ರೈತರು ಕರ್ನಾಟಕ ರಾಜ್ಯ ಸರ್ಕಾರ ಮಾರಾಟ ಮಹಾಮಂಡಳ ಎದುರು ಜು. 14ರಿಂದ ಆಹೋರಾತ್ರಿ ಧರಣಿ ನಡೆಸುತ್ತಿದ್ದರೂ ಜಿಲ್ಲಾಡಳಿತ, ಸರ್ಕಾರ ಸ್ಪಂದಿಸುತ್ತಿಲ್ಲ.
ಹುಬ್ಬಳ್ಳಿ:
ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲಾಗಿದ್ದ ಹೆಸರು ಕಾಳನ್ನು ತಿಂಗಳ ಬಳಿಕ ನಿರಾಕರಿಸಿ ಖರೀದಿ ಕೇಂದ್ರಗಳಿಗೆ ಹಿಂತಿರುಗಿಸಿದೆ. ಬಳಿಕ ಹಣವನ್ನು ನೀಡಿಲ್ಲ. ಹೀಗಾಗಿ ನೀವು ಮಧ್ಯಪ್ರವೇಶಿಸಿ ಅಧಿಕಾರಿಗಳಿಗೆ ಹಣ ನೀಡುವಂತೆ ಸೂಚಿಸಬೇಕೆಂದು ರೈತ ಸೇನಾ ಕರ್ನಾಟಕ ನೇತೃತ್ವದಲ್ಲಿ ನೂರಾರು ರೈತರು ಸೋಮವಾರ ನಗರದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಚೇರಿಗೆ ಆಗಮಿಸಿ ಸಚಿವರ ಆಪ್ತಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.ರೈತರು ಕರ್ನಾಟಕ ರಾಜ್ಯ ಸರ್ಕಾರ ಮಾರಾಟ ಮಹಾಮಂಡಳ ಎದುರು ಜು. 14ರಿಂದ ಆಹೋರಾತ್ರಿ ಧರಣಿ ನಡೆಸುತ್ತಿದ್ದರೂ ಜಿಲ್ಲಾಡಳಿತ, ಸರ್ಕಾರ ಸ್ಪಂದಿಸುತ್ತಿಲ್ಲ. ಗುಣಮಟ್ಟದ ನೆಪದಲ್ಲಿ ಗೋದಾಮಿನಲ್ಲಿಟ್ಟಿರುವ ಹೆಸರು ಕಾಳುಗಳನ್ನು ಖರೀದಿಸಲು ಕೂಡಲೇ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಚಿವರು ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಸರ್ಕಾರದ ಗಮನಕ್ಕೆ ತಂದು, ಕಷ್ಟದಲ್ಲಿರುವ ರೈತರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು. ಸರ್ಕಾರ ಹಾಗೂ ಜಿಲ್ಲಾಡಳಿತ ಇದೇ ರೀತಿಯಲ್ಲಿ ನಿರ್ಲಕ್ಷ್ಯ ವಹಿಸಿದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಈ ವೇಳೆ ರಾಜ್ಯ ವಕ್ತಾರ ಗುರು ರಾಯನಗೌಡರ, ಮಲ್ಲಣ್ಣ ಆಲೇಕಲ್, ವಿರೂಪಾಕ್ಷ ಪಾಯಣ್ಣವರ, ಶಂಕರಪ್ಪ ಸ್ವಾದಿ, ಅಶೋಕ ಮತ್ತಿಹಳ್ಳಿ, ಬಸವರಾಜ ಪೂಜಾರ, ರಾಮನಗೌಡ ಹುಯಿಲಗೋಳ, ಜಗದೀಶ ರೂಗಿ, ಅಶೋಕ ನವಲೂರ, ಬಸವರಾಜ ಗಿಡ್ಡನವರ, ಗುಡುಸಾಬ ಕವಳಿಕಾಯಿ, ನಿಂಗಮ್ಮ ನೂಲ್ವಿ, ಕಲ್ಲಪ್ಪ ಒಂಟಿ ಸೇರಿದಂತೆ ಹಲವರಿದ್ದರು.14ನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಧರಣಿ
ಖರೀದಿಸಿದ ಹೆಸರು ಬೆಳೆಗೆ ಹಣ ನೀಡುವಂತೆ ಒತ್ತಾಯಿಸಿ ಬ್ಯಾಹಟ್ಟಿ, ಕುಸುಗಲ್ಲ, ಸುಳ್ಳ, ಕಿರೇಸೂರ, ಅಮರಗೋಳ ಗ್ರಾಮದ ನೂರಾರು ರೈತರು ಜು. 14ರಿಂದ ಹುಬ್ಬಳ್ಳಿ ವಿಕಾಸ ನಗರದಲ್ಲಿರುವ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಕಚೇರಿ ಎದುರು ನಡೆಸುತ್ತಿರುವ ಅಹೋರಾತ್ರಿ ಧರಣಿ 14ನೇ ದಿನಕ್ಕೆ ಕಾಲಿಟ್ಟಿದ್ದು, ಧರಣಿ ಮುಂದುವರಿದಿದೆ.