ಬೇಸಿಗೆ ಹಂಗಾಮಿಗೆ ಭದ್ರಾ ಡ್ಯಾಂನಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವ ವೇಳೆ ಪಟ್ಟಿ ಪ್ರಕಟಿಸುವಂತೆ, ಕಾಲುವೆಗಳಲ್ಲಿ ಬೆಳೆದ ಕಳೆಗಿಡಗಳನ್ನು ತೆರವುಗೊಳಿಸಿ, ದುರಸ್ತಿ ಕಾರ್ಯ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾ ರೈತರ ಒಕ್ಕೂಟದ ನೇತೃತ್ವದಲ್ಲಿ ಅಚ್ಚುಕಟ್ಟು ರೈತರು ನಗರದಲ್ಲಿ ಶುಕ್ರವಾರ ಪ್ರತಿಭಟಿಸಿದ್ದಾರೆ.

- ಕಾಲುವೆಯಲ್ಲಿನ ಕಳೆ ಗಿಡಗಳನ್ನು ತೆರವುಗೊಳಿಸಿ ಹೂಳೆತ್ತಿಸಿ, ದುರಸ್ತಿ ಕಾರ್ಯ ಕೈಗೊಳ್ಳಿ: ಜಿಲ್ಲಾ ರೈತರ ಒಕ್ಕೂಟ

- ನೀರಾವರಿ ಸಲಹಾ ಸಮಿತಿ ಸಭೆ ಕರೆದು ಜ.1ರಿಂದ ಸತತ 120 ದಿನ ನೀರು ಹರಿಸಲು ತೀರ್ಮಾನಿಸಲು ಮನವಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಬೇಸಿಗೆ ಹಂಗಾಮಿಗೆ ಭದ್ರಾ ಡ್ಯಾಂನಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವ ವೇಳೆ ಪಟ್ಟಿ ಪ್ರಕಟಿಸುವಂತೆ, ಕಾಲುವೆಗಳಲ್ಲಿ ಬೆಳೆದ ಕಳೆಗಿಡಗಳನ್ನು ತೆರವುಗೊಳಿಸಿ, ದುರಸ್ತಿ ಕಾರ್ಯ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾ ರೈತರ ಒಕ್ಕೂಟದ ನೇತೃತ್ವದಲ್ಲಿ ಅಚ್ಚುಕಟ್ಟು ರೈತರು ನಗರದಲ್ಲಿ ಶುಕ್ರವಾರ ಪ್ರತಿಭಟಿಸಿದರು.

ನಗರದ ಜಿಲ್ಲಾಡಳಿತ ಭವನದ ಎದುರು ಒಕ್ಕೂಟ ಜಿಲ್ಲಾಧ್ಯಕ್ಷ ಬಿ.ಎಂ. ಸತೀಶ ಕೊಳೇನಹಳ್ಳಿ, ಬಿಜೆಪಿ ರೈಜ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ ಇತರರ ನೇತೃತ್ವದಲ್ಲಿ ಪ್ರತಿಭಟಿಸಿದ ಅಚ್ಚುಕಟ್ಟು ರೈತರು ನಂತರ ಅಪರ ಜಿಲ್ಲಾಧಿಕಾರಿ ಶೀಲವಂತರ ಶಿವಕುಮಾರ ಮುಖಾಂತರ ಸರ್ಕಾರಕ್ಕೆ ಮನವಿ ಅರ್ಪಿಸಿದರು.

ರೈತ ಮುಖಂಡರು ಈ ವೇಳೆ ಮಾತನಾಡಿ, ಭೀಕರ ಬರದಿಂದ ತತ್ತರಿಸಿದ ಜಿಲ್ಲೆಯ ರೈತರು ಕಳೆದ ವಾರ ಸ್ವಾತಿ ಮಳೆಯಿಂದಾಗಿ ಒಂದಿಷ್ಟು ನೆಮ್ಮದಿಯಾಗಿದ್ದಾದರೆ. ಭದ್ರಾ ಡ್ಯಾಂನಲ್ಲಿ 173 ಅಡಿ ನೀರು ಸಂಗ್ರಹವಿದ್ದು, ಬೇಸಿಗೆ ಹಂಗಾಮಿನ ಬೆಳೆಗೆ ನೀರು ಹರಿಸಬೇಕು. ನೀರು ಹರಿಸುವ ವೇಳಾಪಟ್ಟಿಯನ್ನು ಮುಂಚೆಯೇ ಪ್ರಕಟಿಸಿದರೆ ರೈತರು ನೀರಿನ ಸೌಲಭ್ಯವಿರುವ ಕಡೆ ಬತ್ತದ ಬೀಜ ಚೆಲ್ಲಿಕೊಂಡು, ಸಸಿ ಮಡಿ ಮಾಡಿಕೊಳ್ಳುತ್ತಾರೆ. ನಾಲೆಗೆ ನೀರು ತಲುಪಿದಾಗ ನಾಟಿ ಮಾಡಿಕೊಳ್ಳುತ್ತಾರೆ ಎಂದರು.

ಭದ್ರಾ ಡ್ಯಾಂನಿಂದ ನಾಲೆಗೆ ನೀರು ಬಿಡುವ ವೇಳಾಪಟ್ಟಿ ಮುಂಚೆಯೇ ಪ್ರಕಟಿಸಿದರೆ ರೈತರ ನಡುವೆ ನೀರು ಹಾಯಿಸುವ ಪೈಪೋಟಿ ತಪ್ಪುತ್ತದೆ. ಕೊನೆಯ ಭಾಗಕ್ಕೆ ಸಮರ್ಪಕವಾಗಿ ನೀರು ತಲುಪಲು ಅನುಕೂಲ ಆಗುತ್ತದೆ. ನೀರಾವರಿ ಸಲಹಾ ಸಮಿತಿ (ಐಸಿಸಿ) ತಕ್ಷಣವೇ ಸಭೆ ಕರೆದು, ಜ.1ರಿಂದ ಸತತವಾಗಿ 120 ದಿನ ನಾಲೆಗೆ ನೀರು ಹರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಬೇಕು. ಕಾಲುವೆಗಳ ಉದ್ದಕ್ಕೂ ಮುಳ್ಳು ಗಿಡಗಳು ಬೆಳೆದಿದ್ದು, ಮಣ್ಣು, ಕಲ್ಲು ಇತರೆ ತ್ಯಾಜ್ಯ ತುಂಬಿಕೊಂಡು, ನೀರು ಸರಾಗವಾಗಿ ಹರಿಯದಂತಾಗಿದೆ. ಕೆಲವು ಕಡೆ ನಿರ್ಮಿಸಿರುವ ಸೂಪರ್ ಪ್ಯಾಸೇಜ್ ಒಡೆದು, ನೀರು ಸಹ ವ್ಯರ್ಥವಾಗುತ್ತದೆ. ಉಪ ನಾಲೆ, ತೂಬುಗಳು ನಿರ್ವಹಣೆ ಇಲ್ಲದೇ, ದುಸ್ಥಿತಿ ತಲುಪಿದೆ ಎಂದು ದೂರಿದರು.

ಇದೆಲ್ಲದರ ಪರಿಣಾಮ ಅಚ್ಚುಕಟ್ಟು ಕೊನೆಯ ಭಾಗಕ್ಕೆ ನೀರು ತಲುಪಿಸುವುದು ಸಹಜವಾಗಿ ಕಷ್ಟವಾಗುತ್ತದೆ. ಸದ್ಯ ಕಾಲುವೆಗಳಲ್ಲಿ ನೀರು ಇಲ್ಲ. ಇದು ದುರಸ್ತಿಗೆ ಸೂಕ್ತ ಸಮಯವಾಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಕಾಲುವೆಗಳಲ್ಲಿ ಬೆಳೆದಿರುವ ಕಳೆಗಿಡ, ಮುಳ್ಳು ಗಿಡಗಳು, ಕಲ್ಲು, ಇತರೆ ತ್ಯಾಜ್ಯ ತೆರವುಗೊಳಿಸಿ, ನಾಲೆಗಳ ಸೂಕ್ತ ದುರಸ್ತಿ ಕೈಗೊಳ್ಳಬೇಕು. ಈ ಮೂಲಕ ಡ್ಯಾಂನಿಂದ ಬರುವ ನೀರು ಸರಾಗವಾಗಿ, ರಭಸವಾಗಿ ಅಚ್ಚುಕಟ್ಟು ಕೊನೆಯ ಭಾಗಕ್ಕೂ ಹರಿದು ಹೋಗುವಂತೆ ಸರ್ಕಾರ, ನೀರಾವರಿ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ರೈತ ಮುಖಂಡರಾದ ಬಲ್ಲೂರು ರವಿಕುಮಾರ, ಬಸವರಾಜ ಕಾಡಜ್ಜಿ, ಗೋಪನಾಳ ಎಸ್.ಆರ್.ರಾಜೇಂದ್ರ, ಪರಮೇಶ, ಕುರ್ಕಿ ರೇವಣಸಿದ್ದಪ್ಪ, ಕುಕ್ಕುವಾಡದ ಹರ್ಷಗೌಡ್ರು, ಶಿವಕುಮಾರ ಹಾದಿಮನೆ, ತ್ಯಾವಣಗಿ ಅಜಯ ಪಟೇಲ್, ಗೋಣಿವಾಡ ಎನ್.ಎಂ.ಮಂಜುನಾಥ, ಲೋಕಿಕೆರೆ ಶಂಕರಮೂರ್ತಿ, ಕುಬೇರಪ್ಪ, ಕಂದಗಲ್ಲು ರೇವಣ್ಣ, ಹಾಲೇಶ ಮಾನಂಗಿ, ಶ್ಯಾಗಲೆ ಗುಡದಪ್ಪ, ಹದಡಿ ವಿಜಯ ಬಳೇರ, ಎಚ್.ಎಂ. ಉಮೇಶ, ಮಂಜುನಾಥ ಚಿಟ್ಟಿಕ್ಕಿ, ಕಬ್ಬೂರು ಮಲ್ಲಿಕಾರ್ಜುನ, ಶಿವಕುಮಾರ, ಐಗೂರು ದಿನೇಶ ಗೌಡ್ರು, ಹೂವಿನಮಡು ಶಶಿ, ರವಿಕುಮಾರ ಇತರರು ಇದ್ದರು.

- - -

(ಬಾಕ್ಸ್‌)

* ಪ್ರತಿನಿತ್ಯ ನೀರು ಸಂಗ್ರಹದ ಮಾಹಿತಿ ಒದಗಿಸಲು ಆಗ್ರಹ

ಭದ್ರಾ ಡ್ಯಾಂನ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದಾಗ ಒಳಹರಿವಿನ ಪ್ರಮಾಣ ಹೆಚ್ಚಲಿಲ್ಲ. ಕೇವಲ 400-500 ಕ್ಯುಸೆಕ್ ನೀರು ಬರುತ್ತಿದೆಯೆಂದು ತೋರಿಸಲಾಯಿತು. ಇದರಿಂದ ಏನೋ ನಡೆದಿದೆಯೆಂಬ ಅನುಮಾನ ಕಾಡುತ್ತಿದೆ. ಕದ್ದು ಮುಚ್ಚಿ ಭದ್ರಾ ಮೇಲ್ದಂಡೆಗೆ ಸದ್ದಿಲ್ಲದೇ ಸರ್ಕಾರ ನೀರು ಹರಿಸುತ್ತಿದೆಯೆಂಬ ಸಂಶಯಕ್ಕೆ ರೈತರು ಒಳಗಾಗಿದ್ದಾರೆ. ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರು ಖುದ್ದಾಗಿ ಭದ್ರಾ ಡ್ಯಾಂಗೆ ಭೇಟಿ ನೀಡಿ, ಜಲಾನಯನ ಪ್ರದೇಶದಲ್ಲಿ ಕಳೆದ ವಾರ ಮಳೆ ಸುರಿದಾಗ ಬಂದ ಒಳ ಹರಿವಿನ ಪ್ರಮಾಣದ ಬಗ್ಗೆ, ಪ್ರಸ್ತುತ ನೀರು ಸಂಗ್ರಹದ ಬಗ್ಗೆ ಮಾಧ್ಯಮಗಳ ಮೂಲಕ ಸ್ಪಷ್ಟೀಕರಣ ನೀಡಲಿ. ಪ್ರತಿನಿತ್ಯ ನೀರು ಸಂಗ್ರಹದ ಮಾಹಿತಿ ಒದಗಿಸಲಿ ಎಂದು ಮನವಿ ಮಾಡಿದರು.

- - -

-30ಕೆಡಿವಿಜಿ2:

ದಾವಣಗೆರೆ ಡಿಸಿ ಕಚೇರಿ ಬಳಿ ರೈತರ ಒಕ್ಕೂಟದಿಂದ ಪ್ರತಿಭಟನೆ ನಡೆಸಿ, ಭದ್ರಾ ನಾಲೆಗೆ ನೀರು ಹರಿಸುವಂತೆ ಅಪರ ಡಿಸಿ ಶೀಲವಂತ ಶಿವಕುಮಾರ ಮುಖಾಂತರ ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು.