ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಮಾನವನ ನೆಮ್ಮದಿಯ ಬದುಕಿಗೆ ಧರ್ಮ ಮತ್ತು ದೇವರು, ದೇವಾಲಯಗಳು, ಮಠಮಂದಿರಗಳು ತುಂಬಾ ಅವಶ್ಯಕವಾಗಿದ್ದು, ಪ್ರತಿಯೊಬ್ಬರು ಧರ್ಮದ ಹಾದಿಯಲ್ಲಿ ನಡೆಯುವ ಮೂಲಕ ಬದುಕನ್ನು ಹಸನಾಗಿಸಿಕೊಳ್ಳಬೇಕೆಂದು ತಾಲೂಕಿನ ಕೆರೆಗೋಡಿ ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.ತಾಲೂಕಿನ ಕರಡಿ ರಂಗನಾಥಪುರ ಗ್ರಾಮದ ಶ್ರೀ ಯಲ್ಲಮ್ಮದೇವಿ ದೇವಾಲಯದ 12ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು ನಮ್ಮ ಪೂರ್ವಿಕರು ಧರ್ಮ ಮಾರ್ಗದಲ್ಲಿ ನಡೆದು ದೇವರುಗಳನ್ನು ಭಯ ಭಕ್ತಿಯಿಂದ ಪೂಜಿಸುತ್ತಾ ಬದುಕಿನಲ್ಲಿ ನೆಮ್ಮದಿ ಕಂಡುಕೊಂಡಿದ್ದರು. ಯಾವುದೇ ಜಾತಿ ಮತ ದ್ವೇಷಗಳಿಲ್ಲದೆ ಸಾಮರಸ್ಯ, ಸಹಕಾರ ಪ್ರೀತಿ ವಿಶ್ವಾಸಗಳಿಂದ ಜೀವನ ಕಟ್ಟಿಕೊಂಡಿದ್ದರು. ಆದರೆ ನಾಗರೀಕತೆ ಬೆಳೆದಂತೆ ಜಗತ್ತಿನಲ್ಲಿ ಜನರು ದುಡಿಮೆಯ ಬೆನ್ನುಹತ್ತಿ ಹೆತ್ತವರನ್ನು ನಿರ್ಲಕ್ಷಿಸಿ ಅನಾಥರನ್ನಾಗಿಸುವ ಸಂಖ್ಯೆ ಹೆಚ್ಚುತ್ತಿದೆ.
ಸ್ವಾರ್ಥಪರ ಚಿಂತನೆ, ಬದುಕು ಕಟ್ಟಿಕೊಳ್ಳಲು ಅನ್ಯಮಾರ್ಗ ಹಿಡಿದು ವೈಭೋಗದ ಜೀವನದ ದಾಸರಾಗಿ ಇಳಿವಯಸ್ಸಿನ ತಂದೆ- ತಾಯಿಯರ ಯೋಗಕ್ಷೇಮ ನೋಡಿಕೊಳ್ಳದೆ ಸಂಕಷ್ಟಕ್ಕೆ ದೂಡುತ್ತಿರುವುದು ಕಳವಳ ಸಂಗತಿ. ಆದ್ದರಿಂದ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಸಂಸ್ಕೃತಿ, ಸಂಸ್ಕಾರಗಳನ್ನು ಕಲಿಸಿಕೊಟ್ಟು ಸಮಾಜವನ್ನು ಕಟ್ಟುವ ಧರ್ಮ, ದೇವರು, ಮಠಮಾನ್ಯಗಳನ್ನು ಗೌರವದಿಂದ ಕಾಣುವ ಮನೋಭಾವ ರೂಡಿಸಬೇಕಿದೆ ಎಂದ ಶ್ರೀಗಳು ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷರಾದ ಕರಡಿ ದೇವರಾಜು ಗ್ರಾಮಕ್ಕೆ ನೀಡುತ್ತಿರುವ ಸಹಕಾರ ಹಾಗೂ ಈ ಒಗ್ಗಟ್ಟು ಹೀಗೆ ಇರಲಿ ಎಂದು ಹಾರೈಸಿದರು.ಪ್ರಾಂಶುಪಾಲ ಕೆ.ಎನ್. ರೇಣುಕಯ್ಯ ಉಪನ್ಯಾಸ ನೀಡುತ್ತಾ, ಜಗತ್ತನ್ನು ಉದ್ಧಾರ ಮಾಡಲು ಯಲ್ಲಮ್ಮದೇವಿಯ ಕಾಳಿಯ ರೂಪವನ್ನು ತಾಳಿದ್ದಳು. ಅನ್ಯಾಯ, ಅಧರ್ಮವನ್ನು ಅಳಿಸುತ್ತಾ ಸತ್ಯ, ನಾಯ, ನೀತಿ, ಶಾಂತಿ, ಸಂಸ್ಥಾಪನೆಗಾಗಿ ಹಗಲಿರುಳು ಜಪ ಮಾಡಿದ್ದರು. ಸಂಸಾರ ಸಂಕಷ್ಟಗಳಿಗೆ ಹೆದರದೆ ಧೈರ್ಯದಿಂದ ಎದುರಿಸಿ ಅನುಭಾವ ಲೋಕಕ್ಕೆ ಪದಾರ್ಪಣೆ ಮಾಡಿ ಆಧ್ಯಾತ್ಮಿಕ ಜ್ಯೋತಿಗಳನ್ನು ನಾಡಿನೆಲ್ಲೆಡೆ ಹಚ್ಚಿ ಬೆಳೆಗಿಸಿ ದೇವಾಯಗಳಲ್ಲಿ ನೆಲೆ ನಿಂತಿದ್ದಾಳೆ. ಇಂತಹ ಶಕ್ತಿಮಾತೆ ಯಲ್ಲಮ್ಮಳ ಭಕ್ತಿಗೆ ನಾವೆಲ್ಲರೂ ತಲೆಬಾಗಿ ಸಾರ್ಥಕತೆ ಹೊಂದಬೇಕೆಂದರು.
ಕರಡಿ ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷ ಕೆ.ಆರ್. ದೇವರಾಜು ಮಾತನಾಡಿ, ಯಲ್ಲಮ್ಮದೇವಿ ದೇವಾಲಯ ನಿರ್ಮಾಣಕ್ಕೆ ಎಲ್ಲರೂ ತನು, ಮನ, ಧನ ಸೇರಿದಂತೆ ಎಲ್ಲ ಸಹಕಾರ ನೀಡಿದ ಪರಿಣಾಮ ಇಂದು ದೇವಾಲಯದ 12ನೇ ವರ್ಷ ವಾರ್ಷಿಕೋತ್ಸವ ಆಚರಣೆ ಮಾಡುತ್ತಿದ್ದು ಮುಂದೆಯೂ ಎಲ್ಲರು ಒಗ್ಗಟ್ಟಾಗಿ ನಿಲ್ಲಬೇಕು ಎಂದರು.ಸಮಾರಂಭದಲ್ಲಿ ಮಾಜಿ ಸಚಿವ ಬಿ.ಸಿ ನಾಗೇಶ್, ವೈದ್ಯ ಡಾ. ಶ್ರೀಧರ್ ಸಮಾಜ ಸೇವಕ ಬೋರ್‌ವೆಲ್ ಮಧುಸೂದನ್, ನಗರಸಭಾ ಸದಸ್ಯ ಶಶಿಕಿರಣ್, ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ನ್ಯಾಕೇನಹಳ್ಳಿ ವೀರಣ್ಣ, ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಕೆ.ಜಿ ರಂಗಸ್ವಾಮಿ, ದೇವಾಲಯದ ಕನ್ವೀನರ್ ಶ್ರೀನಿವಾಸ್ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು.
;Resize=(128,128))
;Resize=(128,128))