ಪಂಚಮಿತ್ರ ವಾಟ್ಸಪ್‌ ಪ್ರಚಾರ ಸಾಮಗ್ರಿಗಳ ಬಿಡುಗಡೆ

| Published : Mar 05 2024, 01:30 AM IST

ಸಾರಾಂಶ

ಪಂಚಾಯಿತಿಗಳಿಗೆ ಸಂಬಂಧಿಸಿದ ಎಲ್ಲ ಬಗೆಯ ಕುಂದುಕೊರತೆಗಳ ದಾಖಲಿಸಿ ನಿವಾರಣೆ ಪಡೆಯಲು ಯಾವುದೇ ನಿರ್ದಿಷ್ಟವಾದ ವೆಬ್ ಸೈಟ್ ಅಥವಾ ಪೋರ್ಟಲ್‌ಗಳು ಇರಲಿಲ್ಲ. ಈ ಸಮಸ್ಯೆ ನೀಗಿಸಲು ಮತ್ತು ಗ್ರಾಪಂ ಆಡಳಿತವನ್ನು ಜನಸ್ನೇಹಿಗೊಳಿಸಲು ರಾಜ್ಯ ಸರ್ಕಾರ ಪಂಚಮಿತ್ರ ಪರಿಚಯಿಸಿ ಅನುಷ್ಠಾನಕ್ಕೆ ತಂದಿದೆ ಎಂದು ವಿಜಯಕುಮಾರ ಆಜೂರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ಗ್ರಾಮೀಣ ವಾಸಿಗಳು, ಸಾರ್ವಜನಿಕರು ತಮ್ಮ ಸಮಸ್ಯೆಗಳಿಗೆ ಕಿವಿಯಾಗಲು ರಾಜ್ಯ ಸರ್ಕಾರ ಇತ್ತೀಚೆಗೆ ಪಂಚಮಿತ್ರ ಹೊಸ ಪೊರ್ಟಲ್ ವಾಟ್ಸಪ್‌ ಆಪ್ ಬಿಡುಗಡೆ ಮಾಡಿದೆ. ಜಿಪಂ ಸಭಾಂಗಣದಲ್ಲಿ ಸೋಮವಾರ ಪಂಚಮಿತ್ರ ಕುರಿತ ಪೋಸ್ಟರ್, ಬ್ಯಾನರ್ ಪ್ರಚಾರ ಸಾಮಗ್ರಿಗಳನ್ನು ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ ಬಿಡುಗಡೆ ಮಾಡಿದರು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿರುವ ವಿವಿಧ ಇಲಾಖೆಗಳ ಸುಮಾರು 89 ಸೇವೆಗಳನ್ನು ನೀಡುವ ಮತ್ತು ಜನರ ಕುಂದುಕೊರತೆಗಳನ್ನು ಜನರು ಪಂಚಮಿತ್ರ ವಾಟ್ಸ್ಆ್ಯಪ್ ಮೂಲಕ ದಾಖಲಿಸಿ, ಪರಿಹಾರ ಪಡೆಯುವ ವಿನೂತನ ಪ್ರಯತ್ನವಿದು. ಸಾರ್ವಜನಿಕರು ತಮಗೆ ಅವಶ್ಯವಿರುವ ಗ್ರಾಪಂಗಳಲ್ಲಿನ ವಿವಿಧ ಮಾಹಿತಿಯ ವಿವರಗಳನ್ನು ಪಡೆಯಲು ಹಾಗೂ ಸೇವೆಗಳಿಗೆ ಅರ್ಜಿ ಸಲ್ಲಿಸಲು ಹಲವಾರು ವೆಬ್ ಸೈಟ್ ಮತ್ತು ಪೋರ್ಟಲ್ ಗಳಿಗೆ ಭೇಟಿ ನೀಡಬೇಕಿತ್ತು. ಗ್ರಾಮ ಪಂಚಾಯಿತಿಗಳಿಗೆ ಸಂಬಂಧಿಸಿದ ಎಲ್ಲ ಬಗೆಯ ಕುಂದುಕೊರತೆಗಳ ದಾಖಲಿಸಿ ನಿವಾರಣೆ ಪಡೆಯಲು ಯಾವುದೇ ನಿರ್ದಿಷ್ಟವಾದ ವೆಬ್ ಸೈಟ್ ಅಥವಾ ಪೋರ್ಟಲ್‌ಗಳು ಇರಲಿಲ್ಲ. ಈ ಸಮಸ್ಯೆ ನೀಗಿಸಲು ಮತ್ತು ಗ್ರಾಪಂ ಆಡಳಿತವನ್ನು ಜನಸ್ನೇಹಿಗೊಳಿಸಲು ರಾಜ್ಯ ಸರ್ಕಾರ ಪಂಚಮಿತ್ರ ಪರಿಚಯಿಸಿ ಅನುಷ್ಠಾನಕ್ಕೆ ತಂದಿದೆ ಎಂದು ವಿಜಯಕುಮಾರ ಆಜೂರ ತಿಳಿಸಿದರು.

ಗ್ರಾಮೀಣ ಜನರ ಅಹವಾಲು, ಅಗತ್ಯ ಮಾಹಿತಿಗಳಿಗೆ ಪಂಚಮಿತ್ರ ಹೊಸ ವೇದಿಕೆ. ಪ್ರತಿ ಗ್ರಾಮ ಪಂಚಾಯತ್, ಗ್ರಾಮ ಚಾವಡಿ ಮತ್ತು ಗ್ರಾಮದ ಜನಸಂದಣಿ ಸೇರುವ ಸ್ಥಳಗಳಲ್ಲಿ ಪಂಚಮಿತ್ರ ಪರಿಚಯಿಸುವ ಪ್ರಚಾರ ಸಾಮಗ್ರಿಗಳನ್ನು ಅಂಟಿಸಬೇಕು. ಗ್ರಾಮದಲ್ಲಿ ಜರುಗುವ ಕಾರ್ಯಕ್ರಮಗಳಲ್ಲಿ, ಗ್ರಾಪಂ ಸಭೆಗಳಲ್ಲಿ ಪಂಚಮಿತ್ರದ ಬಳಕೆಯ ಉಪಯುಕ್ತತೆ, ಲಾಭಗಳ ಕುರಿತು ಜನರಲ್ಲಿ ಅರಿವು ಮೂಡಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ರಾಜ್ಯ ಸರ್ಕಾರದ ನೆರವಿನಲ್ಲಿ ಜಿಲ್ಲೆಯ 146 ಗ್ರಾಪಂಗಳನ್ನು ಸಂಪೂರ್ಣ ಡಿಜಿಟಲೀಕರಣ ಮಾಡುವತ್ತ ಜಿಲ್ಲಾ ಪಂಚಾಯತ ಹೆಜ್ಜೆ ಇಟ್ಟಿದೆ. ಆದ್ದರಿಂದ ಇನ್ಮುಂದೆ ಸಾರ್ವಜನಿಕರು ಗ್ರಾಮೀಣಾಭಿವೃದ್ಧಿ ಸೇರಿದಂತೆ ಇತರೆ ಇಲಾಖೆಗಳ ಆಯ್ದ ಸೇವೆಗಳನ್ನು ವಾಟ್ಸ್‌ ಆ್ಯಪ್ ಚಾಟ್ ಸೇವೆ ಮೂಲಕವೇ ಪಡೆಯಲು ಅವಕಾಶವಿದೆ. ಇದರೊಂದಿಗೆ ಎಲ್ಲ ಗ್ರಾಮ ಪಂಚಾಯಿತಿಗಳ ಎಲ್ಲ ಸಭೆಗಳ ವೆಬ್ ಕಾಸ್ಟಿಂಗ್ ಆಗಲಿದ್ದು, ಜನರು ನೇರವಾಗಿ ವೀಕ್ಷಿಸಲು ಅವಕಾಶವಾಗಲಿದೆ. ಗ್ರಾಮಸ್ಥರು ಸಲ್ಲಿಸಿದ ಅರ್ಜಿಗಳ ಸ್ಥಿತಿಗತಿಯನ್ನು ಪರಿಶೀಲಿಸಲು ಹಾಗೂ ಗ್ರಾಪಂ ಸಂಬಂಧಿಸಿದ ಕುಂದುಕೊರತೆಗಳನ್ನು ದಾಖಲಿಸಲು ಪಂಚಮಿತ್ರ ಪರಿಣಾಮಕಾರಿ ಸಾಧನವಾಗಿದ್ದು, ವಾಟ್ಸ್ಆ್ಯಪ್ ಚಾಟ್‌ಗೆ 8277506000 ಸಂಪರ್ಕಿಸಬಹುದು ಎಂದರು.

ಯೋಜನಾ ನಿರ್ದೇಶಕ ಬಸವರಾಜ ಹೆಗ್ಗಾನಾಯಕ, ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳ ಮತ್ತು ಜಿಲ್ಲಾ ಕೈಗಾರಿಕೆ ಕೇಂದ್ರದ ಉಪನಿರ್ದೇಶಕ ಡಾ.ಭೀಮಪ್ಪ ಎಂ.ಎನ್. ಇದ್ದರು.