ಪೆರೋಲ್ ಮೇಲೆ ಬಿಡುಗಡೆಯಾಗಿದ್ದ ಕೈದಿಯೊಬ್ಬ ತಲೆಮರೆಸಿಕೊಂಡಿರುವ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪೆರೋಲ್ ಮೇಲೆ ಬಿಡುಗಡೆಯಾಗಿದ್ದ ಕೈದಿಯೊಬ್ಬ ತಲೆಮರೆಸಿಕೊಂಡಿರುವ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಕೇಂದ್ರ ಕಾರಾಗೃಹದ ಪ್ರಭಾರ ಅಧೀಕ್ಷಕ ಬಿ.ಆರ್ ಅಂದಾನಿ ಅವರು ನೀಡಿದ ದೂರಿನನ್ವಯ ಹುಸೇನ್ ಅಲಿಯಾಸ್‌ ನಸ್ರುಲ್ (32) ಹಾಗೂ ಜಾಮೀನು ಮುಚ್ಚಳಿಕೆ ನೀಡಿದ್ದ ಗಂಗಯ್ಯ (50) ಮತ್ತು ಡಿ ಕಪ್ಪಣ್ಣ (35) ಎಂಬುವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣವೊಂದರಲ್ಲಿ ಹುಸೇನ್‌ಗೆ ಚಿಕ್ಕಬಳ್ಳಾಪುರದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 2021ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈತ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಕಳೆದ ಏ.21ರಂದು ಹುಸೇನ್‌ಗೆ 60 ದಿನಗಳ ಪೆರೋಲ್ ರಜೆಯ ಮೇಲೆ ಬಿಡುಗಡೆ ಮಾಡಲು ಆದೇಶಿಸಿತ್ತು. ಇದಕ್ಕೆ ಇಬ್ಬರು ಶ್ಯೂರಿಟಿ ಹಾಕಿದ್ದರು. ನ್ಯಾಯಾಲಯದ ಆದೇಶದ ಅನ್ವಯ ಸೆ.10 ರಂದು 60 ದಿನಗಳ ಪೆರೋಲ್ ರಜೆಯ ಮೇಲೆ ಬಿಡುಗಡೆ ಮಾಡಲಾಗಿತ್ತು. ಹುಸೇನ್‌ ನ.8 ರಂದು ಕೇಂದ್ರ ಕಾರಾಗೃಹಕ್ಕೆ ಬಂದು ಶರಣಾಗಬೇಕಾಗಿತ್ತು. ಆದರೆ ಶರಣಾಗದೇ ಆತ ತಲೆಮರೆಸಿಕೊಂಡಿದ್ದಾನೆ. ಆದ್ದರಿಂದ ಶಿಕ್ಷಾ ಬಂದಿ ಹುಸೇನ್‌ ಮತ್ತು ಈತನಿಗೆ ಜಾಮೀನು ಮುಚ್ಚಳಿಕೆಯನ್ನು ನೀಡಿರುವ ಗಂಗಯ್ಯ ಮತ್ತು ಡಿ ಕಪ್ಪಣ್ಣ ಅವರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.