ಸಾರಾಂಶ
ಹುಬ್ಬಳ್ಳಿ: ಕಾಂಗ್ರೆಸ್ ಶಾಸಕರಿಗೆ ₹ 100 ಕೋಟಿ ಆಫರ್ ಕೊಟ್ಟಿದ್ದಾರೆ ಎಂಬ ಆರೋಪಕ್ಕೆ ಕಿಡಿಕಾರಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮೊದಲು ದಾಖಲೆ ಬಿಡುಗಡೆ ಮಾಡಿ ಎಂದು ಸವಾಲೆಸೆದಿದ್ದಾರೆ. ಕಳೆದ ಬಾರಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರಬಾರದು ಎಂಬ ಉದ್ದೇಶದಿಂದ ಕಾಂಗ್ರೆಸ್ ಶಾಸಕರನ್ನು ಕಳುಹಿಸಿದ್ದೇ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಬಾಂಬ್ ಸಿಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಅಷ್ಟು ಆಫರ್ ಕೊಟ್ಟಿದ್ದಾರೆ. ಇಷ್ಟು ಆಫರ್ ಕೊಟ್ಟಿದ್ದಾರೆ ಎಂದು ಬರೀ ಬಾಯಿ ಮಾತಲ್ಲಿ ಹೇಳಬೇಡಿ. ₹ 100 ಕೋಟಿ ಇರಲಿ, ₹ 500 ಕೋಟಿ ಆಫರ್ ಇರಲಿ. ದಾಖಲೆ ಇದ್ದರೆ ಬಿಡುಗಡೆ ಮಾಡಿ. ಯಾವ ಬಿಜೆಪಿ ನಾಯಕರು ಆಫರ್ ಕೊಟ್ಟಿದ್ದಾರೆ ಎಂಬುದನ್ನು ಬಹಿರಂಗಪಡಿಸಿ. ಶಾಸಕ ರವಿ ಗಾಣಿಗ ಆವತ್ತಿನಿಂದ ಹೇಳುತ್ತಿದ್ದಾರೆ. ಆದರೆ, ಇನ್ನು ಏಕೆ ದಾಖಲೆ ಬಿಡುಗಡೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಶಾಸಕರಿಗೆ ಯಾರೂ ₹ 50 ಕೋಟಿ, ₹ 100 ಕೋಟಿ, ₹ 500 ಕೋಟಿ ಆಫರ್ ಎಂದೆಲ್ಲಾ ಮಾತನಾಡಿದ್ದಾರೋ ಅವರ ಮೇಲೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಜೋಶಿ ಸ್ಪಷ್ಟಪಡಿಸಿದರು.
ಶಾಸಕರನ್ನು ಕಳುಹಿಸಿದ್ದೇ ಸಿದ್ದು:
ಈ ಹಿಂದೆ ಬಿಜೆಪಿ ಸರ್ಕಾರ ರಚಿಸುವಾಗ ಇದೇ ಸಿದ್ದರಾಮಯ್ಯ ಅವರೇ ತಮ್ಮ ಆಪ್ತ ಶಾಸಕರನ್ನು ಬಿಜೆಪಿಗೆ ಕಳುಹಿಸಿದ್ದರು ಎಂದ ಜೋಶಿ, ಸಿದ್ದರಾಮಯ್ಯ ಅವರಿಗೆ ಜೆಡಿಎಸ್ ಜತೆ ಸರ್ಕಾರ ರಚನೆ ಇಷ್ಟವಿರಲಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರಬಾರದು ಎಂಬ ಉದ್ದೇಶದಿಂದ ತಾವೇ ಮುಂದೆ ನಿಂತು ಕೆಲ ಕಾಂಗ್ರೆಸ್ ಶಾಸಕರನ್ನು ಬಿಜೆಪಿಗೆ ಕಳುಹಿಸಿದ್ದರು. ಕಳೆದ ಬಾರಿ ಅಪರೇಷನ್ ಕಮಲ ನಡೆಸಲು ಕಾರಣ ರಾಜ್ಯದಲ್ಲಿ ಅತಂತ್ರ ಸ್ಥಿತಿಯತ್ತು. ಆದರೆ, ಈಗ ಪರಿಸ್ಥಿತಿ ಹಾಗಿಲ್ಲ. ಜನ ಕಾಂಗ್ರೆಸ್‌ಗೆ ಬಹುಮತದ ಅಧಿಕಾರ ಕೊಟ್ಟಿದ್ದಾರೆ. ಹಾಗಿದ್ದಾಗ ನಾವೇಕೆ ಮೂಗು ತೂರಿಸೋಣ? ಎಂದು ಹೇಳಿದರು.
ರಾಜ್ಯದಲ್ಲಿ 5 ವರ್ಷ ವಿರೋಧ ಪಕ್ಷ ಸ್ಥಾನದಲ್ಲಿ ಇರಲು ಬಿಜೆಪಿ ಸ್ಪಷ್ಟ ನಿಲುವು ತೋರಿದೆ. ವಿಪಕ್ಷದಲ್ಲಿದ್ದು ಜನಪರವಾಗಿ ರಚನಾತ್ಮಕ ಕಾರ್ಯ ಕೈಗೊಳ್ಳುವಂತೆ ನಮ್ಮ ಹೈಕಮಾಂಡ್ ಸಹ ರಾಜ್ಯ ನಾಯಕರಿಗೆ ನಿರ್ದೇಶನ ನೀಡಿದೆ ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ನಾವು ಉರುಳಿಸುವುದೂ ಇಲ್ಲ. ಮತ್ತೆ ಅಪರೇಷನ್ ಕಮಲ ನಡೆಸುವುದೂ ಇಲ್ಲ. ಕಾಂಗ್ರೆಸ್ ನವರು ತಮ್ಮ ಹುಳುಕು ಮುಚ್ಚಿಕೊಳ್ಳಲು ಮಾಡುತ್ತಿರುವ ಷಡ್ಯಂತ್ರ ಇದು ಎಂದು ಆರೋಪಿಸಿದರು.
ಹಗರಣಗಳಲ್ಲಿ ಸಿಲುಕಿರುವ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಕೋರ್ಟ್ ಸ್ಪಷ್ಟ ತೀರ್ಪು ನೀಡಿದೆ. ಅದರಂತೆ ಲೋಕಾಯುಕ್ತ ವಿಚಾರಣೆ ನಡೆದಿದೆ. ಇದನ್ನೆಲ್ಲ ಡೈವರ್ಟ್ ಮಾಡಲು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ಸಿಗರು ಹೀಗೆ ಅಸಂಬದ್ಧವಾಗಿ ಮಾತನಾಡುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ ವಿರುದ್ಧದ ತನಿಖೆ ಆದೇಶಕ್ಕೆ ಕೋರ್ಟ್‌ನಿಂದ ತಡೆಯಾಜ್ಞೆ ಸಿಕ್ಕಿಲ್ಲ. ನಿಮ್ಮ ವಿರುದ್ಧವೇ ಕೋರ್ಟ್ ಕೇಸ್ ಇದೆ. ಅಂಥದ್ದರಲ್ಲಿ ಮತ್ತೊಬ್ಬರ ಬಗ್ಗೆ ಮಾತನಾಡುತ್ತೀರಿ. ಮೊದಲು ನೀವು ಶುದ್ಧರಾಗಿ ಎಂದು ಜೋಶಿ ಟಾಂಗ್ ಕೊಟ್ಟರು.