ಹೇಮಾವತಿ ನದಿಗೆ ಹೆಚ್ಚಿನ ನೀರು ಬಿಡುಗಡೆ: ಮಂದಗೆರೆ ಪಾತ್ರದ ಜಮೀನುಗಳಿಗೆ ಜಲಕಂಟಕ

| Published : Aug 03 2024, 12:33 AM IST

ಹೇಮಾವತಿ ನದಿಗೆ ಹೆಚ್ಚಿನ ನೀರು ಬಿಡುಗಡೆ: ಮಂದಗೆರೆ ಪಾತ್ರದ ಜಮೀನುಗಳಿಗೆ ಜಲಕಂಟಕ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಂದಗೆರೆಯ ಮಂಜುನಾಥ್‌ ಅವರ ತೋಟಕ್ಕೆ ನೀರು ನುಗ್ಗಿರುವುದಲ್ಲದೆ ಇವರ ಮನೆಯ ಕೊಟ್ಟಿಗೆ ಅರ್ಧ ಭಾಗ ಮುಳುಗಡೆಯಾಗಿದೆ. ರಾತ್ರಿಯಾದ ಕಾರಣ ರೈತ ಮಂಜುನಾಥ್‌ ಅವರ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲು ಪರದಾಡಿದ್ದಾರೆ. ಬೇವಿನಹಳ್ಳಿಯ ಪಾಪನಾಯ್ಕ, ಪುಟ್ಟನಾಯ್ಕ, ಪಾಪನಾಯ್ಕ, ಸಣ್ಣನಾಯ್ಕ ಅವರ ಭತ್ತ, ಜೋಳ, ತೆಂಗಿನತೋಟಕ್ಕೆ ನೀರು ನುಗ್ಗಿ ಜೋಳದ ಬೆಳೆ ಕೊಚ್ಚಿ ಹೋಗಿದೆ. ಸಾಕಷ್ಟು ರೈತರ ಪಂಪ್ ಸೆಟ್, ಪಂಪ್‌ಸೆಟ್ ಮನೆಗಳು ಹಾಳಾಗಿವೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಹೇಮಾವತಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಕಿಕ್ಕೇರಿ ಸಮೀಪದ ಮಂದಗೆರೆ ಬಳಿ ರೈತರ ಜಮೀನುಗಳಿಗೆ ನೀರು ನುಗ್ಗಿ ಕೃಷಿ ಬದುಕು ದುಸ್ತರವಾಗಿದೆ.

ಹೇಮಾವತಿ ನದಿಗೆ ಹೆಚ್ಚಿನ ಹೊರಹರಿವು ಇರುವುದರಿಂದ ನದಿ ಪಾತ್ರದ ಜಮೀನುಗಳಿಗೆ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿ ನೂರಾರು ಎಕರೆಯಲ್ಲಿ ಬೆಳೆದಿದ್ದ ಬೆಳೆಗಳು ಹಾನಿಯಾಗಿ ರೈತರಿಗೆ ಅಪಾರ ನಷ್ಟವಾಗಿದೆ.

ಹೇಮೆ ಉಕ್ಕಿ ನೆರೆ ಬಂದರೆ ಮಂದಗೆರೆ, ಮಾದಾಪುರ, ಕಡಹೆಮ್ಮಿಗೆ ಹಾಗೂ ಸುತ್ತಮುತ್ತಲ ನದಿ ಪಾತ್ರದ ಜನತೆಗೆ ಆತಂಕ ಎದುರಾಗಿದೆ. ನೆರೆ ಹಾವಳಿಗೆ ಕೃಷಿ ಭೂಮಿ ಮುಳುಗಿದೆ. ಜಮೀನು ತುಂಬಾ ಹೇಮೆ ಕಸಕಡ್ಡಿಗಳ ಹೊರೆಯನ್ನು ಭಾರೀ ಪ್ರಮಾಣದಲ್ಲಿ ತಂದು ಹಾಕಿದೆ. ಇದರಿಂದ ರೈತರ ಕೃಷಿ ಬದುಕು ದುಸ್ತರವಾಗಿದೆ.

ಚಿಕ್ಕಮಂದಗೆರೆಯ ಮಂಜುನಾಥ್‌ ಅವರ ತೋಟಕ್ಕೆ ನೀರು ನುಗ್ಗಿರುವುದಲ್ಲದೆ ಇವರ ಮನೆಯ ಕೊಟ್ಟಿಗೆ ಅರ್ಧ ಭಾಗ ಮುಳುಗಡೆಯಾಗಿದೆ. ರಾತ್ರಿಯಾದ ಕಾರಣ ರೈತ ಮಂಜುನಾಥ್‌ ಅವರ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲು ಪರದಾಡಿದ್ದಾರೆ.

ಬೇವಿನಹಳ್ಳಿಯ ಪಾಪನಾಯ್ಕ, ಪುಟ್ಟನಾಯ್ಕ, ಪಾಪನಾಯ್ಕ, ಸಣ್ಣನಾಯ್ಕ ಅವರ ಭತ್ತ, ಜೋಳ, ತೆಂಗಿನತೋಟಕ್ಕೆ ನೀರು ನುಗ್ಗಿ ಜೋಳದ ಬೆಳೆ ಕೊಚ್ಚಿ ಹೋಗಿದೆ. ಸಾಕಷ್ಟು ರೈತರ ಪಂಪ್ ಸೆಟ್, ಪಂಪ್‌ಸೆಟ್ ಮನೆಗಳು ಹಾಳಾಗಿವೆ.

ಹಳೆಮಾದಾಪುರದ ರಾಮಲಿಂಗೇಶ್ವರ ದೇವಸ್ಥಾನದ ಮೆಟ್ಟಲಿನ ಪಾದದವರಿಗೆ ಹೇಮೆ ನೀರು ಆವರಿಸಿದೆ. ಪವಿತ್ರ ಗೋವಿನಕಲ್ಲು ಸಂಪೂರ್ಣ ಮುಳುಗಡೆಯಾಗಿದೆ. ಮಾದಾಪುರದ ಸನ್ಯಾಸಿ ಮಂಟಪ ಮುಳುಗಿದ್ದು, ನದಿಪಾತ್ರದ ರೈತರು ಜಮೀನುಗಳಿಗೆ ತೆರಳಲು ಪರದಾಡಿದರು.

ನಾಲ್ಕೈದು ದಿನಗಳ ಹಿಂದೆ ಬೇವಿನಹಳ್ಳಿ ಅಂಕನಾಥೇಶ್ವರದ ದೇಗುಲದ ಮೆಟ್ಟಿಲಿನವರಿಗೆ ನುಗ್ಗಿದ ಹೇಮೆ ಈ ಬಾರಿ ದೇಗುಲದ ಅರ್ಧ ಭಾಗ ಸುತ್ತುವರಿದಿದೆ. ದೇಗುಲದ ಪಕ್ಕದ ತೋಟದಲ್ಲಿದ್ದ ಮೇವಿನ ಜೋಳದ ಜಮೀನಿಗೆ ನೀರು ನುಗ್ಗಿ ಕೊಚ್ಚಿಕೊಂಡು ಹೋಗಿವೆ.

ದಬ್ಬೇಘಟ್ಟ ಎಲ್ಲೆಯ ಬೋಜೇಗೌಡರ ಅಡಿಕೆ ತೋಟಕ್ಕೆ ನೀರು ನುಗ್ಗಿ ಅಡಿಕೆ ಸಸಿಗಳಿಗೆ ಹಾನಿಯಾಗಿವೆ. ಚಿಕ್ಕಮಂದಗೆರೆಯ ರೈತ ಗುಂಡ, ಪಟೇಲರ ಶಿವಣ್ಣ, ಕುಮಾರ್, ಮಂಜು, ಮೊಗಣ್ಣಗೌಡ, ಮಂಜೇಗೌಡ, ಹೊನ್ನೇಗೌಡ, ರಾಮಚಂದ್ರ, ಬಸವೇಗೌಡ, ಬೋರೇಗೌಡ, ಮಹದೇವಯ್ಯನ ಮಂಜು, ಚಂದ್ರಶೇಖರ್, ಧರಣಿ, ಕೆಂಪೇಗೌಡ, ನಂಜೇಗೌಡ ಅವರ ಕಬ್ಬು, ತೆಂಗು, ಅಡಿಕೆ ತೋಟಗಳಿಗೆ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿದೆ.

ಕಡಹೆಮ್ಮಿಗೆ ನದಿಪಾತ್ರದಲ್ಲಿ ಸಾಕಷ್ಟು ರೈತರು ಶುಂಠಿ ಬೇಸಾಯ ಮಾಡಿದ್ದು ದಿಢೀರನೆ ನುಗ್ಗಿದ ನೀರಿನಿಂದ ಭಾರೀ ಹಾನಿಯಾಗಿದೆ.

ಮಂದಗೆರೆ ಬಳಿಯ ಕುರಾವು(ದ್ವೀಪ) ಸುತ್ತ ಹೇಮೆ ಸುತ್ತುವರಿದಿದೆ. ಈ ಸ್ಥಳದಲ್ಲಿ ವಾಸವಾಗಿದ್ದ ನಾಲ್ಕೈದು ಕುಟುಂಬಗಳು ಹೇಮಾವತಿ ನದಿ ನೀರು ಹೆಚ್ಚುವ ಕಾರಣ ಮುಂಜಾಗ್ರತೆಯಾಗಿ ನದಿ ಗಡ್ಡೆ ಪ್ರದೇಶದಿಂದ ಹೊರಗಡೆ ಸುರಕ್ಷಿತ ಪ್ರದೇಶಕ್ಕೆ ತೆರಳಿದ್ದಾರೆ.

ಕಂದಾಯ ಇಲಾಖೆ, ಗ್ರಾಪಂ ಅಧಿಕಾರಿಗಳು, ಪೊಲೀಸ್‌ ಇಲಾಖೆಯವರು ನದಿಪಾತ್ರದ ಜನರಿಗೆ ನದಿಯಲ್ಲಿ ಇಳಿಯದಂತೆ ಸುರಕ್ಷಿತ ಸ್ಥಳಕ್ಕೆ ತೆರಳಲು ಕಟ್ಟೆಚ್ಚರಿಕೆ ನೀಡುತ್ತಿದ್ದಾರೆ.