ಮುಳುಗಡೆ ಸಂತ್ರಸ್ತರಿಗೆ ಪರಿಹಾರ ಭರವಸೆ: ರಮೇಶ್‌

| Published : Jul 26 2024, 01:35 AM IST

ಸಾರಾಂಶ

ಜು.23ರಂದು ಬೆಂಗಳೂರಿನಲ್ಲಿ ಸಚಿವದ್ವಯರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಅವರ ನೇತೃತ್ವದಲ್ಲಿ ನಿಯೋಗ ಭೇಟಿ ಮಾಡಿ, ಮುಳುಗಡೆ ಸಂತ್ರಸ್ಥರ ಸಮಸ್ಯೆಗೆ ಸಂಬಂಧಿಸಿದಂತೆ ಚರ್ಚಿಸಲಾಯಿತು ಎಂದು ಕಾಂಗ್ರೆಸ್‌ನ ರಾಜ್ಯ ವಕ್ತಾರ ಬಿ.ಎ.ರಮೇಶ್ ಹೆಗಡೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯ ಅರಣ್ಯ ಭೂಮಿ, ಮುಳುಗಡೆ ಸಂತ್ರಸ್ಥರ ಶತಮಾನದ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಅರಣ್ಯ ಸಚಿವ ಪರಿಹಾರದ ಭರವಸೆಯನ್ನು ನೀಡಿದ್ದಾರೆ ಎಂದು ಕಾಂಗ್ರೆಸ್‌ನ ರಾಜ್ಯ ವಕ್ತಾರ ಬಿ.ಎ.ರಮೇಶ್ ಹೆಗಡೆ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಚಿವರಿಬ್ಬರನ್ನು ಜು.23 ರಂದು ಬೆಂಗಳೂರಿನಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಅವರ ನೇತೃತ್ವದಲ್ಲಿ ನಿಯೋಗ ಭೇಟಿ ಮಾಡಿ, ಶಿವಮೊಗ್ಗ ಜಿಲ್ಲೆಯ ಅರಣ್ಯ ಭೂಮಿ, ಮುಳುಗಡೆ ಸಂತ್ರಸ್ಥರ ಸಮಸ್ಯೆಗೆ ಸಂಬಂಧಿಸಿದಂತೆ ಚರ್ಚಿಸಲಾಯಿತು.

ಸಭೆಯಲ್ಲಿ ಸಚಿವರಿಬ್ಬರು ಭರವಸೆ ನೀಡಿದ್ದಾರೆ. ಈಗಾಗಲೇ ಶರಾವತಿ ಯೋಜನೆಯ ಮುಳುಗಡೆಯ ಸಂತ್ರಸ್ಥರ ಪುನರ್‌ವಸತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿಯನ್ನು ಸಲ್ಲಿಸಲಾಗಿದ್ದು, ನ್ಯಾಯಾಲಯದ ಮುಂದೆ ಪರಿಣಾಮಕಾರಿಯಾಗಿ ವಾದ ಮಂಡಿಸಲು ಅನುಭವಿ ನ್ಯಾಯವಾದಿಗಳ ತಂಡವನ್ನು ನಿಯಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲೆಯ ವಿವಿಧ ತಾಲ್ಲೂಕಿನ ವ್ಯಾಪ್ತಿಯಲ್ಲಿ 1978ರ ಮೊದಲು 3 ಎಕರೆ ಅರಣ್ಯ ಭೂಮಿ ಒತ್ತುವರಿ ಮಾಡಿರುವವರಿಗೆ ಸಕ್ರಮಗೊಳಿಸಲು, ಹಾಗೆಯೇ ಅರಣ್ಯ ವಾಸಿಗಳ ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಪಾರಂಪರಿಕ ಅರಣ್ಯವಾಸಿಗಳಿಗೆ ನಿಗದಿಪಡಿಸಿದ ಮೂರು ತಲೆಮಾರಿಗೆ ಬದಲಾಗಿ ಒಂದು ತಲೆಮಾರಿಗೆ ಇಳಿಸಲು ಕೂಡ ಭರವಸೆ ನೀಡಿದ್ದಾರೆ ಎಂದರು.

ಅಲ್ಲದೆ, ಜಿಲ್ಲೆಯ ಎಲ್ಲಾ ತಾಲೂಕಿನ ಕಂದಾಯ ಭೂಮಿಗಳಲ್ಲಿ ಅಧಿಸೂಚನೆಯಾಗದೇ ಇದ್ದರೂ ಕೂಡ ಸೂಚಿತ ಅರಣ್ಯ ಎಂದು ದಾಖಲಾಗಿದೆ. ಇದನ್ನು ಕೈಬಿಡು ವಂತೆ ಮನವಿ ಮಾಡಲಾಗಿದೆ. ತುಂಗಾ ಅಣೆಕಟ್ಟು ಯೋಜನೆಯ ಮುಳುಗಡೆ ಸಂತ್ರಸ್ಥರಿಗೆ ನೀಡಲಾದ ಜಮೀನುಗಳನ್ನು ಅರಣ್ಯ ಭೂಮಿ ಇಂಡೀಕರಣದಿಂದ ಕೈಬಿಡುವಂತೆ ಮನವಿ ಮಾಡಲಾಗಿದೆ.

ಜೊತೆಗೆ ಜಿಲ್ಲೆಯ ವಿವಿಧ ಜಲ ವಿದ್ಯುತ್ ಹಾಗೂ ನೀರಾವರಿ ಯೋಜನೆಯ ಮುಳುಗಡೆ ಸಂತ್ರಸ್ಥರ ಭೂ ಹಕ್ಕು ಮತ್ತು ಇತರೆ ಭೂ ಸಮಸ್ಯೆಗಳ ಪರಿಹಾರಕ್ಕಾಗಿ ವಿಶೇಷ ಕಾರ್ಯಪಡೆಯನ್ನು ನೇಮಿಸುವ ಬಗ್ಗೆಯೂ ಒತ್ತಾಯಿಸಲಾಗಿದೆ ಎಂದರು.

ರೈತರ ತೋಟಗಳಿಗೆ ಮಂಗಗಳ ಹಾವಳಿ ನಿಯಂತ್ರಣಕ್ಕೆ ಅಲ್ಟ್ರಾಸೌಂಡ್ ಮಂಕಿ ರೆಪೆಲರ್ ಅಳವಡಿಸಲು ಅನುಮತಿ ನೀಡುವ ಭರವಸೆಯನ್ನು ಕೂಡ ಸಚಿವರು ನೀಡಿದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರಾಜಣ್ಣ, ರಘುಪತಿ, ಜಿ.ಡಿ. ಮಂಜುನಾಥ್, ಗಿರಿಧರ್, ಶಿ.ಜು.ಪಾಶ, ಜೋಸೆಪ್ ಇದ್ದರು.ಡಿನೋಟಿಪೀಕೇಷನ್ ಭರವಸೆ

ಪ್ರಕರಣದಲ್ಲಿ ಸಂತ್ರಸ್ತರನ್ನು ಪಕ್ಷಗಾರರನ್ನಾಗಿ ಸೇರ್ಪಡೆ ಮಾಡಲು ಸಹಕಾರ ನೀಡುವುದಾಗಿ ಅರಣ್ಯ ಸಚಿವರು ಭರವಸೆ ನೀಡಿದ್ದಾರೆ. ಜಿಲ್ಲೆಯ ಚಕ್ರ-ಸಾವೆಹಕ್ಲು, ವರಾಹಿ, ತುಂಗಾ, ಭದ್ರಾ ಹಾಗೂ ಇನ್ನಿತರ ಜಲವಿದ್ಯುತ್ ಹಾಗೂ ನೀರಾವರಿ ಯೋಜನೆಗಳ ಮುಳುಗಡೆ ಸಂತ್ರಸ್ಥರ ಪುನರ್‌ ವಸತಿ ಹಾಗೂ ಪರಿಹಾರ ರೂಪವಾಗಿ ನೀಡಲಾದ ಭೂಮಿಗಳನ್ನು ಅರಣ್ಯ ಭೂಮಿ ಇಂಡೀಕರಣ ಪ್ರಾಸ್ತಾವನೆಯಿಂದ ಕೈಬಿಟ್ಟು ಡಿನೋಟಿಪೀಕೇಷನ್ ಮಾಡುವ ಬಗ್ಗೆಯೂ ಭರವಸೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.