದಯ ಚಿಂತಕರು, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಅಧ್ಯಯನ ಆಗಬೇಕು.

-ಸರ್ಕಾರದ ಉನ್ನತ ಶಿಕ್ಷಣ ಸಂಸ್ಥೆ ನಡೆಸಲು ವಿದ್ಯಾರ್ಥಿಗಳಿಂದ ದೇಣಿಗೆ ಪಡೆಯಬಾರದು.

-ಕಡಿಮೆ ದಾಖಲಾತಿ ನೆಪದಲ್ಲಿ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಬಾರದು ಮತ್ತು ಮುಚ್ಚಬಾರದು.

-ಶಾಲೆಗಳ ಅಭಿವೃದ್ಧಿಗೆ ಕಾರ್ಪೊರೇಟ್ ಕಂಪನಿಗಳಿಂದ ಧನ ಸಹಾಯ ಪಡೆಯಬಹುದು.

-ವಿದ್ಯಾರ್ಥಿಗಳಿಗೆ ಕೌಶಲ್ಯ, ತರಬೇತಿ ನೆಪದಲ್ಲಿ ಮೌಲ್ಯಗಳ ಕಡೆಗಣನೆ ತಪ್ಪು.

-ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳ ಸ್ಥಾಪನೆಯಾಗಬೇಕು.