ತುಂಗಭದ್ರಾ ಎಡದಂಡೆ ಕಾಲುವೆಗೆ ನೀರು ಹರಿಸುವ ಅವಧಿ ಕುರಿತು ಉಂಟಾಗಿರುವ ಗೊಂದಲ ಅಚ್ಚುಕಟ್ಟು ಪ್ರದೇಶದ ರೈತರನ್ನು ಆತಂಕಕ್ಕೀಡು ಮಾಡಿದೆ. ಈಗಾಗಲೇ ಬೆಳೆದಿರುವ ಬೆಳೆಗಳು ರೈತರ ಕೈ ಸೇರಬೇಕಾದರೆ ಕನಿಷ್ಠ ಡಿ. 10ರ ವರೆಗೆ ಕಾಲುವೆಗೆ ನೀರು ಹರಿಸಲೇಬೇಕು. ಇಲ್ಲದಿದ್ದರೆ ಬೆಳೆ ನಷ್ಟಕ್ಕೆ ರಾಜ್ಯ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.
ಕಾರಟಗಿ: ತುಂಗಭದ್ರಾ ಎಡದಂಡೆ ಕಾಲುವೆಗೆ ನೀರು ಹರಿಸುವ ಅವಧಿ ಕುರಿತು ಉಂಟಾಗಿರುವ ಗೊಂದಲ ಅಚ್ಚುಕಟ್ಟು ಪ್ರದೇಶದ ರೈತರನ್ನು ಆತಂಕಕ್ಕೀಡು ಮಾಡಿದೆ. ಈಗಾಗಲೇ ಬೆಳೆದಿರುವ ಬೆಳೆಗಳು ರೈತರ ಕೈ ಸೇರಬೇಕಾದರೆ ಕನಿಷ್ಠ ಡಿ. 10ರ ವರೆಗೆ ಕಾಲುವೆಗೆ ನೀರು ಹರಿಸಲೇಬೇಕು. ಇಲ್ಲದಿದ್ದರೆ ಬೆಳೆ ನಷ್ಟಕ್ಕೆ ರಾಜ್ಯ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.
ತಾಲೂಕಿನ ಯರಡೋಣಾ ಗ್ರಾಮದ ಮೃಡ ಬಸವೇಶ್ವರ ದೇವಸ್ಥಾನದಲ್ಲಿ ಶನಿವಾರ 31ನೇ ವಿತರಣಾ ಕಾಲುವೆ ವ್ಯಾಪ್ತಿಯ 11 ಹಳ್ಳಿಗಳ ರೈತರು ಸಭೆ ನಡೆಸಿ, ನೀರು ಪೂರೈಕೆ ಹಾಗೂ ಬೆಳೆಗಳ ಪ್ರಸ್ತುತ ಸ್ಥಿತಿಗತಿ ಕುರಿತು ಗಂಭೀರ ಚರ್ಚೆ ನಡೆಸಿದರು. ಬೆಳೆ ಸಂಪೂರ್ಣ ಕೈ ಸೇರುವ ವರೆಗೆ ನೀರು ಪೂರೈಕೆ ಮುಂದುವರಿಸದಿದ್ದರೆ ಉಗ್ರ ಹೋರಾಟ ಅನಿವಾರ್ಯವಾಗಲಿದೆ. ಇದಕ್ಕೆ ಎಲ್ಲ ರೈತರು ಸಿದ್ಧರಾಗಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.ಬೆಂಗಳೂರಿನಲ್ಲಿ ನಡೆದ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆಯ ನಿರ್ಣಯದಂತೆ ನ. 20ರ ವರೆಗೆ ನೀರು ಹರಿಸಲು ತೀರ್ಮಾನಿಸಲಾಗಿತ್ತು. ಆದರೆ, ಇದೀಗ ನ. 15ರ ವರೆಗೆ ಮಾತ್ರ ನೀರು ಹರಿಸಲಾಗುತ್ತದೆ ಎಂಬ ಸುದ್ದಿ ಹರಿದಾಡುತ್ತಿರುವುದು ರೈತರಲ್ಲಿ ಗೊಂದಲ ಮೂಡಿಸಿದೆ. ನ. 30ರ ವರೆಗೆ ಮಾತ್ರ ನೀರು ಹರಿಸಿ ಸ್ಥಗಿತಗೊಳಿಸಿದರೂ ರೈತರು ಈಗಾಗಲೇ ಬೆಳೆದಿರುವ ಬೆಳೆಗಳಲ್ಲಿ ಶೇ. 50ರಷ್ಟು ನಷ್ಟ ಉಂಟಾಗುವ ಸಾಧ್ಯತೆಯಿದೆ. ಆದ್ದರಿಂದ ಯಾವುದೇ ರಾಜಕೀಯ ಪಕ್ಷಗಳ ನಿಲುವಿಗೆ ಒಳಗಾಗದೆ ರೈತರ ಹಿತದೃಷ್ಟಿಯಿಂದ ಕನಿಷ್ಠ ಡಿ. 10ರ ವರೆಗೆ ನೀರು ಹರಿಸಬೇಕು ಎಂದು ರೈತರು ಒಕ್ಕೊರಲಿನಿಂದ ಆಗ್ರಹಿಸಿದರು.
ರೈತ ಮುಖಂಡರಾದ ಶರಣೇಗೌಡ ಮಾ.ಪಾಟೀಲ್, ಬಸವರಾಜ ಕಡೇಮನಿ ಹಾಗೂ ಶರಣಪ್ಪ ಸುಗ್ನಳ್ಳಿ ಮಾತನಾಡಿ, ಈ ತಿಂಗಳ ಕೊನೆಯವರೆಗೂ ನೀರು ಹರಿಯುವ ವಿಶ್ವಾಸವಿದೆ. ರೈತರು ಬೆಳೆದ ಬೆಳೆ ಕೈ ಸೇರಲು ನವೆಂಬರ್ ಅಂತ್ಯ ಅಥವಾ ಡಿ. 10ರ ವರೆಗೆ ನೀರು ಅಗತ್ಯವಿದೆ. ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಭರವಸೆ ನೀಡಿದ್ದಾರೆ. ಭರವಸೆ ಈಡೇರದಿದ್ದರೆ ಅನಿವಾರ್ಯವಾಗಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದರು.ನೀರು ಬಳಕೆದಾರರ ಸಂಘದ ಅಧ್ಯಕ್ಷ ಸಂಗಮೇಶಗೌಡ ಹಾಗೂ ದಶರಥರೆಡ್ಡಿ ಚೆನ್ನಳ್ಳಿ ಮಾತನಾಡಿ, ತುಂಗಭದ್ರಾ ಜಲಾಶಯದಲ್ಲಿ ಸುಮಾರು 96 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ಇಷ್ಟೊಂದು ಪ್ರಮಾಣದ ನೀರು ಲಭ್ಯವಿದ್ದರೂ ರೈತರಿಗೆ ಪೂರ್ಣ ಪ್ರಮಾಣದಲ್ಲಿ ಒಂದು ಬೆಳೆ ಬೆಳೆಯಲು ಸಾಧ್ಯವಾಗಿಲ್ಲ. ನೀರಿನ ಲೆಕ್ಕಾಚಾರದಲ್ಲಿಯೇ ಲೋಪವಾಗಿದೆ ಎಂಬುದನ್ನು ರೈತರು ಅರ್ಥಮಾಡಿಕೊಳ್ಳಬೇಕು. ಪ್ರಸ್ತುತ ನ. 20 ನೀರು ಹರಿಸುವ ಕೊನೆಯ ದಿನವೆಂದು ಹೇಳಲಾಗುತ್ತಿದೆ. ಆದರೆ, ಸೂರ್ಯಕಾಂತಿ, ಮೆಕ್ಕೆಜೋಳ ಹಾಗೂ ಹೈಬ್ರಿಡ್ ಜೋಳದ ಬೆಳೆ ಕಟಾವಿಗೆ ಬರಲು ಇನ್ನೂ 30 ದಿನಗಳ ಅಗತ್ಯವಿದೆ. ಹೀಗಾಗಿ ಡಿ. 10ರ ವರೆಗೆ ನೀರು ಹರಿಸಲೇಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ವಿವಿಧ ಗ್ರಾಮಗಳ ರೈತರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು, ಬೆಳೆಗಾರರ ಹಿತ ಕಾಪಾಡಲು ಅಧಿಕಾರಿಗಳು, ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಸಭೆಯ ಬಳಿಕ ರೈತ ಮುಖಂಡರ ನಿಯೋಗವು ನೀರಾವರಿ ಸಲಹಾ ಸಮಿತಿ ಅಧ್ಯಕ್ಷರೂ ಆಗಿರುವ ಸಚಿವ ಶಿವರಾಜ ತಂಗಡಗಿ ಅವರನ್ನು ಭೇಟಿಯಾಗಿ ಸಭೆಯ ನಿರ್ಣಯ ಹಾಗೂ ಬೆಳೆಗಳ ಸ್ಥಿತಿಗತಿ ಕುರಿತು ವಿವರಿಸಿತು. ರೈತರ ಸಮಸ್ಯೆ ಆಲಿಸಿದ ಸಚಿವರು ನೀರು ಹರಿಸುವ ಭರವಸೆ ನೀಡಿದ್ದಾರೆ ಎಂದು ರೈತರು ತಿಳಿಸಿದರು.
ಬೂದುಗುಂಪಾ, ಯರಡೋಣಾ, ತಿಮ್ಮಾಪುರ, ಹಾಲಸಮುದ್ರ, ಉಳೇನೂರು, ಬೆನ್ನೂರು, ಚೆನ್ನಳ್ಳಿ, ಮಾವಿನಮಡ್ಗು, ದೇವಿಕ್ಯಾಂಪ್ ಸೇರಿದಂತೆ ವಿವಿಧ ಗ್ರಾಮಗಳ ರೈತರು ಸಭೆಯಲ್ಲಿ ಪಾಲ್ಗೊಂಡಿದ್ದರು.